ಮೈಸೂರು(Mysuru): ಈಗಾಗಲೇ ಭತ್ತದ ಖರೀದಿ ಶುರುವಾಗಿದ್ದು, ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಕೃಷಿ ಮಾರುಕಟ್ಟೆ ನಿಗಮ ನಿಯಮಿತ ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ವಾರು ರೈತರ ನೋಂದಣಿ ವಿವರ, ಖರೀದಿ ಕೇಂದ್ರಗಳ ವಿವರ, ಭತ್ತ ಮತ್ತು ರಾಗಿಯನ್ನು ಸಂಗ್ರಹಣೆ ಮಾಡುವ ಗೋದಾಮುಗಳ ವಿವರ, ಖರೀದಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿರುವ ಗೋಣಿಚೀಲಗಳ ವಿವರ, ಖರೀದಿ ಕೇಂದ್ರದಲ್ಲಿ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳು, ಗ್ರೇಡಿಂಗ್ ಕಾರ್ಯನಿರ್ವಹಣೆ ಹಾಗೂ ದಾಸ್ತಾನು ಸಂಗ್ರಹಣೆ ಕುರಿತು ಮಾಹಿತಿ ಪರಿಶೀಲಿಸಿ, ಸಿಬ್ಬಂದಿಗಳು ಸರಿಯಾಗಿ ಸಮಯ ಪಾಲನೆ ಮಾಡಬೇಕು ಹಾಗೂ ರೈತರನ್ನು ಕಾಯಿಸಬಾರದು ಎಂದು ತಿಳಿಸಿದರು.
ರೈತರು ಖರೀದಿ ಕೇಂದ್ರದಲ್ಲಿ ಟೋಕನ್ ಪಡೆದು ಸೂಚಿತ ದಿನಾಂಕದಲ್ಲಿ ಭತ್ತ/ರಾಗಿಯನ್ನು ನೀಡಬೆಕಾಗಿರುತ್ತದೆ.ಗ್ರೇಡರ್ಸ್ ಗಳು 24 ಗಂಟೆ ಒಳಗೆ ತಮ್ಮ ಕಾರ್ಯವನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕೆಲಸದಿಂದ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಖರೀದಿಸುವವರು (ಮಾರ್ಕೆಟಿಂಗ್ ಬೋರ್ಡ್) ಹಾಗೂ ವೇರ್ ಹೌಸ್ ನವರು ತಮ್ಮ ಕೆಲಸವನ್ನು ಆರು ಗಂಟೆಯೊಳಗೆ ಪೂರ್ಣಗೊಳಿಸಬೇಕು. ಬಿಲ್ಲಿಂಗ್ ಕಾರ್ಯನಿರ್ವಹಣೆ ಮತ್ತು ರೈತರಿಗೆ ಹಣ ಪಾವತಿಸಲು ಅಗತ್ಯ ಕ್ರಮ ವಹಿಸಬೇಕು. ತಾಂತ್ರಿಕ ಸಮಸ್ಯೆ ಹೇಳಿ ರೈತರನ್ನು ಹಿಂದೆ ಕಳುಹಿಸಬಾರದು. ತಾಂತ್ರಿಕ ಸಮಸ್ಯೆಯಿದ್ದರೆ ರೈತರಿಗೆ ತಿಳಿಸಿ, ಸಮಸ್ಯೆ ಬಗ್ಗೆ ಹರಿದ ಮೇಲೆ ರೈತರನ್ನು ಕರೆಸಿಕೊಳ್ಳಬೇಕಾಗಿ ಸೂಚಿಸಿದರು.
ಗೋದಾಮುಗಳಲ್ಲಿ ಸ್ಟಾಕ್ ಬೋರ್ಡ್ ಗಳನ್ನು ಹಾಕಬೇಕು. ಆಹಾರ ಧಾನ್ಯದ ಗುಣಮಟ್ಟ ಹಾಳಾಗದಂತೆ ಕ್ರಮವಹಿಸಬೇಕು ಮತ್ತು ಖರೀದಿಯ ಬಗ್ಗೆ ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತಕ್ಕೆ ಪ್ರತಿದಿನ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಟಾಸ್ಕ್ ಫೋರ್ಸ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.