ಮನೆ ಅಪರಾಧ ನಕಲಿ ಅಂಕಪಟ್ಟಿ ನೀಡುತ್ತಿದ್ದ 5 ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ: ಓರ್ವನ ಬಂಧನ

ನಕಲಿ ಅಂಕಪಟ್ಟಿ ನೀಡುತ್ತಿದ್ದ 5 ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ: ಓರ್ವನ ಬಂಧನ

0

ಬೆಂಗಳೂರು(Bengaluru): ರಾಜ್ಯ, ಹೊರರಾಜ್ಯದ ವಿವಿಧ ಯೂನಿವರ್ಸಿಟಿಗಳ ವಿವಿಧ ಕೋರ್ಸ್’ಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದ ಐದು ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿಕಾಸ್ ಭಾಗವತ್ ಎಂಬಾತನನ್ನು ಬಂಧಿಸಿದ್ದಾರೆ.

ಎಜುಕೇಶನ್ ಕನ್ಸಲ್ಟೆನ್ಸಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ರಾಜಾಜಿ ನಗರದ ಕ್ವೆಸ್ಟ್ ಟೆಕ್ನಾಲಜೀಸ್, ಜೆ.ಪಿ.ನಗರದ ಸಿಸ್ಟಂ ಕ್ವೆಸ್ಟ್, ಭದ್ರಪ್ಪ ಲೇಔಟಿನ ಆರೋಹಿ ಇನ್ಸಿಟಿಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್ ಹಾಗೂ ವಿಜಯನಗರದ ಬೆನಕಾ ಕರೆಸ್ಪಾಡೆನ್ಸ್ ಕಾಲೇಜ್‌ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಈ ಹಿಂದೆ ನಕಲಿ ಅಂಕಪಟ್ಟಿ ಜಾಲದ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಆರೋಪಿಗಳ ಮಾಹಿತಿಯನ್ವಯ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ದಾಳಿಯ ಬಳಿಕ ಪರಿಶೀಲನೆ ಸಂದರ್ಭದಲ್ಲಿ ಆರೋಪಿತ ಸಂಸ್ಥೆಗಳ ಬಳಿ ಅಣ್ಣಾಮಲೈ ಯೂನಿವರ್ಸಿಟಿ, ಸಿಕ್ಕಿಂ ಯೂನಿವರ್ಸಿಟಿ, ಗೀತಂ ಯೂನಿವರ್ಸಿಟಿ, ಕುವೆಂಪು ಯೂನಿವರ್ಸಿಟಿ, ಜೈನ್ ವಿಹಾರ್ ಯೂನಿವರ್ಸಿಟಿ, ಮಂಗಳೂರು ಯೂನಿವರ್ಸಿಟಿ, ಬೆಂಗಳೂರು ಯೂನಿವರ್ಸಿಟಿ ಸೇರಿದಂತೆ ಹದಿನೈದು ವಿವಿಧ ಯೂನಿವರ್ಸಿಟಿಗಳ 6,846 ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಆಯಾ ಯೂನಿವರ್ಸಿಟಿಗಳಿಗೆ ಅಂಕಪಟ್ಟಿಗಳನ್ನು ಕಳುಹಿಸಿ ಅವುಗಳು ನಕಲಿ ಎಂಬ ಮಾಹಿತಿ ಪಡೆದಿರುವ ಸಿಸಿಬಿ ಪೊಲೀಸರು, ಆರೋಪಿ ಸಂಸ್ಥೆಗಳ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

ಸದ್ಯ ಆರೋಪಿತ ಸಂಸ್ಥೆಗಳ ಬಳಿಯಿದ್ದ 22 ಲ್ಯಾಪ್‌’ಟಾಪ್‌’ಗಳು, 1 ಪ್ರಿಂಟರ್, 13 ಮೊಬೈಲ್ ಫೋನ್‌’ಗಳನ್ನು ವಶಕ್ಕೆ ಪಡೆಯಲಾಗಿದೆ.

ಇಂತಹ ಯಾವುದೇ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿ ಇದ್ದರೆ ತಿಳಿಸುವಂತೆ ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.