ಮನೆ ಅಂಕಣ ಫೆಬ್ರವರಿ ೨೭ ವಿಶ್ವ ಎನ್.ಜಿ.ಒ ದಿನಾಚರಣೆ: ದೇಶದ ಅಭಿವೃದ್ಧಿಯಲ್ಲಿ ಎನ್.ಜಿ.ಒಗಳ ಪಾತ್ರ

ಫೆಬ್ರವರಿ ೨೭ ವಿಶ್ವ ಎನ್.ಜಿ.ಒ ದಿನಾಚರಣೆ: ದೇಶದ ಅಭಿವೃದ್ಧಿಯಲ್ಲಿ ಎನ್.ಜಿ.ಒಗಳ ಪಾತ್ರ

0

ಯಾವುದೇ ಒಂದು ಸಮಾಜದಲ್ಲಿ ಜನರ ಸೇವೆಗೆ ಮತ್ತು ದೇಶದ ಅಭಿವೃದ್ದಿಗೆ ಸಂಬಂದಿಸಿದ ಕಾರ್ಯಗಳನ್ನು ಸರ್ಕಾರ ಮಾತ್ರ ಕೈಗೊಳ್ಳಬೇಕೆಂಬ ನಿಯಮವೇನಿಲ್ಲ, ಸಾರ್ವಜನಿಕ ಕಾಳಜಿಯುಳ್ಳ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಹ ಸ್ವಯಂ ಪ್ರೇರಣೆಯಿಂದ ಈ ಕಾರ್ಯಗಳನ್ನು ಮಾಡಬಹುದು.

“ಸಾರ್ವಜನಿಕ ಕಾಳಜಿ ಮತ್ತು ಸೇವಮನೋಭಾವದೊಂದಗೆ ಹಲವಾರು ಬಗೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಆರೋಗ್ಯ ಸಂಬಂಧಿಸಿದ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದ ಹಿತ ಸಾಧನೆಗಾಗಿ ಅದರಲ್ಲೂ ದೀನದುರ್ಬಲ ವರ್ಗಗಳ ಹಿತ ಸಂರಕ್ಷಣೆಗಾಗಿ ಸ್ವ-ಇಚ್ಛೆಯಿಂದ ಪರಿಶ್ರಮಿಸುವ ಸಂಘಟನೆಗಳನ್ನು ಎನ್.ಜಿ.ಒ ಅಥವಾ ಸರ್ಕಾರೇತರ ಸಂಸ್ಥೆಗಳು ಎನ್ನುವರು.

ಎನ್.ಜಿ.ಒಗಳು ಸರ್ಕಾರದಿಂದ ನೊಂದಾಯಿಸಲ್ಪಟ್ಟ ಸಂಸ್ಥೆಗಳಾಗಿದ್ದು, ಇವು ತಮ್ಮದೇ ಆದ ನಿರ್ಧಿಷ್ಟ ಗುರಿ ಮತ್ತು ಉದ್ದೇಶಗಳನ್ನು ಹೊಂದಿದ್ದು, ತಮ್ಮದೇ ಆದ ಕಾನೂನುಗಳನ್ನು ಹೊಂದಿರುತ್ತದೆ. ಜೊತೆಗೆ ಯಾವುದೆ ಲಾಭವನ್ನು ಪಡೆಯುವ ಆಕಾಂಕ್ಷೆಗಳಿಲ್ಲದೆ ರಾಜಕೀಯದಿಂದ ದೂರ ಉಳಿದು ಸರ್ಕಾರದಿಂದ ಮತ್ತು ಖಾಸಗಿ ವ್ಯಕ್ತಿಗಳಿಂದ ಹಣವನ್ನು ದೇಣಿಗೆಗಳ ಮೂಲಕ ಪಡೆದುಕೊಂಡು, ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ರಕ್ಷಿಸುವ ಮೊದಲ ಹಾಗೂ ದೇಶದ ಏಕೈಕ ಸಂಸ್ಥೆಯಾಗಿದೆ. ಜೊತೆಗೆ ಇವು ಸಮಾನ ಮನಸ್ಸಿನ ಜನರಿಂದ ರಚಿತವಾದ ಸಂಸ್ಥೆಯಾಗಿದ್ದು, ಜನರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವುದರ ಜೊತೆಗೆ ವಿವಿಧ ಸಂಘಟನೆಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏಕಕಾಲದಲ್ಲಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ದೇಶದ ಅಭಿವೃದ್ದಿಗೆ ಸಹಾಯಕವಾಗಿವೆ. ಆದ್ದರಿಂದ ಎನ್.ಜಿ.ಒಗಳ ಕಾರ್ಯವೈಖರಿಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ ೨೭ರಂದು ವಿಶ್ವ ಎನ್.ಜಿ.ಒ ದಿನಾಚರಣೆಯನ್ನು ಆಚರಿಸುತ್ತಾರೆ.

ಎನ್.ಜಿ.ಒಗಳ ಕಾರ್ಯ

ನಾಗರಿಕ ಸಮಾಜದಲ್ಲಿ ಎನ್.ಜಿ.ಒಗಳ ಕಾರ್ಯ ಪ್ರಮುಖವಾದುದು. ಎನ್.ಜಿ.ಒಗಳು ಸರ್ಕಾರದ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳನ್ನು ಜನಸಮಾಜನ್ಯರಿಗೆ ತಿಳಿಸುತ್ತಿವೆ. ನೊಂದವರಿಗೆ. ದಮನಿತ ವರ್ಗದವರಿಗೆ ಮತ್ತು ಬಲಿಷ್ಠ ವ್ಯಕ್ತಿಗಳಿಂದ ದಬ್ಬಾಳಿಗೆ ಒಳಪಟ್ಟವರಿಗೆ ಅವರ ಬೆನ್ನ ಹಿಂದೆ ನಿಂತು ಅಂತಹ ಸರ್ಕಾರ ಅಥವಾ ಆರ್ಥಿಕ ಬಲಿಷ್ಠ ವ್ಯಕ್ತಿಗಳ ವಿರುದ್ಧ ಹೋರಾಡಿ ದೀನ ದಲಿತರಿಗೆ, ಅಬಲೆಯರಿಗೆ ನ್ಯಾಯ ಕೊಡಿಸಲು ಇವರು ಆಗಾಗ ಪ್ರತಿಭಟನೆ ಮತ್ತು ಅಸಹಕಾರ ಚಳವಳಿಯನ್ನು ಮಾಡುತ್ತಿದ್ದಾರೆ. ಹಾಗೂ ಅಗತ್ಯವಿರುವ ಮತ್ತು ಸೌಲಭ್ಯ ವಂಚಿತರಿಗೆ ಉಚಿತ ಆಹಾರ, ವಸತಿ ಮತ್ತು ಅಗತ್ಯ ವಸ್ತುಗಳಂತಹ ಸೌಕರ್ಯಗಳನ್ನು ಒದಗಿಸುತ್ತಿವೆ. ಜೊತೆಗೆ ನೆರೆ ಹಾವಳಿ, ಪ್ರವಾಹ, ಭೂಕಂಪ, ಪ್ರಕೃತಿ ವಿಕೋಪ ಮೊದಲಾದ ಘಟನೆಗಳಿಂದ ತೊಂದರೆಗೆ ಒಳಗಾದ ಜನರಿಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿವೆ.

ಎನ್.ಜಿ.ಒ ಗಳು ಶೋಷಿತ ಹಾಗೂ ನಿರಾಶ್ರಿತ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಇಂದು ಹೆಚ್ಚು ಶ್ರಮಿಸುತ್ತಿವೆ. ಇಂತಹ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಮೂಡಿಸಿ ಇವರಿಗೆ ಸೂಕ್ತ ರೀತಿಯ ವಿದ್ಯಾಭ್ಯಾಸ ನೀಡಿ ವಿವಿಧ ರೀತಿಯ ವೃತ್ತಿಪರ ಕೌಶಲ್ಯ ಕಲಿಸಿ ಮಹಿಳೆಯರಿಗೆ ಅವರ ಹಕ್ಕುಗಳು, ಕಾನೂನಿನ ಅವಕಾಶಗಳು, ಸಾಲಸೌಲಭ್ಯ, ಉದ್ದೋಗವಕಾಶ ಮತ್ತು ಆರ್ಥಿಕ ನೆರವು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಹಿಳೆಯರು ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಕೊಂಡು ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಒಡನಾಡಿ ಸೇವಾ ಸಂಸ್ಥೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದೆ. ಈ ಒಡನಾಡಿ ಸೇವಾ ಸಂಸ್ಥೆಗೆ ಒಂದು ಸಲಾಮ್ ಹೇಳಲೇಬೇಕು.

ಎನ್.ಜಿ.ಒಗಳು ಮಾನವ ಹಕ್ಕುಗಳ ಸಾಕ್ಷಾತ್ಕಾರಕ್ಕೆ ಬಡತನದ ಸಂಪೂರ್ಣ ನಿರ್ಮೂಲನೆಗೆ ಹಾಗೂ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದರ ಜೊತೆಗೆ ಅಭಿವೃದ್ದಿಯ ಸುಸ್ಥಿರ ಮಾದರಿಗಳನ್ನು ಸಾಧಿಸುತ್ತಿವೆ. ನಿರುದ್ಯೋಗಿ ಯುವಕ, ಯುವತಿಯರಿಗೆ ಅನೇಕ ರೀತಿಯ ಉದ್ಯೋಗ ಅಧಾರಿತ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಅಂತಹವರಿಗೆ ಉದ್ಯೋಗ ಅವಕಾಶ ನೀಡಿ ನಿರುದ್ಯೋಗದ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತಿವೆ.

ಜೊತೆಗೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಉಚಿತ ವಸತಿ ಹಾಗೂ ಊಟ ಹಾಗೂ ವಿದ್ಯಾರ್ಥಿ ವೇತನವನ್ನು ನೀಡುವುದರ ಜೊತೆಗೆ ಅಂತಹ ಮಕ್ಕಳು ಮುಂದೆ ತಮ್ಮ ಜೀವನದಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತದೆ. ರೈತರಿಗೆ  ಕೃಷಿ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲು ಹಲವಾರು ಕೃಷಿ ಸಂಬಂಧಿತ ಯೋಜನೆಗಳನ್ನು ಹೊರತಂದಿವೆ. ಹಾಗೂ ಆಧುನಿಕ ಕೃಷಿ ಪದ್ದತಿ ಹಾಗೂ ಆಧುನಿಕ  ಕೃಷಿ ಯಂತ್ರೋಪಕರಣದ ಅನುಕೂಲಗಳ ಬಗ್ಗೆ ಅರಿವು ಮೂಡಿಸುತ್ತಿವೆ.

ಎನ್.ಜಿ.ಒಗಳು ಬಾಲಪರಾದ ತಡೆಗಟ್ಟುವ ಜೊತೆಗೆ ದೇಶದ ಲಕ್ಷಾಂತರ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚಿಸುವುದರ ಮೂಲಕ ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ನಿರ್ಣಾಯಾಕ ಪಾತ್ರವನ್ನು ವಹಿಸುತ್ತಿವೆ. ಕರೋನಾ ಸಮಯದಲ್ಲಂತು ಅನೇಕ ಎನ್.ಜಿ.ಒಗಳು ತಮ್ಮ ಪ್ರಾಣದ ಹಂಗು ತೊರೆದು ತೊಂದರೆಗೊಳಗಾದ ರೋಗಿಗಳಿಗೆ ಮತ್ತು ಕುಟುಂಬದ ವರ್ಗದವರಿಗೆ ಉಚಿತ ಆಹಾರ ಮತ್ತು ಔಷಧಗಳನ್ನು ಪೂರೈಸುವುದರ ಜೊತೆಗೆ  ಮಾನವೀಯತೆಯನ್ನು ಮೆರೆದಿವೆ.

    ಹೀಗೆ ಎನ್.ಜಿ.ಒಗಳು ಸ್ವಾತಂತ್ರ ನಂತರದಿಂದ ಹಲವಾರು ಬಗೆಯ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳು ಫಲಾನುಭವಿಗಳಿಗೆ ತಲುಪುವಂತೆ ಮಾಡಿ ಸಮಾಜದ ಮತ್ತು ದೇಶದ ಅಭಿವೃದ್ದಿಗೆ ಕಾರಣರಾಗಿ ಹಗಲಿರುಳು ಎನ್ನದೆ ದುಡಿಯುತ್ತಿವೆ. ಪ್ರಾರಂಭದಿಂದಲೂ ಎನ್.ಜಿ.ಒಗಳ ಬಗ್ಗೆ ಹಲವಾರು ಮತ್ತು ಲೆಕ್ಕವಿಲ್ಲದಷ್ಟು ಟೀಕೆಗಳಿದ್ದರೂ ಸಹ ಇವು ಯಾವುದಕ್ಕೂ ತಲೆಗೊಡದೆ ಅಭಿವೃದ್ದಿಯ ಕಾರ್ಯ ತಂತ್ರಕ್ಕೆ ಹೊಂದಿಕೊಳ್ಳುವುದರ ಮೂಲಕ ಇತಿಹಾಸ ಉದ್ದಕ್ಕೂ ಯಶಸ್ವಿಯಾಗಿ ಅಭಿವೃದ್ಧಿ ಹೊಂದುತ್ತ ಪ್ರಗತಿಯತ್ತ ಸಾಗುತ್ತಿವೆ.

ಲೇಖಕರು
ಶಬನ
ಎಂ.ಎಸ್ಸಿ ಇನ್ ಸೈಕಾಲಜಿ
ಮನಃಶಾಸ್ತ್ರಜ್ಞರು
ಮೈಸೂರು

.