ಮಂಡ್ಯ : ನಮ್ಮ ಗುರಿ 123 ಸೀಟ್ ಇದೆ. ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಮೊದಲ ಸ್ಥಾನದಲ್ಲಿರಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಯುವ ಘಟಕದ ಅಧ್ಯಕ್ಷ. ನನಗೆ ಯುವಕರ ಸಂಘಟನೆ ಮಾಡಲು ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರದ್ದು ಏಕಾಂಗಿ ಹೋರಾಟವಾಗಿದೆ. ಈ ಏಕಾಂಗಿ ಹೋರಾಟಕ್ಕೆ ಯುವಕರ ಸಂಘಟನೆ ಮಾಡೋ ಕೆಲಸ ನಾನು ಮಾಡುತ್ತಿದ್ದೇನೆ ಎಂದು ಹೇಳಿದರು.
ಆ ತಾಯಿ ಬಗ್ಗೆ ಮಾತನಾಡಲ್ಲ:
ನಿಖಿಲ್ ಇಮ್ಮೆಚ್ಚುರ್ ಎಂಬ ಸುಮಲತಾ ಅಂಬರೀಶ್ ಹೇಳಿಕೆಗೆ ಮಂಡ್ಯದಲ್ಲಿಂದು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಹಿಂದಿನ ಚುನಾವಣೆ ಸಂದರ್ಭದಲ್ಲಿ ಕೂಡ ಆ ತಾಯಿ ಬಗ್ಗೆ ಮಾತನಾಡಿಲ್ಲ. ಮುಂದೆಯೂ ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ
ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಣ್ಣ ಎಷ್ಟು ಕಡೆ ಅಂತ ಸ್ಪರ್ಧೆ ಮಾಡಲು ಸಾಧ್ಯ. ರಾಮನಗರ ಕ್ಷೇತ್ರ ಉಳಿಸಬೇಕು ಎಂಬ ನಿಟ್ಟಿನಲ್ಲಿ 2018ರಲ್ಲಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದರು. ಈಗ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಅವರ ಸ್ಪರ್ಧೆ ಚನ್ನಪಟ್ಟಣದಲ್ಲಿ ಮಾತ್ರ ಎಂದು ಸ್ಪಷ್ಟಪಡಿಸಿದರು.
ಮತ್ತೆ ಮಂಡ್ಯ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವ ಸವಾಲಿನ ಕುರಿತು ಪ್ರತಿಕ್ರಿಯಿಸಿ, 2024ರ ಎಂಪಿ ಚುನಾವಣೆಯಲ್ಲಿ ಸಾಧಾರಣ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ನಾವು ಸವಾಲು ಹಾಕಿದ್ದೇವೆ. ಎಂಪಿ ಚುನಾವಣೆ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ 2024ರ ಎಂಪಿ ಚುನಾವಣೆ ಹೇಗೆ ಮಾಡುತ್ತೇವೆ ನೋಡುತ್ತಿರಿ. ರಾಜಕೀಯ ಷ್ಯಡ್ಯಂತರದಿಂದ ನಿಖಿಲ್ ಕುಮಾರಸ್ವಾಮಿ ಸೋತಿದ್ದು, ಅವತ್ತು ಜನ ನನಗೆ ಆಶಿರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಚೆನ್ನಪಟ್ಟಣದಲ್ಲಿ ರಮ್ಯಾ ಸ್ಪರ್ಧೆ ಕುರಿತು ಚರ್ಚೆ ಕುರಿತು ಮಾತನಾಡಿ, ಇದೆಲ್ಲ ಸುಳ್ಳು ಸುದ್ದಿ, ಮಾಧ್ಯಮಗಳು ಕ್ರಿಯೇಟ್ ಮಾಡಿವೆ ಅಷ್ಟೇ. ರಮ್ಯಾ, ನನ್ನ ಬಾಂಡಿಂಗ್ ಚೆನ್ನಾಗಿದೆ ಅವರು ಚೆನ್ನಪಟ್ಟಣಕ್ಕೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಸಿ.ಪಿ.ಯೋಗೀಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಪಿವೈ ಹತಾಶರಾಗಿದ್ದಾರೆ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.. ಒಂದೊಂದು ಸರಿ ಒಂದೊಂದು ಹೇಳಿಕೆ ಕೊಡುತ್ತಲೆ ಇದ್ದಾರೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಕುದುರೆ ಏರಲಿಲ್ಲ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿ, ಕುದುರೆಯನ್ನು ಕೊಟ್ಟರು ಆದರೆ ನಾಲ್ಕು ಕಾಲು ಕತ್ತರಿಸಿ ಕೊಟ್ಟರು. ನಾಲ್ಕು ಕಾಲು ಕಿತ್ತು ಕುದುರೆ ಸವಾರಿ ಮಾಡು ಅಂದ್ರೆ ಹೇಗೆ ಮಾಡಲು ಸಾಧ್ಯ ಎಂದು ತಿರುಗೇಟು ನೀಡಿದರು.