ಮನೆ ರಾಜಕೀಯ ಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭ: ಸಿಎಂ ಬೊಮ್ಮಾಯಿ

ಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭವಾಗಲಿದೆ. ಮಂಡಲ ಪ್ರಭಾರಿಗಳ ಮೇಲೆ ಗುರುತರ ಜವಾಬ್ದಾರಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ನಗರದ ದಿ ಕ್ಯಾಪಿಟಲ್ ಹೋಟೆಲ್‍’ನಲ್ಲಿ ಬುಧವಾರ ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ರಾಜ್ಯವು ಅತಿ ಹೆಚ್ಚು ಜಿಎಸ್’ಟಿ ಸಂಗ್ರಹಿಸುತ್ತಿದ್ದು, ಗುರಿ ಮೀರಿ ಶೇ 23ರಷ್ಟು ಹೆಚ್ಚು ಕಂದಾಯ ಸಂಗ್ರಹವಾಗಿದೆ. ಬಡವರ ಪರವಾಗಿ ನಮ್ಮ ನಿಲುವಿದೆ ಎಂದು ವಿವರಿಸಿದರು.

ಕಮಲ ಅರಳಿಸಿ, ಅಧಿಕಾರ ಗಳಿಸುವ ಸಂಕಲ್ಪ ನಮ್ಮದಾಗಬೇಕು ಎಂದು ಅವರು ಕ್ಷೇತ್ರದಲ್ಲಿ ಫಲಾನುಭವಿಗಳ ಸಮ್ಮೇಳನ ನಡೆಸಲು ತಿಳಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಹಣ ಅನುದಾನ ಕೊಟ್ಟಿದ್ದೇವೆ. ಸ್ಪಂದನಾಶೀಲ, ಜನಪರ ಬಿಜೆಪಿ ಸರಕಾರ ರಾಜ್ಯದಲ್ಲಿದೆ ಎಂದು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ಹಲವು ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಕರ್ನಾಟಕದಲ್ಲಿ 2019 ರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಲ್ಲದೆ, ಕೋವಿಡ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ನಾನು ಪ್ರವಾಹವನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಅಲ್ಲದೆ ನಮ್ಮ ರಾಜ್ಯ ಸರಕಾರ ಅನೇಕ ಜನೋಪಯೋಗಿ ಕಾರ್ಯಕ್ರಮ ಜಾರಿಗೊಳಿಸಿದೆ. ಇವೆಲ್ಲವನ್ನೂ ಜನರಿಗೆ ತಿಳಿಸಬೇಕಿದೆ ಎಂದರು.

ನಕಾರಾತ್ಮಕವಾಗಿ ಮತ ಪಡೆಯಲು ಕಾಂಗ್ರೆಸ್- ಜೆಡಿಎಸ್ ಪ್ರಯತ್ನ ಮಾಡುತ್ತಿದೆ. ನಾವು ಧನಾತ್ಮಕ ರೀತಿಯಲ್ಲಿ ಜನಮತ ಪಡೆಯಲು ಮುಂದಾಗುತ್ತೇವೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟು ಪಕ್ಷಕ್ಕೆ ಗೆಲುವು ತಂದು ಕೊಡಬೇಕಿದೆ ಎಂದು ತಿಳಿಸಿದರು.

ಅಕ್ಕಿ, ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ನಲ್ಲೂ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ನೀರಾವರಿ, ನೇಮಕಾತಿಯಲ್ಲೂ ಭ್ರಷ್ಟಾಚಾರ, ಬಿಡಿಎದಲ್ಲಿ ರೀಡೂ ಭ್ರಷ್ಟಾಚಾರ, ಸೋಲಾರ್ ವಿದ್ಯುತ್ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದ್ದರು ಎಂದು ಆರೋಪಿಸಿದರು.

ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿಬಿಟ್ಟರು. ಎಸಿಬಿ ಮುಂದೆ ಸಿದ್ದರಾಮಯ್ಯರದೂ ಸೇರಿದಂತೆ ಸುಮಾರು 60 ಕೇಸುಗಳಿದ್ದು, ಎಲ್ಲದಕ್ಕೂ ಬಿ ರಿಪೋರ್ಟ್ ಕೊಟ್ಟಿದ್ದರು. ಕಾಂಗ್ರೆಸ್ ತಮ್ಮ ಮೇಲಿನ ಆರೋಪಗಳಿಗೆ ಮೊದಲು ಉತ್ತರಿಸಬೇಕು. ಬಣ್ಣ ಬಯಲಾಗುವ ಭೀತಿ ಕಾಂಗ್ರೆಸ್ಸಿಗರದು. ಆರೋಪಗಳ ಮೇಲೆ ಕೌದಿ ಹಾಕಿ ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಯ್ಯರದು ಎಂದು ಟೀಕಿಸಿದರು.

ನಮ್ಮ ಮೇಲಿನ ಆರೋಪದ ದಾಖಲೆ ಕೊಟ್ಟರೆ ಅದನ್ನು ತನಿಖೆ ಮಾಡಿಸಲು ಸಿದ್ಧ ಎಂದು ಸವಾಲು ಹಾಕಿದರು. ನೀರಾವರಿ ನಿಗಮದಲ್ಲಿ 2 ಸಮಿತಿ ಇತ್ತು. ಇವೆರಡನ್ನೂ ಮುಚ್ಚಿ ಹಾಕಿದವರು ಕಾಂಗ್ರೆಸ್ಸಿಗರು. ಆ ಮೂಲಕ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದರು ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ವೈಫಲ್ಯ, ಬಿಜೆಪಿಯ ಮನೆ ಮನೆಗೆ ನಲ್ಲಿ ನೀರು ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮನೆ, ವಿದ್ಯುತ್, ಶೌಚಾಲಯ, ಉಚಿತ ಪಡಿತರ- ಹೀಗೆ ಕುಟುಂಬಗಳ ಸಶಕ್ತೀಕರಣ ನಡೆದಿದೆ. ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮಕ್ಕಳಿಗೆ ಸೈಕಲ್, ವಿದ್ಯಾನಿಧಿಯಂಥ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ರಾಷ್ರ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇತರರು ಇದ್ದರು.