ಮನೆ ರಾಜ್ಯ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

0

ಶಿವಮೊಗ್ಗ: ಸೋಗಾನೆ ಬಳಿ ನಿರ್ಮಾಣಗೊಂಡಿರುವ ನೂತನ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.

449 ಕೋಟಿ ವೆಚ್ಚದಲ್ಲಿ 778 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಪ್ರಧಾನಿ ಆಗಮಿಸಿದ ವಿಮಾನವು ಹೊಸ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಆಯಿತು.

ಬಳಿಕ, ಮೋದಿ ಬೆಳಗಾವಿಗೆ ತೆರಳಲಿದ್ದು, ಮಧ್ಯಾಹ್ನ 2 ಗಂಟೆಗೆ ರಾಣಿ ಚನ್ನಮ್ಮ ವೃತ್ತದಿಂದ ರೋಡ್‌ ಶೋ ನಡೆಸಲಿದ್ದಾರೆ. ಒಂದು ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ. ಲಕ್ಷ ಜನರಿಗೆ ಊಟ, ನೀರಿನ ವ್ಯವಸ್ಥೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

2007ರಲ್ಲಿ ಬಿ.ಎಸ್‌.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಮೊದಲು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಿಂದ ಹಿಂದೆ ಸರಿದಿದ್ದರು. ನಂತರ ಬಂದ ಸರ್ಕಾರಗಳು ಆಸಕ್ತಿ ತೋರದ ಕಾರಣ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು.

2019ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಬೋಯಿಂಗ್‌ನಂತಹ ದೊಡ್ಡ ವಿಮಾನ ಇಳಿಯಲು ಅವಕಾಶ ಕಲ್ಪಿಸಿ, ರನ್ ವೇ ಉದ್ದವನ್ನು 2.05 ಕಿ.ಮೀ ಬದಲಿಗೆ, 3.20 ಕಿ.ಮೀ.ಗೆ ಹೆಚ್ಚಿಸಲಾಯಿತು.

ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಲಾಯಿತು. ಇದರಿಂದ ಯೋಜನಾ ವೆಚ್ಚ  220 ಕೋಟಿಯಿಂದ 449.22 ಕೋಟಿಗೆ ಏರಿಕೆಯಾಯಿತು.