ಮನೆ ಸುದ್ದಿ ಜಾಲ ಗ್ಯಾಸ್ ಪೈಪ್ ಲೈನ್ ಯೋಜನೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ

ಗ್ಯಾಸ್ ಪೈಪ್ ಲೈನ್ ಯೋಜನೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ

0

ಮೈಸೂರು: ಮೈಸೂರಿನ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಇಂದು ಮೈಸೂರಿನ ಶ್ರೀ ಶಿವರಾತ್ರಿಶ್ವರ ವೃತ್ತದಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜನಪರ ಯೋಜನೆಗಳಲ್ಲಿ ಒಂದಾದ ಮನೆ ಮನೆಗೆ ಫೈಪ್ ಲೈನ್‍ಗಳ ಮೂಲಕ ಎಲ್ ಎನ್ ಜಿ ಅನಿಲ ಸರಬರಾಜು ಯೋಜನೆಯನ್ನು ಬೆಂಬಲಿಸಿ ಹಾಗು ಶೀಘ್ರ ಕಾಮಗಾರಿಯನ್ನು ಪ್ರಾರಂಭಿಸುವಂತೆ ನಾಗರಿಕರಿಂದ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿ ನಗರ ಪಾಲಿಕೆಯ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ಮಡಿವಾಳ ಮಹೇಶ್‍, ಪ್ರಧಾನ ಮಂತ್ರಿಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಒಂದು ನೈಸರ್ಗಿಕ ಅನಿಲವನ್ನು ಮನೆ ಮನೆಗೆ ಪೈಪ್ ಲೈನ್‍ಗಳ ಮೂಲಕ ವಿತರಿಸುವ ಯೋಜನೆಯೂ ಸಹ ಒಂದಾಗಿದೆ. ಭಾರತದಾದ್ಯಂತ ಇದನ್ನು ಕಾರ್ಯಗತ ಗೊಳಿಸಲು ಕೇಂದ್ರ ಸರ್ಕಾರ ಕ್ರಮವಹಿಸಿದ್ದು, ಪೈಲೆಟ್ ಪ್ರಾಜೆಕ್ಟ್‍ಆಗಿ ಈಗಾಗಲೇ ಈ ಯೋಜನೆಯು ಉತ್ತರ ಭಾರತದ ಹಲವು ನಗರಗಳಲ್ಲಿ ಹಾಗೂ ಕರ್ನಾಟಕದ ತುಮಕೂರಿನಲ್ಲಿ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ. ನಂತರ ಹಂತ ಹಂತವಾಗಿ ಕರ್ನಾಟಕದ ಮೈಸೂರು ಹುಬ್ಬಳ್ಳಿ, ಧಾರವಾಡ ಹಾಗೂ ಇನ್ನಿತರ ಕಡೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಈ ಯೋಜನೆ ಜಾರಿಗೆ ತರಬಾರದೆಂದು ಮೈಸೂರಿನ ಹಲವು ಜನಪ್ರತಿನಿಧಿಗಳು ತಡೆಯೊಡ್ಡಿರುವುದು ಅಕ್ಷಮ್ಯ ಅಪರಾಧ. ಇದು ಒಬ್ಬ ಸಂಸದರ ಯೋಜನೆಯಾಗಿರುವುದಿಲ್ಲ. ಇದು ಪ್ರಧಾನ ಮಂತ್ರಿಗಳ ದೂರದೃಷ್ಠಿತ್ವದಿಂದ ಯೋಜಿತವಾಗಿರುವಂತಹದ್ದು. ಇಂತಹ ಯೋಜನೆಯನ್ನು ವಿರೋಧಿಸುತ್ತಿರುವುದು ವಿಪರ್ಯಾಸ. ರಸ್ತೆಗಳ ಬಗ್ಗೆ 24*7 ರ ಜಸ್ಕೋದವರು ಅಗೆದಾಗ, ವಿವಿಧ ಟೆಲಿಪೋನ್ ಇಲಾಖೆಯವರು ಅಗೆದಾಗ, ಯುಜಿಡಿಗಾಗಿ ನಗರ ಪಾಲಿಕೆಯವರು ಅಗೆದಾಗ ಭೂಗತ ಕೇಬಲ್‍ಗಳನ್ನು ಅಳವಡಿಸಲು ಕೆ.ಇ.ಬಿಯವರು ಅಗೆದಾಗ ಇಲ್ಲದ  ಕಾಳಜಿ ಗ್ಯಾಸ್ ಪೈಪ್‍ಲೈನ್ ಅಳವಡಿಸುವಾಗ ಬಂದದ್ದಾದರೂ ಯಾಕೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಇಂದು ಮೂಡಿದೆ ಎಂದು ಹೇಳಿದರು.

ಈ ಗಾಗಲೇ ಮೈಸೂರುನಗರ ಒಳಚರಂಡಿ ಯೋಜನೆ, ಕುಡಿಯುವ ನೀರಿನ ಯೋಜನೆ, ಉತ್ತಮ ಪರಿಸರ, ಉತ್ತಮ ರಸ್ತೆಗಳು, ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ ದಶಪಥರಸ್ತೆ, ವಿಮಾನನಿಲ್ದಾಣ, ರೈಲ್ವೆ ಸಂಪರ್ಕ, ಶುಚಿತ್ವ ಇವೆಲ್ಲಕ್ಕೂ ಹೆಸರುವಾಸಿಯಾಗಿ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಇದೀಗ ಮನೆ ಮನೆಗೆ ಅನಿಲವಿತರಣೆಯ ಪೈಪ್‍ಲೈನ್ ಯೋಜನೆಯಿಂದ ಮೈಸೂರಿಗೆ ಮತ್ತೊಂದು ಗರಿ ಮೂಡಿದಂತಾಗುತ್ತದೆ.

ಇಂದು ಸಾರ್ವಜನಿಕರ ಗ್ಯಾಸ್ ಸಂಪರ್ಕ ಇದೀಗ 14 ಕೆ.ಜಿಯ ಒಂದು ಸಿಲಿಂಡರ್‍ಗೆ 1000ರೂ ಖರ್ಚುತಗಲುತ್ತಿದ್ದು, ಈ ಯೋಜನೆ ಜಾರಿಯಾದಲ್ಲಿ ಸುಮಾರು ಶೇ50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಯಾವುದಾದರೊಂದು ಯೋಜನೆ ಪ್ರಾರಂಭವಾದರೆ ಅವಘಡಗಳು ನಡೆಯುವುದು ಸಹಜ. ಹಾಗಂತ ಯೋಜನೆಯನ್ನೇ ಕೈಬಿಡಲು ಸಾಧ್ಯವಿರುವುದಿಲ್ಲ. ಜನಪ್ರತಿನಿಧಿಗಳು ಗುಣಕ್ಕೆ ಮತ್ಸರ ಪಡದೆ ಬಹುಪಯೋಗಿ ಯೋಜನೆಯನ್ನು ಜಾರಿಗೆ ತರಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಎಲ್ಲರೂ ಒಟ್ಟಾಗಿ ಸೇರಿ ಆಗು ಹೋಗುಗಗಳನ್ನು ಪರಿಶೀಲಿಸಿ ಯೋಜನೆ ಕಾರ್ಯಗತ ಮಾಡಲು ಶ್ರಮಿಸುವಂತೆ ಮೈಸೂರಿನ ನಾಗರಿಕರಾದ ನಾವು ಜನಪ್ರತಿನಿಧಿಗಳನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಹಾಗೂ ಇಂದು ನೂರಾರು ಸಾರ್ವಜನಿಕರಿಂದ ಸಂಗ್ರಹಿಸಿದ ಮನವಿಪತ್ರದ ಸಹಿಯನ್ನು ಮಾನ್ಯ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ನಾಗರೀಕ ಹೋರಾಟ ಸಮಿತಿಯ ಮಡಿವಾಳ ಮಹೇಶ್, ಆಟೋಚಾಲಕರ ಸಂಘದ ನಂಜುಂಡಸ್ವಾಮಿ, ಪ್ರಹಲ್ಲಾದ್, ಕೃಷ್ಣಪ್ರಸಾದ್, ಪಿ ಕೆ ಎಸ್ ರಾವ್, ವೈ ಜಿ ರಾವ್, ಹರಿಪ್ರಸಾದ್ ಹಾಗೂ ಹಲವು ಯುವಕರು, ನಾಗರೀಕರು ಉಪಸ್ಥಿತರಿದ್ದರು.

ಹಿಂದಿನ ಲೇಖನಭ್ರಷ್ಟಚಾರ ಆರೋಪ: ರವಿ ಡಿ ಚನ್ನಣ್ಣನವರ್ ಸ್ಪಷ್ಟನೆ
ಮುಂದಿನ ಲೇಖನ2019ರ ಮಿಸ್ ಅಮೇರಿಕಾ ಚೆಸ್ಲಿ ಕ್ರಿಸ್ಟ್ ಆತ್ಮಹತ್ಯೆ