ಮನೆ ಕ್ರೀಡೆ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಬೆಂಗಳೂರಿನಲ್ಲಿ 4 ದಿನಗಳ ತರಬೇತಿ ಶಿಬಿರ

ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಬೆಂಗಳೂರಿನಲ್ಲಿ 4 ದಿನಗಳ ತರಬೇತಿ ಶಿಬಿರ

0

ಬೆಂಗಳೂರು: ಭಾರತ ವಿರುದ್ಧ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಿಮಿತ್ತ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಬೆಂಗಳೂರಿನಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರ ನಡೆಸಲಿದೆ.

ಆ ಮೂಲಕ ನಾಗ್ಪುರದಲ್ಲಿ ಫೆಬ್ರವರಿ 9 ರಿಂದ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲಿದೆ.

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ನಿಮಿತ್ತ ಈ ಟೆಸ್ಟ್ ಸರಣಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಕಂಡೀಷನ್’ಗೆ ಹೊಂದಾಣಿಕೆ ಸಾಧಿಸುವ ಸಲುವಾಗಿ ಆಸ್ಟ್ರೇಲಿಯಾ ತಂಡ ಬೆಂಗಳೂರಿಗೆ ಆಗಮಿಸುತ್ತಿದೆ. ಬೆಂಗಳೂರಿನ ಹೊರವಲಯ ಆಲೂರಿನ ಕೆಎಸ್’ಸಿಎ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡ 4 ದಿನಗಳ ಕಾಲ ತರಬೇತಿ ಶಿಬಿರ ನಡೆಸಲಿದೆ.

ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಜನವರಿ 31 ರಂದು ಸಿಡ್ನಿಯಿಂದ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಆದರೆ, ಪ್ರವಾಸಿ ತಂಡ ಯಾವುದೇ ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಬಲಿಷ್ಠ ಭಾರತ ತಂಡದ ವಿರುದ್ದ ಆಡಬೇಕೆಂದರೆ ಆಸ್ಟ್ರೇಲಿಯಾ ತಂಡಕ್ಕೆ ಇಲ್ಲಿನ ಕಂಡೀಷನ್ಸ್’ಗೆ ಹೊಂದಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಹಾಗಾಗಿ ಕೆಲ ದಿನಗಳ ಕಾಲ ತರಬೇತಿ ಪಡೆಯುವುದು ತುಂಬಾ ಮುಖ್ಯ.

ನಾಗ್ಪುರ ಟೆಸ್ಟ್ ಪಂದ್ಯಕ್ಕೂ ಮುನ್ನ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿ ಕ್ಯಾಂಪ್ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐ ಬಳಿ ಮನವಿ ಸಲ್ಲಿಸಿತ್ತು. ವಿದರ್ಭ ಕ್ರಿಕೆಟ್ ಅಸೋಸಿಯೆಷನ್ ಮೈದಾನದ ಪಿಚ್ ಮೊದಲನೇ ಟೆಸ್ಟ್ ಆರಂಭಕ್ಕೂ ಮೂರು ದಿನಗಳ ಮುನ್ನ ಸಿದ್ದವಾಗಲಿದೆ.

“ಇಲ್ಲಿ ನೀವು ಅಭ್ಯಾಸ ಪಂದ್ಯವಾಡಿ, ಇಲ್ಲಿನ ಕಂಡೀಷನ್ಸ್’ಗೆ ಹೊಂದಿಕೊಳ್ಳಬಹುದು ಎಂದು ನಮಗೆ ಗ್ಯಾರೆಂಟಿ ಇಲ್ಲ. ಆದರೆ, ಭಾರತದ ಕಂಡೀಷನ್ಸ್’ಗೆ ಹೊಂದಿಕೊಳ್ಳಬಹುದೆಂಬ ಬಗ್ಗೆ ನಮಗೆ ವಿಶ್ವಾಸವಿದೆ. ಬೆಂಗಳೂರಿನಲ್ಲಿ ಸಂಗತಿಗಳನ್ನು ನಿಯಂತ್ರಿಸಿದರೆ, ನಾಗ್ಪುರದಲ್ಲಿಯೂ ನಿಯಂತ್ರಿಸಬಹುದು,” ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ಹೆಡ್ ಕೋಚ್ ಮೆಕ್ ಡೊನಾಲ್ಡ್ ಹೇಳಿದ್ದಾರೆ.