ಬೆಂಗಳೂರು: ನವ ಕರ್ನಾಟಕದ ನಿರ್ಮಾಣದ ಗುರಿಯೊಂದಿಗೆ 2023 ನೇ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಾಡಿನ ಜನತೆಗೆ ಭವಿಷ್ಯದ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಕರ್ತವ್ಯ ಕಾಲದ ಅಭಿವೃದ್ಧಿಯ ಅಮೃತವನ್ನು ಎಲ್ಲಾ ವರ್ಗಗಳ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಯಶಸ್ವಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ವಿವಿಧ ಸಮುದಾಯಗಳ ಸಬಲೀಕರಣ ಮೊದಲಾದವುಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದೂರದೃಷ್ಟಿ ತೋರಿದ್ದಾರೆ. ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮಿತಿ 3 ರಿಂದ 5 ಲಕ್ಷ ರೂ.ಗೆ ಏರಿಕೆ, ಶಾಲಾ ಮಕ್ಕಳ ಸಾರಿಗೆಗಾಗಿ 100 ಕೋಟಿ ರೂ. ವೆಚ್ಚದಲ್ಲಿ ʼಮಕ್ಕಳ ಬಸ್ಸುʼ, ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ 9,698 ಕೋಟಿ ರೂ. ಅನುದಾನ, ಮೊದಲಾದ ಕ್ರಮಗಳು ಮುಖ್ಯಮಂತ್ರಿಯವರ ʼಕಾಮನ್ ಮ್ಯಾನ್ʼ ದೃಷ್ಟಿಯನ್ನು ತೋರಿದೆ. ಚುನಾವಣಾ ವರ್ಷದಲ್ಲಿ ಜನಪ್ರಿಯತೆಗೆ ಜೋತು ಬೀಳದೆ, ಕೇಂದ್ರದ ಮಾರ್ಗದರ್ಶನ ಹಾಗೂ ಸಹಯೋಗದಲ್ಲಿ ಡಬಲ್ ಎಂಜಿನ್ ಸರ್ಕಾರದ ಲಾಭವನ್ನು ಸರ್ವ ಜನತೆಯ ಕಲ್ಯಾಣಕ್ಕೆ ದೊರಕಿಸುವ ನಿಟ್ಟಿನಲ್ಲಿ ಇದು ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ʼಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯʼ ಎಂಬ ಸಂಕಲ್ಪದೊಂದಿಗೆ, ʼಮನೆ ಮನೆಗೆ ಆರೋಗ್ಯʼ ಕಾರ್ಯಕ್ರಮದಡಿ ಆರೋಗ್ಯ ಶಿಬಿರ, ಕೋಲಾರ, ಬಾಗಲಕೋಟೆ, ಯಾದಗಿರಿ, ರಾಮನಗರ ಮೊದಲಾದೆಡೆ ಕ್ರಿಟಿಕಲ್ ಕೇರ್ ಬ್ಲಾಕ್, ಮೆದುಳು ಆರೋಗ್ಯ ಯೋಜನೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಣೆ, ಡಯಾಲಿಸಿಸ್ ಸೈಕಲ್ ಸಂಖ್ಯೆ 1 ಲಕ್ಷಕ್ಕೆ ಹೆಚ್ಚಳ, 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ ʼವಾತ್ಸಲ್ಯʼ ಯೋಜನೆ, 129 ತಾಲೂಕು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಲ್ಯಾಬ್ ಸ್ಥಾಪನೆ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ 720 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಆರೋಗ್ಯ ವಲಯಕ್ಕೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ರೇಷ್ಮೆ ಬೆಳೆಗಾರರಿಗೆ ಕೊಡುಗೆ
ಏಷ್ಯಾದಲ್ಲಿಯೇ ಅತಿ ದೊಡ್ಡ 2 ನೇ ರೇಷ್ಮೆ ಮಾರುಕಟ್ಟೆಯನ್ನು ಶಿಡ್ಲಘಟ್ಟ ಹೊಂದಿದೆ. ಇಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುತ್ತದೆ. ಇದು ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೇಷ್ಮೆ ಬೆಳೆಗಾರರಿಗೆ ಸಂಭ್ರಮ ತಂದಿದೆ. 32 ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ., ಶ್ರೆಡ್ಡರ್ಸ್‌ಗಳಿಗಾಗಿ 12 ಕೋಟಿ ರೂ., ಹೀಗೆ ಮೊದಲಾದ ನೆರವು ಘೋಷಿಸಲಾಗಿದೆ. ರೇಷ್ಮೆ ಬೆಳೆಗಾರರ ಬದುಕಿಗೆ ಸುಧಾರಣೆಯ ಹೊಸ ನೋಟ ನೀಡಿದ ಮುಖ್ಯಮಂತ್ರಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ದ್ರಾಕ್ಷಿ ಬೆಳೆಗಾರರ ನೆರವಿಗೆ ದ್ರಾಕ್ಷಾರಸ ಮಂಡಳಿಯ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದು ಕೂಡ ಚಿಕ್ಕಬಳ್ಳಾಪುರ ಭಾಗದ ದ್ರಾಕ್ಷಿ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವಲ್ಲಿ ಕೆ.ಸಿ.ವ್ಯಾಲಿ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಈ ಯೋಜನೆಯಿಂದ ಜಿಲ್ಲೆಯ ಅಂತರ್ಜಲದ ಪ್ರಮಾಣ ಕೂಡ ಹೆಚ್ಚಾಗಿದೆ. ಈ ನೀರನ್ನು ಇನ್ನಷ್ಟು ಮಟ್ಟಿಗೆ ಕೃಷಿಗೆ ಯೋಗ್ಯವಾಗಿಸಲು ತೃತೀಯ ಹಂತದ ಸಂಸ್ಕರಣಾ ಕ್ರಮಗಳನ್ನು ತರುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಹಿಂದಿನಿಂದಲೂ ಹೂ ಕೃಷಿಗೆ ಜನಪ್ರಿಯ. ಇದಕ್ಕೆ ಪ್ರೋತ್ಸಾಹ ನೀಡಲು, ಹಾಗೂ ರಫ್ತು ಉತ್ತೇಜಿಸಲು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈ-ಟೆಕ್ ಹೂವಿನ ಮಾರುಕಟ್ಟೆ ಆರಂಭಿಸಲಾಗುತ್ತದೆ. ಹಾಗೆಯೇ ಬೆಂಗಳೂರು, ಹಾವೇರಿಯಲ್ಲಿ ಚಿಲ್ಲರೆ ಹೂವಿನ ಮಾರುಕಟ್ಟೆ ಆರಂಭಿಸಲಾಗುತ್ತದೆ. ಇದು ನಮ್ಮ ಭಾಗದ ಹೂ ಬೆಳೆಗಾರರ ಸಶಕ್ತೀಕರಣದ ಕ್ರಮವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಾಡುತ್ತಾರೆ ಎಂಬ ಅನೇಕರ ನಂಬಿಕೆ ಹುಸಿಯಾಗಿದೆ. ಬಜೆಟ್ ಮಂಡನೆ ಆರಂಭಕ್ಕೆ ಮುನ್ನವೇ ಕಿವಿಗೆ ಹೂ ಇಟ್ಟುಕೊಂಡು ಬಂದವರಿಗೆ ನೈತಿಕತೆ ಇಲ್ಲ. ಪೂರ್ವಗ್ರಹಪೀಡಿತರಾದ ಸಿದ್ದರಾಮಯ್ಯನವರು ಸಿಎಂ ಆಗಿ ಬಜೆಟ್ ಮಂಡಿಸುವಾಗ ಯಾವುದಾದರೂ ವಿರೋಧ ಪಕ್ಷ ಹೀಗೆ ನಡೆದುಕೊಂಡಿತ್ತೇ? ಹೀಗೆ ವರ್ತಿಸುವುದು ಔಚಿತ್ಯವೇ? ಇವರು ಹೊಸ ಪರಂಪರೆಗೆ ನಾಂದಿ ಹಾಡಿದ್ದು, ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಬಜೆಟ್’ನ ಪರಂಪರೆಯನ್ನು ಕಾಂಗ್ರೆಸ್’ನವರು ಹಾಳು ಮಾಡಿದ್ದು, ಜನರೇ ಅವರ ಕಿವಿಗೆ ಹೂ ಇಡಲಿದ್ದಾರೆ ಎಂದರು.