ಮನೆ ಕಾನೂನು ದೇಶದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳ ಕೊರತೆ: ಸುಪ್ರೀಂ ಕೋರ್ಟ್ ಆತಂಕ

ದೇಶದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳ ಕೊರತೆ: ಸುಪ್ರೀಂ ಕೋರ್ಟ್ ಆತಂಕ

0

ಅಪರಾಧ ತನಿಖೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ದೇಶದ ವಿಧಿ ವಿಜ್ಞಾನ ಪ್ರಯೋಗಾಲಯಗಳ (ಎಫ್ಎಸ್ಎಲ್) ನ್ಯೂನತೆಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

Join Our Whatsapp Group

ಭಾರತದಲ್ಲಿ ಸಾಕಷ್ಟು ವಿಧಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಸುಧಾಂಶು ಧುಲಿಯಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ತ್ರಿಸದಸ್ಯ ಪೀಠ ತಿಳಿಸಿತು.

ಬಹುತೇಕ ರಾಜ್ಯಗಳು ನ್ಯಾಯಾಲಯದ ಆದೇಶದ ಬಳಿಕವಷ್ಟೇ ಪ್ರಯೋಗಾಲಯಗಳನ್ನು ಸ್ಥಾಪಿಸುತ್ತಿದ್ದು ಅಸಮರ್ಪಕ ಮೂಲಸೌಕರ್ಯಗಳ ಜೊತೆಗೆ, ವಿಶ್ವಾಸಾರ್ಹ ವಿಧಿವಿಜ್ಞಾನ ವಿಶ್ಲೇಷಣೆ ನಡೆಸುವ ನುರಿತ ತಜ್ಞರ ಆತಂಕಕಾರಿ ಎನಿಸುವಷ್ಟು ಕೊರತೆ ಇದೆ ಎಂದು ಅದು ಹೇಳಿದೆ.

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ ಕೇವಲ ಎರಡು ಪ್ರಯೋಗಾಲಯಗಳಿವೆ. ಪಂಜಾಬ್ ಮತ್ತು ಉತ್ತರಾಖಂಡವೂ ಇಂತಹ ಸ್ಥಿತಿಗೆ ಹೊರತಲ್ಲ. ಕಡಿಮೆ ಸಂಖ್ಯೆಯ ಪ್ರಯೋಗಾಲಯಗಳಲ್ಲಿ ಸಾಕಷ್ಟು ಕೆಲಸದ ಹೊರೆ ಇರುತ್ತದೆ. ರಾಜ್ಯಗಳು ಆದೇಶ ಪಾಲನೆಗೆ ಸಂಬಂಧಿಸಿದಂತೆ ಏನು ಮಾಡಿವೆ ಎಂಬುದನ್ನು ನೋಡಬೇಕಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್ಎಸ್ಎಲ್ ವರದಿಗಳನ್ನು ಸಲ್ಲಿಸುವಲ್ಲಿ ವಿಳಂಬವಾದರೆ ಉಂಟಾಗುವ ಪರಿಣಾಮಗಳನ್ನು ಪರಿಶೀಲಿಸಲು ಬಯಸುವುದಾಗಿ ನ್ಯಾಯಾಲಯ ಅಂತಿಮವಾಗಿ ಹೇಳಿದ್ದು ಈ ಅಂಶದ ಬಗ್ಗೆ ಸಹಾಯವನ್ನು ಅದು ಕೋರಿದೆ. ಅಂತೆಯೇ ಪ್ರತಿಕ್ರಿಯೆಗಳನ್ನು ಕ್ರೋಡೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ವಕೀಲರಾದ ಅಶಿಮಾ ಮಂಡ್ಲಾ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.

ಎಫ್ಎಸ್ಎಲ್ ವೃತ್ತಿಪರರ ಕೊರತೆಯಿಂದ ಉಂಟಾಗುವ ವಿಳಂಬ ಆರೋಪಿಗಳು ಮತ್ತು ಪ್ರಾಸಿಕ್ಯೂಷನ್ ಎರಡರ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತವೆ. ಇದು ನ್ಯಾಯಾಲಯದ ಅವಲೋಕನದ ಮೇಲೂ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

ತಜ್ಞ ವಿಧಿ ವಿಜ್ಞಾನ ಸಿಬ್ಬಂದಿಗಾಗಿ ವಿಶೇಷ ಶೈಕ್ಷಣಿಕ ಕೋರ್ಸ್ಗಳು ಮತ್ತು ತರಬೇತಿ ಯೋಜನೆಗಳು ಇವೆಯೇ ಎಂತಲೂ ನ್ಯಾಯಾಲಯ ಪ್ರಶ್ನಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 11ರಂದು ನಡೆಯಲಿದೆ.

ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌ ಕಾಯಿದೆ) ಅಡಿಯ ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ಇಲ್ಲದೆ ಸಲ್ಲಿಸುವ ಆರೋಪಪಟ್ಟಿಗಳನ್ನು ಸಿಆರ್‌ಪಿಸಿ ಅಡಿ ಅಪೂರ್ಣ ವರದಿ ಎಂದು ಕರೆಯಬಹುದೇ ಎಂಬ ಕಾನೂನು ಪ್ರಶ್ನೆಯನ್ನು ಒಳಗೊಂಡ ಪ್ರಕರಣ ಇದಾಗಿದೆ.

ಮಾದಕ ದ್ರವ್ಯ ಹೊಂದಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರಿಗೆ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ರಾಜ್ಯಗಳು ಪ್ರಯೋಗಾಲಯ ಸ್ಥಾಪನೆ ಜೊತೆಗೆ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿವೆಯೇ? ಅಂತಹ ಪ್ರಯೋಗಾಲಯಗಳ ಪ್ರಸ್ತುತ ಸ್ಥಿತಿ; ನಿಗದಿತ ಅವಧಿಯೊಳಗೆ ಎಫ್ಎಸ್ಎಲ್/ಪರೀಕ್ಷಕರ ವರದಿಗಳನ್ನು ಸಲ್ಲಿಸಲು ಸಮರ್ಥ ವಿಧಾನದ ರಚನೆಯಾಗಿದೆಯೇ? ನಿಷಿದ್ಧ ವಸ್ತುಗಳ ಸಮರ್ಪಕ ಸಂಗ್ರಹಕ್ಕಾಗಿ ಶೇಖರಣಾ ಸೌಲಭ್ಯ ಸ್ಥಾಪನೆಗೆ ನಿರ್ದೇಶನ ನೀಡಿ ಭಾರತ ಒಕ್ಕೂಟ ಮತ್ತು ಮೋಹನ್‌ಲಾಲ್‌ ಇನ್ನಿತರರ ನಡುವಣ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಆದೇಶ ಪಾಲನೆಯಾಗಿದೆಯೇ? ಎಂಬ ವಿಚಾರವಾಗಿಯೂ ನ್ಯಾಯಾಲಯ ಪರಿಶೀಲಿಸಲಿದೆ.