ಹೊಸದಿಲ್ಲಿ: ಕೇಂದ್ರ ಬಜೆಟ್ ನಲ್ಲಿ ಈ ಬಾರಿ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.
ಅದರಲ್ಲಿ ಮುಖ್ಯವಾಗಿ ಸಿರಿಧಾನ್ಯ ಉತ್ಪಾದನೆಗೆ ಒತ್ತು ನೀಡಿದ್ದು, ಅನೇಕ ಯೋಜನೆಗಳ ಮೂಲಕ ಸಣ್ಣ ರೈತರಿಗೆ ನೆರವು ನೀಡಲಾಗುತ್ತದೆ ಮತ್ತು ಹೈದರಾಬಾದ್ ನಲ್ಲಿ ಸಿರಿಧಾನ್ಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತವು ಇಡೀ ವಿಶ್ವಕ್ಕೆ ಸಿರಿಧಾನ್ಯಗಳನ್ನು ಮಹತ್ವದ ಕೊಡುಗೆಯನ್ನಾಗಿ ನೀಡಿದೆ. ಭಾರತವು ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವ ಜಗತ್ತಿನ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ಭಾರತದ ಪ್ರಯತ್ನದಿಂದ 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ವಿಶ್ವಸಂಸ್ಥೆ ಘೋಷಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ, ಭಾರತೀಯ ರೈತರಿಗೆ ಅಪೂರ್ವವಾದ ಅವಕಾಶವನ್ನು ಕೊಟ್ಟಿದೆ. ಸಿರಿಧಾನ್ಯಗಳನ್ನು ಬೆಳೆಸಲು ಅನೇಕ ಯೋಜನೆಗಳ ಮೂಲಕ ನೆರವು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ದೇಶದಲ್ಲಿರುವ 63,000 ಕೃಷಿ ಕೊಆಪರೇಟಿವ್ ಸೊಸೈಟಿಗಳನ್ನು ಕೇಂದ್ರೀಕೃತಗೊಳಿಸಲಾಗುತ್ತದೆ. ಇದಕ್ಕಾಗಿ 2,516 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗುತ್ತದೆ. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ ಎಂದು ಹೇಳಿದ್ದಾರೆ.
ಅವರು ಪ್ರಕಟಿಸಿದ ಯೋಜನೆಗಳ ಹೈಲೈಟ್ಸ್ ಇಲ್ಲಿದೆ.
• ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇನ್ನು ಒಂದೇ ಡಿಜಿಟಲ್ ಪ್ಲಾಟ್ ಫಾರಂನಲ್ಲಿ. ಇದಕ್ಕಾಗಿ, ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ಸ್ಥಾಪನೆ.
• 2024ರ ಹೊತ್ತಿಗೆ ಕೃಷಿ ಸಾಲವನ್ನು 20 ಲಕ್ಷ ಕೋಟಿ ರೂ.ಗಳಿಗೆ ಏರಿಸುವ ಸಾಧ್ಯತೆ.
• ನ್ಯಾಷನಲ್ ಮೊನೆಸ್ಟೈಸೇಷನ್ ಪೈಪ್ ಲೈನ್ ಯೋಜನೆಗೆ 9 ಸಾವಿರ ಕೋಟಿ ರೂ. ಹೂಡಿಕೆ.
• ’ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ‘ಗ್ರೀನ್ ಕ್ರೆಡಿಟ್’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ಕಂಪನಿಗಳಿಂದ ಪರಿಸರ ಸಂರಕ್ಷಣೆ ಕ್ರಮಗಳನ್ನು ಉತ್ತೇಜಿಸಲು ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ.