ಮೈಸೂರು(Mysuru): ಜಿಲ್ಲೆಯ 21 ಕೆರೆಗಳ ಮೇಲೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ಹಾರಿಸಿದ್ದ ಜಿಲ್ಲಾ ಪಂಚಾಯತ್ ಈಗ ಇದೇ ಮಾದರಿಯಲ್ಲಿ 44 ಕೆರೆಗಳಲ್ಲೂ ಗಣರಾಜ್ಯೋತ್ಸವ ಆಚರಿಸಲು ಸಿದ್ದಗೊಂಡಿದೆ. ಆ ಮೂಲಕ ಜಲ ಸಂರಕ್ಷಣೆಯ ನಮ್ಮ ಧ್ಯೇಯ ಎಂಬ ಸಂದೇಶ ಸಾರಲು ಹೊರಟಿದೆ.
2023ನೇ ಸಾಲಿನಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದ್ದ ಕರೆಗೆ ಒಗೊಟ್ಟು ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ 21 ಕೆರೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿ ಕೆರೆಯ ಹೂಳೆತ್ತುವ ಮೂಲಕ ಅಂತರ್ಜಲ ಹೆಚ್ಚಿಸುವ ಪ್ರಯತ್ನ ಯಶಸ್ವಿಯಾಗಿ ನಡೆದಿತ್ತು. ಈ ಬಗ್ಗೆ ಮತ್ತಷ್ಟು ಜನರಲ್ಲಿ ಜಲ ಭದ್ರತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ 21 ಕೆರೆಗಳಲ್ಲೂ ಸಾರ್ವಜನಿಕರ ಜತೆಗೂಡಿ ಸ್ವಾತಂತ್ರ್ಯೋತ್ಸವ ಆಚರಿಸಿ ಸಂಭ್ರಮಿಸಲಾಗಿತ್ತು.
ಅದರಂತೆ ಈ ಸಾಲಿನಲ್ಲೂ ವರ್ಷದ ಮೊದಲ ತಿಂಗಳು ಬಂದಿರುವ ಗಣರಾಜ್ಯೋತ್ಸವವನ್ನು ಅಂತರ್ಜಲ ಉಳಿಸುವ ಅಭಿಯಾನದಡಿಯಲ್ಲಿ ನರೇಗಾದ ನೆರವಿನೊಂದಿಗೆ ಪರಿಪೂರ್ಣ ಅಭಿವೃದ್ಧಿಗೊಂಡಿರುವ 33 ಕೆರೆಗಳು ಹಾಗೂ ಶೇ.50 ರಷ್ಟು ಅಭಿವೃದ್ಧಿ ಪಥದಂತ ಸಾಗಿರುವ 11 ಕೆರೆಗಳಲ್ಲೂ ಗಣರಾಜ್ಯೋತ್ಸವ ಆಚರಣೆಗೆ ಜಿಲ್ಲಾ ಪಂಚಾಯತ್ ಸಕಲ ಸಿದ್ದತೆ ನಡೆಸಿದೆ. ಆ ಮೂಲಕ ಈ ಬಾರಿಯ ಗಣರಾಜ್ಯೋತ್ಸವವನ್ನು ಮತ್ತಷ್ಟು ವಿಶೇಷದೊಂದಿಗೆ ಅರ್ಥಪೂರ್ಣವಾಗಿಸಲು ಮುನ್ನುಡಿ ಬರೆದಿದೆ.
ಇದೇ ವೇಳೆ ಧ್ವಜಾರೋಹಣ ನೆರವೇರಿಸುವ ಅಮೃತ ಸರೋವರದ ಅಂಗಳದಲ್ಲಿ ಸ್ಥಳೀಯ ಪ್ರೌಢಶಾಲಾ ಮಕ್ಕಳಿಗೆ ಕೆರೆಯ ಮಹತ್ವದ ಕುರಿತು ಚಿತ್ರಕಲೆ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಅಲ್ಲದೇ ಸಸಿ ನೆಡುವ ಹಾಗೂ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಸರಕಾರದ ನಿರ್ದೇಶನದಂತೆ ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾದಡಿ ನಡೆಯುತ್ತಿರುವ ಕೆರೆಗಳ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕ ತಿಳುವಳಿಕೆ ಹಾಗೂ ಒಗ್ಗೂಡಿಸಿಕೊಳ್ಳುವಿಕೆ ಭಾಗವಾಗಿ ಈ ಬಾರಿ ಗಣರಾಜ್ಯೋತ್ಸವವನ್ನು ಜಿಲ್ಲೆಯ 44 ಕೆರೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆಸಲಾಗಿದೆ.