ಮನೆ ರಾಜಕೀಯ ಬಿಜೆಪಿಯವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಬಿಜೆಪಿಯವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

0

ಧಾರವಾಡ: ಖಾಯಂ ಅಧಿಕಾರದಲ್ಲಿ ಇರುತ್ತೇವೆ ಎಂಬ ದುರಂಹಕಾರ ಬಿಜೆಪಿಗರಲ್ಲಿ ಮನೆ ಮಾಡಿದೆ. ತಮ್ಮ ಮುಂದೆ ಯಾರು ಎಲ್ಲ ಎಂಬ ಭ್ರಮೆಯಲ್ಲಿರುವ ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ನಗರದ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಗುಜರಾತ್‌’ನಂತೆ ಕರ್ನಾಟಕದಲ್ಲಿಯೂ ಮತ್ತೆ ಅಧಿಕಾರ ಬರುತ್ತದೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಇದು ಕರ್ನಾಟಕ. ಉತ್ತರ ಪ್ರದೇಶ, ಗುಜರಾತ್ ಆಗಲು ಸಾಧ್ಯವಿಲ್ಲ. ಬಿಜೆಪಿಯ ಪಾಪದ ಕೊಡ ತುಂಬಿದೆ ಎಂದು ಹರಿಹಾಯ್ದರು.

ನಮಗೆ ಅಧಿಕಾರ ಸಿಕ್ಕಾಗ ರೈತರ ಸಾಲ ಮನ್ನಾ ಮಾಡಿದ್ದೇವೆ. ಪ್ರಾಮಾಣಿಕವಾಗಿ ಜನಗಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ಬಿಜೆಪಿಯವರಂತೆ ನರಹತ್ಯೆಯ ರಾಜಕೀಯ ಮಾಡಿಲ್ಲ. ಹೀಗಾಗಿ ರಾಜ್ಯ ಹಾಗೂ ದೇಶದಲ್ಲಿ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ ಎಂದರು.

ರಾಜ್ಯಕ್ಕೆ ಬಂದು ಬರೀ ಭಾಷಣ ಬಿಗಿಯುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕಕ್ಕಾಗಲಿ, ಇಲ್ಲಿನ ಜನತೆಗಾಗಲಿ ಏನಾದರೂ ಕೊಡುಗೆ ನೀಡಿದ್ದಾರೆಯೇ? ಮಹದಾಯಿ ಸಮಸ್ಯೆ ಸರಿಪಡಿಸಿದ್ದಾರಾ? ರಾಜ್ಯಕ್ಕೆ ಏನಾದರೂ ಕೊಡುಗೆ ಕೊಟ್ಟಿದ್ದಾರಾ? ಎಂದು ಪ್ರಶ್ನೆಗಳ ಸುರಿಮಳೆಗರೆದರು.

ರಾಜ್ಯದಲ್ಲಿ ಬಿಜೆ‍ಪಿ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಇಷ್ಟು ದಿನ ಏನೂ ಮಾಡದೇ ಚುನಾವಣೆಯ ಹಿನ್ನೆಲೆ ಕಾಟಾಚಾರಕ್ಕಾಗಿ ಮಹದಾಯಿ ಬಗ್ಗೆ ಘೋಷಣೆ ಮಾಡಿ, ಗೋವಾದವರಿಂದ ತಕರಾರು ತೆಗೆಸಿದ್ದಾರೆ. ಇಂಥವರಿಂದ ಕರ್ನಾಟಕದ ಜನತೆ ಏನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ತ್ರಿವಳಿ ಎಂಜಿನ್ ಸರ್ಕಾರ ಇದ್ದರೂ ಏನು ಮಾಡದೇ ಮಹದಾಯಿ ಸಮಸ್ಯೆಯನ್ನು ಜೀವಂತವಾಗಿ ಇರಿಸಿದ್ದಾರೆ. ಬೆಲೆ ಏರಿಕೆ, ಸರ್ಕಾರದ ದಬ್ಬಾಳಿಕೆಯಿಂದ ಜನ ಸಾಯುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಧ್ವನಿ ಎತ್ತದ ಬಿಜೆಪಿ ಸರ್ಕಾರ, ಅವರ ನೆರವಿಗೂ ಬರಲಿಲ್ಲ. ಇಂತವರು ದೇಶ ಮತ್ತು ಕರ್ನಾಟಕವನ್ನು ಉಳಿಸಲು ಸಾಧ್ಯವಿಲ್ಲ ಎಂದರು.