ಮನೆ ಕಾನೂನು ಅತ್ಯಾಚಾರ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಅತ್ಯಾಚಾರ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

0

ಅಹಮದಾಬಾದ್‌: ತಮ್ಮ ಮಾಜಿ ಶಿಷ್ಯೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಅವರಿಗೆ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ. ಸೋನಿ ಅವರು ವಾದ– ಪ್ರತಿವಾದ ಆಲಿಸಿದ ನಂತರ, ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

ಅಹಮದಾಬಾದ್ ಬಳಿಯ ಮೊಟೆರಾದಲ್ಲಿರುವ ಆಶ್ರಮದಲ್ಲಿ 2001ರಿಂದ 2006ರವರೆಗೆ ಆಸಾರಾಂ ಬಾಪು ಹಲವು ಸಂದರ್ಭಗಳಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರೆಂದು ಅವರ ಮಾಜಿ ಶಿಷ್ಯೆ 2013ರಲ್ಲಿ ವಿವಿಧ ಸೆಕ್ಷನ್‌’ಗಳಡಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಆಸಾರಾಂ ಬಾಪು ಅಪರಾಧಿ ಎಂದು ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದರು.

ಆರೋಪಿ ‘ಪುನರಾವರ್ತಿತ ಅಪರಾಧಿ’ಯಾಗಿದ್ದು, ಈತನಿಗೆ ಜೀವಾವಧಿ ಶಿಕ್ಷೆ ಮತ್ತು ಭಾರಿ ದಂಡ ವಿಧಿಸುವಂತೆ ಗಾಂಧಿನಗರದ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್‌ ಮನವಿ ಮಾಡಿತ್ತು. 81 ವರ್ಷದ ಆರೋಪಿ ಬಾಪು, ಸದ್ಯ ಜೋಧ್‌’ಪುರ ಜೈಲಿನಲ್ಲಿದ್ದಾರೆ.

ರಾಜಸ್ಥಾನದ ತಮ್ಮ ಆಶ್ರಮದಲ್ಲಿ ಬಾಲಕಿಯ ಮೇಲೆ 2013ರಲ್ಲಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಅಪರಾಧಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದ ಆಸಾರಾಂ ಅವರ ಪತ್ನಿ ಲಕ್ಷ್ಮಿಬೆನ್‌, ಪುತ್ರಿ ಹಾಗೂ ನಾಲ್ವರು ಶಿಷ್ಯರು ಸೇರಿ ಆರು ಮಂದಿಯನ್ನು ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ.