ಮನೆ ಭಾವನಾತ್ಮಕ ಲೇಖನ ನನ್ನ ನಾನು ತಿಳಿಯುವುದೆಂತು ?

ನನ್ನ ನಾನು ತಿಳಿಯುವುದೆಂತು ?

0

ಬದುಕಲಿಕ್ಕೊಂದು ಭ್ರಾಂತಿ ಬೇಕಾಗುತ್ತದೆ. ಪ್ರಜೆಗಳಿಗೂ, ಸುಲ್ತಾನರಿಗೂ. ಹಾಗೆನ್ನುತ್ತದೆ ಕಾರ್ನಾಡರ ‘ರಾಕ್ಷಸತಂಗಡಿ’ ನಾಟಕದ ಒಂದು ಪಾತ್ರ. ಹೌದು, ಒಬ್ಬೊಬ್ಬರು ಸದಾ ಒಂದೊಂದು ಭ್ರಾಂತಿಯಲ್ಲೇ ಇರುತ್ತಾರೆ. ಕೆಲವರಿಗೆ ತಾವೇನೋ ಸಾಧಿಸಿದೆವೆನ್ನುವ, ಇನ್ನು ಕೆಲವರಿಗೆ ತಾವು ಯಾರನ್ನೋ ಸೋಲಿಸಿದೆವೆನ್ನುವ, ಇನ್ನು ಹಲವರಿಗೆ ತಾವು ಸಮಾಜವನ್ನು ಬದಲಾಯಿಸಿಬಿಡುತ್ತೇವೆನ್ನುವ, ಇನ್ನುಳಿದವರಿಗೆ ತಾವು ತುಂಬ ಸುಖ-ಸಂತೋಷದಿಂದ ಬದುಕುತ್ತಿದ್ದೇವೆನ್ನುವ ಭ್ರಾಂತಿ. ಸ್ವಲ್ಪ ಮಟ್ಟಿಗೆ ಇವೆಲ್ಲಬೇಕು. ಭ್ರಾಂತಿಯಿಂದ ಚಿಂತೆ ದೂರವಾಗುವುದಿದ್ದರೆ, ನಿರಾಸೆ ಒತ್ತಟ್ಟಿಗೆ ಸರಿಯುವುದಿದ್ದರೆ, ದುಃಖ ಕ್ಷಣಕಾಲ ಮರೆಯಾಗುವುದಿದ್ದರೆ, ಒಂದಷ್ಟು ಹುಮ್ಮಸ್ಸು-ಉತ್ಸಾಹ ಬೆನ್ನಿಗೆ ನಿಲ್ಲುವುದಿದ್ದರೆ ಕೊಂಚ ಭ್ರಾಂತಿ ಇದ್ದರೆ ಒಳ್ಳೆಯದು. ಆದರೆ ಭ್ರಾಂತಿಯೇ ಬದುಕಾಗಬಾರದಲ್ಲ!

‘ನಾನು ಯಾರು?’ ಎಂಬ ಪ್ರಶ್ನೆಯನ್ನು ಎಂದಾದರೂ ನಾವು ಅಂತರ್ಯಕ್ಕೆ ಕೇಳಿಕೊಂಡದ್ದಿದೆಯೇ? ಹಾಗೆ ಕೇಳಿಕೊಂಡರೆ ಮೊದಲ ಉತ್ತರವಾಗಿ ನಮ್ಮ ಹೆಸರು ಬರಬಹುದು. ಅದು ನಮ್ಮ ಹೆಸರಾಯಿತೇ ಹೊರತು ನಾವು ಯಾರೆಂದು ಹೇಳಿದಂತಾಗಲಿಲ್ಲಅಲ್ಲವೇ? ನಮ್ಮ ಹೆಸರನ್ನು ಬದಲಾಯಿಸಿಕೊಂಡರೆ ನಾವು ಬದಲಾಗುತ್ತೇವೆಯೇ? ಇಲ್ಲ. ಹೆಸರು ಮಾತ್ರ ಬದಲಾಗುವುದು; ನಾವು ಹಾಗೆಯೇ ಉಳಿಯುತ್ತೇವೆ. ಹಾಗಾದರೆ ನಾವೆಂದರೆ ನಮ್ಮ ಹೆಸರಲ್ಲಎಂದಾಯಿತು.

ಮತ್ತೆ ಪ್ರಶ್ನಿಸಿದರೆ ನಾನು ಇಂಥವರ ಮಗ ಅಥವಾ ಮಗಳು ಎಂದೋ, ಇಂಥ ಕುಟುಂಬಕ್ಕೆ ಸೇರಿದವರು ಎಂದೋ, ಇಂಥ ಜಾತಿ ಅಥವಾ ಪಂಗಡದವರು ಎಂದೋ, ಇಂಥ ಊರಿನವರು ಎಂದೋ, ಇಂಥ ಉದ್ಯೋಗದಲ್ಲಿರುವವರು ಎಂದೋ- ನಾನಾ ಉತ್ತರಗಳು ಬರುತ್ತಲೇ ಇರಬಹುದು. ಅವೆಲ್ಲನಮ್ಮ ವಿಳಾಸದ ವಿಚಾರವಾಯಿತೇ ಹೊರತು ನಾವು ಯಾರು ಎಂದು ಸಿದ್ಧಪಡಿಸಿದಂತೆ ಆಗಲಿಲ್ಲ.

ಹೆಚ್ಚೆಂದರೆ ಎಲ್ಲವಕ್ಕೂ ಒಂದೊಂದು ಗುರುತಿನ ಪತ್ರವನ್ನು ತಂದು ತೋರಿಸಬಹುದು. ಮಳೆಯಲ್ಲಿನೆನೆದರೆ, ಬೆಂಕಿಯಲ್ಲಿಬೆಂದರೆ ಆ ಗುರುತಿನ ಪತ್ರ ಉಳಿಯುವುದಿಲ್ಲ. ಮತ್ತೆ ಹೊಸದಾಗಿ ಮಾಡಿಸಬೇಕು. ಗುರುತಿನ ಪತ್ರ ಇಲ್ಲದೆಯೇ ನಮ್ಮನ್ನು ನಾವು ಉದ್ಘಾಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೇ?

ಸಮಾಜದಲ್ಲಿನಾವು ವಿವಿಧ ಅಸ್ಮಿತೆಗಳಿಂದ ಗುರುತಿಸಿಕೊಳ್ಳುತ್ತೇವೆ: ತಂದೆ, ಗಂಡ, ಹೆಂಡತಿ, ಪ್ರಯಾಣಿಕ, ಗೆಳೆಯ, ಅಧ್ಯಾಪಕ… ಮಕ್ಕಳಿರುವುದರಿಂದ ತಂದೆ, ಹೆಂಡತಿಯಿರುವುದರಿಂದ ಗಂಡ, ಗಂಡ ಇರುವುದರಿಂದ ಹೆಂಡತಿ, ಪಾಠ ಮಾಡುತ್ತಿರುವುದರಿಂದ ಅಧ್ಯಾಪಕ, ಬಸ್ಸಿನಲ್ಲಿರುವುದರಿಂದ ಪ್ರಯಾಣಿಕ. ಅಂದರೆ ಅವೆಲ್ಲನಾವಿರುವ ಪರಿಸರ ಅಥವಾ ಸ್ಥಾನದಿಂದಾಗಿ ಅಥವಾ ನಾವು ನಿರ್ವಹಿಸುತ್ತಿರುವ ಕಾರ್ಯದಿಂದಾಗಿ ಒದಗಿರುವ ಉಪಾಧಿಧಿಗಳೇ ಹೊರತು ನಿಜವಾದ ಅಸ್ಮಿತೆಗಳಲ್ಲ. ಪಾತ್ರಗಳು ಬದಲಾದಂತೆ ನಮ್ಮ ಉಪಾಧಿಧಿಗಳು, ಅಸ್ಮಿತೆಗಳು ಬದಲಾಗುತ್ತಾ ಹೋಗುತ್ತವೆ. ಹೊಸ ಉಪಾಧಿಧಿಗಳು ಬಂದಂತೆಲ್ಲವಾಸ್ತವದಿಂದ ದೂರ ಸರಿಯುತ್ತಲೇ ಇರುತ್ತೇವೆ.

ಹಾಗಾದರೆ ‘ನಾನು ಯಾರು?’ ಮತ್ತದೇ ಪ್ರಶ್ನೆ. ಈ ಪ್ರಶ್ನೆಯನ್ನು ಮನಸ್ಸಿಗೆ ಮತ್ತೆ ಮತ್ತೆ ಕೇಳಿದಾಗೆಲ್ಲಸತ್ಯದ ಅರಿವಾಗುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯಷ್ಟೇ ಅಲ್ಲದೆ, ನಮ್ಮ ಇತಿಮಿತಿಗಳೂ ಅರ್ಥವಾಗುತ್ತಾ ಹೋಗುತ್ತವೆ. ನಾವು ಏನು ಎಂದು ತಿಳಿಯುವಷ್ಟೇ ನಾವು ಏನಲ್ಲಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ನಾವು ಏನು ಮತ್ತು ಏನಲ್ಲಎಂದು ತಿಳಿದುಕೊಳ್ಳುವುದಕ್ಕೆ ಸ್ವಸ್ಥಾನಪರಿಜ್ಞಾನವೆಂದು ಹೆಸರು. ಬದುಕಿನಲ್ಲಿಎದುರಾಗುವ ಹಲವು ದುಃಖ, ಸಂಕಟಗಳಿಗೆ ಸ್ವಸ್ಥಾನಪರಿಜ್ಞಾನ ಇಲ್ಲದಿರುವುದೇ ಕಾರಣ.

ಬೀಗಿದಷ್ಟೂ ಬಾಗುವುದು ಕಷ್ಟ

ಶ್ರೀಮಂತಿಕೆಯಿದೆಯೆಂದು ಬೀಗುತ್ತೇವೆ. ತುಂಬ ಸಂಪಾದಿಸಿದ್ದೇವೆ ಎಂದು ಬೀಗುತ್ತೇವೆ. ಜನಪ್ರಿಯರಾಗಿದ್ದೇವೆ ಎಂದು ಬೀಗುತ್ತೇವೆ. ಹಲವು ಪ್ರಶಸ್ತಿ-ಪದವಿಗಳನ್ನು ಪಡೆದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಬೀಗಿದಷ್ಟೂ ಬಾಗುವುದು ಕಡಿಮೆಯಾಗುತ್ತದೆ. ಬಾಗದೇ ಹೋದರೆ ಕೆಲವೊಮ್ಮೆ ಫಟ್ಟನೆ ತುಂಡಾಗಿಬಿಡುವುದೂ ಇದೆ. ಸಾಧನೆಯ ತುತ್ತತುದಿಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿರುವಾಗಲೇ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಪ್ರಪಾತಕ್ಕೆ ಬಿದ್ದಿರುತ್ತೇವೆ.

ಕೆಲವೊಮ್ಮೆ ತುಂಬ ಕೊರಗುತ್ತೇವೆ. ಎಷ್ಟು ವರ್ಷ ದುಡಿದರೂ ಬದುಕಿನ ಬಂಡಿ ಒಂದು ಹದಕ್ಕೆ ಬಂದಿಲ್ಲವೆಂದೋ, ಎಷ್ಟು ಸಂಪಾದಿಸಿದರೂ ಕೈಯಲ್ಲೊಂದು ಕಾಸೂ ಉಳಿಯುತ್ತಿಲ್ಲವೆಂದೋ, ಕಷ್ಟಗಳೆಲ್ಲನಮಗೇ ಬರುತ್ತಿವೆ ಎಂದೋ, ಮಕ್ಕಳು ಮಾತನ್ನು ಕೇಳುತ್ತಿಲ್ಲಎಂದೋ, ಉಪಕಾರ ಪಡೆದುಕೊಂಡವರೆಲ್ಲತಿರುಗಿಬಿದ್ದಿದ್ದಾರೆಂದೋ, ಸುತ್ತಮುತ್ತಲಿನವರೆಲ್ಲನಮ್ಮ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆಂದೋ ಕೊರಗುತ್ತಲೇ ಇರುತ್ತೇವೆ. ಯಾವುದೋ ಒಂದು ದಿನ ಎಲ್ಲಕೊರಗುವಿಕೆಗಳೂ ಏಕಾಏಕಿ ಮಾಯವಾಗಿ ಸಂತೋಷದ ಉತ್ತುಂಗಕ್ಕೆ ತಲುಪಿರುತ್ತೇವೆ.

ಅಂದರೆ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತವಾದದ್ದು. ಬದುಕೊಂದು ಜಲಚಕ್ರ. ಕೆಳಗಿರುವುದು ಮೇಲೇರುತ್ತದೆ. ಮೇಲೇರಿದ್ದು ಕೆಳಗಿಳಿಯುತ್ತದೆ. ಇದು ಸಂಪೂರ್ಣ ಅರ್ಥವಾದಾಗ ಭ್ರಾಂತಿ ತೊಲಗುತ್ತದೆ. ಯಾರೋ ಔಪಚಾರಿಕತೆಗಾಗಿಯೋ, ಸ್ವಂತ ಲಾಭಕ್ಕಾಗಿಯೋ ನಮ್ಮನ್ನು ಬಹುವಾಗಿ ಹೊಗಳಿ ಉಬ್ಬಿಸಲು ಪ್ರಯತ್ನಿಸಬಹುದು. ಇನ್ಯಾರೋ ಮತ್ಸರದಿಂದಲೋ, ಘಾತಿಸುವ ಉದ್ದೇಶದಿಂದಲೋ ನಮ್ಮಲ್ಲಿನಿರಾಶೆಯನ್ನು ತುಂಬಲು ಪ್ರಯತ್ನಿಸಬಹುದು. ಸ್ವಸ್ಥಾನಪರಿಜ್ಞಾನವುಳ್ಳವನು ಹೊಗಳಿಯಿಂದ ಹಿಗ್ಗುವುದೋ, ನಿಂದೆಯಿಂದ ಕುಗ್ಗುವುದೋ ಆಗಬಾರದು. ತನ್ನ ಸಾಮರ್ಥ್ಯ ಮತ್ತು ಮಿತಿಗಳ ಅರಿವು ಇರುವವನಿಗೆ ಇವುಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ. ಆ ಸ್ಥಿತಿಗೆ ಸ್ಥಿತಪ್ರಜ್ಞತೆ ಎಂದು ಹೆಸರು. ಅದು ಸ್ವಸ್ಥಾನ ಪರಿಜ್ಞಾನದಿಂದ ಹುಟ್ಟಿಕೊಳ್ಳುವ ಆನಂದದ ಭಾವ.

‘ನೀನು ಯಾವ ಪುಸ್ತಕ ಓದುತ್ತೀಯೋ, ಅದು ನೀನಾಗುತ್ತಿ; ಯಾವ ಸಿನಿಮಾ ನೋಡುತ್ತೀಯೋ, ಅದು ನೀನಾಗುತ್ತಿ; ಯಾವ ಸಂಗೀತ ಕೇಳುತ್ತೀಯೋ ಅದು ನೀನಾನುತ್ತಿ; ಯಾರೊಂದಿಗೆ ಸಮಯ ಕಳೆಯುತ್ತೀಯೋ, ಅವರೇ ನೀನಾಗುತ್ತಿ. ಆದ್ದರಿಂದ ನೀನು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದುದು ನೀನೇ’ ಎನ್ನುತ್ತಾನೆ ಒಬ್ಬ ದಾರ್ಶನಿಕ.

‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ, ಜೀವೋ ಬ್ರಹ್ಮೈವನಾಪರಃ’ ಎಂದರು ಆಚಾರ್ಯ ಶಂಕರರು. ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮನಲ್ಲದೆ ಬೇರೆಯಲ್ಲಎಂಬುದು ಅವರ ಅದ್ವೈತ ದರ್ಶನದ ಸಾರ. ಈ ಜಗತ್ತನ್ನು ತನ್ನ ಪ್ರಭಾವಳಿಯಲ್ಲಿಹಿಡಿದಿಟ್ಟುಕೊಂಡಿರುವ ಒಂದು ಮಹೋನ್ನತ ಶಕ್ತಿಯಿದೆ; ಅದನ್ನು ಕೆಲವರು ದೇವರು ಎಂದರು, ಇನ್ನು ಕೆಲವರು ಪ್ರಕೃತಿ ಎಂದರು. ಅಂತೂ ತಾನು ಅದರ ಒಂದು ಭಾಗ, ಅಥವಾ ಅದೇ ತಾನು ಎಂದು ಅರ್ಥವಾದಾಗ ಉಳಿದೆಲ್ಲಅಸ್ಮಿತೆಗಳ ಭ್ರಮೆ ತಾನಾಗಿಯೇ ಕರಗಿ ಹೋಗುತ್ತದೆ. ಆಗ ಉಳಿಯುವುದು ನಿರುಮ್ಮಳತೆಯ, ನಿವ್ರ್ಯಾಮೋಹದ, ಆನಂದದ ಭಾವ.

ಈ ಸತ್-ಚಿತ್-ಆನಂದದ ಸ್ವರೂಪ ಅಷ್ಟು ಸುಲಭವಾಗಿ ದಕ್ಕುವುದೇ? ‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಹಿಂದೆ ವ್ಯಾಸತೀರ್ಥರಿದ್ದರು. ಹೌದು, ಲೋಹಗಳ ನಡುವಿನಿಂದ ಚಿನ್ನವನ್ನು ಬೇರ್ಪಡಿಸುವುದಕ್ಕೆ ಒಬ್ಬ ಚಿನಿವಾರ ಬೇಕಿರುವಂತೆ ನಾವು ಯಾರು ಎಂದು ಅಂತಿಮವಾಗಿ ಅರ್ಥ ಮಾಡಿಕೊಳ್ಳಲು ಒಬ್ಬ ಗುರು ಬೇಕು. ಆತ ನಮ್ಮ ಅಂತರಂಗಕ್ಕೆ ಇಳಿದು ಬೆಳಕಿನ ಹಣತೆ ಹಚ್ಚಬಲ್ಲ.ಕತ್ತಲಲ್ಲಿರುವ ಎಲ್ಲರಿಗೂ ಬೇಕಾಗಿರುವುದು ಒಬ್ಬ ಗುರು. ಗುರುವನ್ನು ಹುಡುಕಿ ಹೊರಟವನಿಗೆ ಕತ್ತಲೆಂಬುದೇ ಇಲ್ಲ.

ಹಿಂದಿನ ಲೇಖನವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಮೊದಲ ಸ್ಥಾನದಲ್ಲಿರಲಿದೆ: ನಿಖಿಲ್ ಕುಮಾರಸ್ವಾಮಿ
ಮುಂದಿನ ಲೇಖನಮೈಸೂರಿನಲ್ಲಿ ರೌಡಿಶೀಟರ್’ಗಳ ಪೆರೇಡ್: ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ