ಮನೆ ದೇವರ ನಾಮ ನೀನೆ ದಯಾಳೊ ನಿರ್ಮಲಚಿತ್ತ

ನೀನೆ ದಯಾಳೊ ನಿರ್ಮಲಚಿತ್ತ

0

ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ

ನಿಗಮಗೋಚರ ಮುಕುಂದ ।।

ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು

ಮಾನದಿಂದಲಿ ಕಾವ ಧೊರೆಗಳ ನಾ ಕಾಣೆ ।।

ದಾನವಾಂತಕ ದೀನಜನಮಂದಾರನೆ

ಧ್ಯಾನಿಪರ ಮನಸಂಚಾರನೆ ।

ಮೌನವಾದೆನು ನಿನ್ನ ಧ್ಯಾನಾನಂದದಿ ಈಗ

ಸಾನುರಾಗದಿ ಕಾಯೊ ಸನಕಾದಿವಂದ್ಯನೆ ।।

ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ

ಖಗಪತಿವಾಹನನೆ ।

ಮಗುವಿನ ಮಾತೆಂದು ನಗುತ ಕೇಳುತ ಬಂದೆ

ಬೇಗದಿಂದಲಿ ಕಾಯೊ ಸಾಗರಶಯನನೆ ।।

ಮಂದರಧರ ಅರವಿಂದಲೋಚನ ನಿನ್ನ

ಕಂದನೆಂದೆಣಿಸೊ ಎನ್ನ ।

ಸಂದೇಹವೇಕಿನ್ನು ಸ್ವಾಮಿ ಮುಕುಂದನೆ

ಬಂದೆನ್ನ ಕಾಯೊ ಶ್ರೀಪುರಂದರವಿಠಲ ।।

ರಚನೆ : ಶ್ರೀ ಪುರಂದರ ದಾಸರು