ಬೆಂಗಳೂರು: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯದಿಂದ ವಿಮಾನಯಾನ ಹಾಗೂ ರೈಲ್ವೇ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವ ಭರವಸೆಯನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ನೀಡಿದರು.
ಇಂದು ವಿಧಾನಪರಿಷತ್ತಿನಲ್ಲಿ ಎಂಎಲ್ ಸಿ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, ಹನುಮನ ಜನ್ಮಸ್ಥಳ ಅಂಜನಾದ್ರಿಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು 100 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಮುಜರಾಯಿ ಇಲಾಖೆಯ ವತಿಯಿಂದ ಫೆಬ್ರವರಿ 22 ರಂದು ದೈವ ಸಂಕಲ್ಪ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರನ್ನು ಸೆಳೆಯುವ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಮೂಲಕ ಅಭಿವೃದ್ದಿಗೊಳಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ಅಂಜನಾದ್ರಿ ಬೆಟ್ಟವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 13 ಏಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ 5.50 ಕೋಟಿ ರೂಪಾಯಿಗಳ ಪ್ರಸ್ತಾವನೆ ನಮ್ಮ ಮುಂದಿದೆ ಎಂದು ಹೇಳಿದರು.
ಪ್ರಧಾನಿಗಳ ಟೆಂಪಲ್ ಟೂರಿಸಂ ಅಳವಡಿಕೆಗೂ ಆದ್ಯತೆಯನ್ನು ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಿಂದ ಹನುಮ ಜನ್ಮಸ್ಥಳ ಅಂಜನಾದ್ರಿಗೆ ಸಂಪರ್ಕ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ವಿಮಾನಯಾನ ಹಾಗೂ ರೈಲ್ವೇ ಸಂಪರ್ಕ ಪ್ಯಾಕೇಜನ್ನು ನಿರ್ಮಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಅಂಜನಾದ್ರಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ವಸತಿ ಸೌಲಭ್ಯ ಸೇರಿದಂತೆ ಸಮಗ್ರ ಅಭಿವೃದ್ದಿಗೆ ಯೋಜನೆಯನ್ನು ರೂಪಿಸಲಾಗಿದೆ. ವಸತಿ ಸೌಲಭ್ಯ, ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಭೋಜನಾಲಯ, ಸ್ನಾನಘಟ್ಟ, ರಸ್ತೆ, ಒಳಚರಂಡಿ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.