ಮನೆ ಸುದ್ದಿ ಜಾಲ ಹಲ್ಲರೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ದಿನಾಚರಣೆ

ಹಲ್ಲರೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ದಿನಾಚರಣೆ

0

ಮೈಸೂರು: ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮ ಪಂಚಾಯಿತಿಯ ರಾಜೀವ್ ಗಾಂಧಿ ಸೇವಾ ಕೇಂದ್ರ ಕಾಮಗಾರಿ ಸ್ಥಳದಲ್ಲಿ ಗುರುವಾರ ಮಹಾತ್ಮ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ದಿವಸವನ್ನು ಆಚರಣೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯು ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಯೋಜನೆಯು ವರದಾನವಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಂದು ಮನೆಯಲ್ಲೂ ಬಚ್ಚಲುಗುಂಡಿ ನಿರ್ಮಿಸಬೇಕು. ಮನೆ ಬಳಕೆಯ ತ್ಯಾಜ್ಯ ನೀರನ್ನು ಹೊರಗೆ ಬಿಡುವುದರಿಂದ ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ರೋಗ ರುಜಿನಗಳು ಹರಡಲು ಕಾರಣವಾಗುತ್ತದೆ. ಆದ್ದರಿಂದ ಬಚ್ಚಲುಗುಂಡಿ ಅಭಿಯಾನ ನಡೆಸಿ ಮುಂದಿನ ವರ್ಷದÀ ನರೇಗಾ ದಿನದೊಳಗೆ ಪ್ರತಿ ಮನೆಯಲ್ಲೂ ಬಚ್ಚಲುಗುಂಡಿ ನಿರ್ಮಾಣವಾಗಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಸ್ವಾಮಿ ಅವರು ಮಾತನಾಡಿ, ನರೇಗಾ ಯೋಜನೆಯು ಸರ್ಕಾರದ ಮಹತ್ವದ ಯೋಜನೆಯಾಗಿದೆ. ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅನೇಕ ನರೇಗಾ ಕಾಮಗಾರಿಗಳನ್ನು ಕೈಗೊಂಡು ಹೆಚ್ಚಿನ ಮಾನವ ದಿನಗಳ ಸೃಜನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯನ್ನು ಇನ್ನಷ್ಟು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕ ಆಸ್ತಿಗಳನ್ನು ಸೃಜನೆ ಮಾಡುತ್ತೇವೆ ಎಂದರು.

ರಂಗೋಲಿಯಲ್ಲಿ ಅರಳಿದ ನರೇಗಾ ಕಾಮಗಾರಿಗಳು:

ನರೇಗಾ ದಿನಾಚರಣೆ ಪ್ರಯುಕ್ತ ಎನ್.ಆರ್.ಎಲ್.ಎಂ. ಸಂಘದ ಮಹಿಳೆಯರು ಹಾಗೂ ಶಾಲಾ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ನರೇಗಾ ಯೋಜನೆಯ ಕೃಷಿಹೊಂಡ ಹಾಗೂ ಬಚ್ಚಲುಗುಂಡಿ ರಂಗೋಲಿ ಬಿಡಿಸಿ ಗಮನ ಸೆಳೆದರು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಗುರುಮಹದೇವು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರದರಾಜು, ಎನ್.ಆರ್.ಎಲ್.ಎಂ. ಹರೀಶ್, ಸೇರಿದಂತೆ ತಾಲ್ಲೂಕಿನ ಎಲ್ಲಾ ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.