ಮನೆ ಕಾನೂನು ಭೀಮಾ ಕೋರೆಗಾಂವ್: ಗಾಡ್ಲಿಂಗ್ ಸಹಿತ ಐವರ ಜಾಮೀನು ಮನವಿ ಕುರಿತು ಎನ್ಐಎ ಪ್ರತಿಕ್ರಿಯೆ ಕೇಳಿದ ಬಾಂಬೆ...

ಭೀಮಾ ಕೋರೆಗಾಂವ್: ಗಾಡ್ಲಿಂಗ್ ಸಹಿತ ಐವರ ಜಾಮೀನು ಮನವಿ ಕುರಿತು ಎನ್ಐಎ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್

0

ಭೀಮಾ ಕೋರೆಗಾಂವ್ ಪ್ರಕರಣದ ಐವರು ಆರೋಪಿಗಳು ಸಲ್ಲಿಸಿದ ಡೀಫಾಲ್ಟ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎಗೆ) ಬಾಂಬೆ ಹೈಕೋರ್ಟ್ ಬುಧವಾರ ನೋಟಿಸ್ ನೀಡಿದೆ.

ಮೂರು ವಾರಗಳಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸಂಸ್ಥೆಗೆ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರಿದ್ದ ವಿಭಾಗೀಯ ಪೀಠ  ಸೂಚಿಸಿದೆ.

ತಮ್ಮ ಡಿಫಾಲ್ಟ್ ಅರ್ಜಿಗಳನ್ನು ತಿರಸ್ಕರಿಸಿದ ಎನ್ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳಾದ ಮಹೇಶ್ ರಾವುತ್, ಸುಧೀರ್ ಧವಳೆ, ಶೋಮಾ ಸೇನ್ ಮತ್ತು ರೋನಾ ವಿಲ್ಸನ್ ಹಾಗೂ ಸುರೇಂದ್ರ ಗಾಡ್ಲಿಂಗ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇವರನ್ನು ಜೂನ್ 2018 ರಲ್ಲಿ ಬಂಧಿಸಲಾಗಿತ್ತು.

ಡೀಫಾಲ್ಟ್ ಜಾಮೀನು ಮಂಜೂರಾತಿಗೆ ಸಂಬಂಧಿಸಿದ ಕಾನೂನನ್ನು ಗುರುತಿಸಲು ನ್ಯಾಯಾಲಯ ವಿಫಲವಾಗಿದೆ. ತಮ್ಮ ಬಂಧನದ ಹಂತದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಪುಣೆ ಸೆಷನ್ಸ್ ನ್ಯಾಯಾಧೀಶರಿಗೆ ಅಧಿಕಾರವಿದೆಯೇ ಎಂದು ಪ್ರಶ್ನಿಸಿರುವ ಆರೋಪಿಗಳು ಪ್ರಕರಣದ ಆರೋಪಿಯಾಗಿದ್ದ ವಕೀಲೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಂತೆಯೇ ತಮ್ಮ ಪ್ರಕರಣವೂ ಇದ್ದು 2021ರಲ್ಲಿ ಅವರನ್ನು ಬಿಡುಗಡೆ ಮಾಡಿರುವಂತೆಯೇ ತಮ್ಮನ್ನೂ ಬಿಡುಗಡೆ ಮಾಡಬೇಕು ಎಂದು ಆರೋಪಿಗಳು ಕೋರಿದ್ದಾರೆ.

ಬಂಧನದಲ್ಲಿರುವ 90 ದಿನಗಳ ಅವಧಿ ಮುಕ್ತಾಯಗೊಂಡರೂ ನವೆಂಬರ್ 15, 2018ರವರೆಗೆ ಎನ್ಐಎ ಯಾವುದೇ ಆರೋಪಪಟ್ಟಿ ಸಲ್ಲಿಸಿರಲಿಲ್ಲ ಸಿಆರ್ಪಿಸಿ ಸೆಕ್ಷನ್ 167 (2) ಅಡಿಯಲ್ಲಿ ಈ ಷರತ್ತು ಪೂರೈಸಿದ ಆರೋಪಿಗೆ ಡೀಫಾಲ್ಟ್ ಜಾಮೀನು ಹಕ್ಕು ಲಭ್ಯವಾಗುತ್ತದೆ ಎಂದು ಗುರುತಿಸಲು ವಿಶೇಷ ನ್ಯಾಯಾಲಯ ವಿಫಲವಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ.

ಖುದ್ದು ವಾದ ಮಾಡಬಯಸಿದ ಗಾಡ್ಲಿಂಗ್; ಎನ್’ಐಎ ನಿಲುವು ಕೇಳಿದ ನ್ಯಾಯಾಲಯ

ಇದೇ ಡಿಫಾಲ್ಟ್ ಜಾಮೀನು ಮನವಿಗೆ ಸಂಬಂಧಿಸಿದಂತೆ ತಾವು ಖುದ್ದು ವಾದ ಮಂಡಿಸುವುದಾಗಿ ಪ್ರಕರಣದ ಮತ್ತೊಬ್ಬ ಆರೋಪಿ, ಮಾನವ ಹಕ್ಕುಗಳ ಪರ ಹೋರಾಟ ನಡೆಸುವ ವಕೀಲರೂ ಆದ ಸುರೇಂದ್ರ ಗಾಡ್ಲಿಂಗ್ ಕೋರಿದ್ದು ಈ ಸಂಬಂಧ ತನ್ನ ನಿಲುವು ತಿಳಿಸುವಂತೆ ಎನ್ಐಎಗೆ ಪೀಠ ಸೂಚಿಸಿದೆ. ಆರೋಪಪಟ್ಟಿಯು ಸುಮಾರು 30 ಸಾವಿರ ಪುಟಗಳಷ್ಟಿದ್ದು ಜೈಲಿನಲ್ಲಿ 20 ನಿಮಿಷ ಮಾತ್ರ ವಕೀಲರನ್ನು ಭೇಟಿಯಾಗಲು ಅವಕಾಶವಿದೆ. ಹೀಗಾಗಿ ತಮ್ಮ ಪ್ರಕರಣದಲ್ಲಿ ತಾವೇ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಗಾಡ್ಲಿಂಗ್ ಕೋರಿದ್ದರು.

ತನಿಖಾಧಿಕಾರಿಯೊಂದಿಗೆ ಪರಿಶೀಲಿಸಿ ಗಾಡ್ಲಿಂಗ್ ಅವರು ಖುದ್ದಾಗಿ ಹಾಜರಾಗಲು ಅನುಮತಿ ನೀಡಬಹುದೇ ಎಂದು ತಿಳಿಸುವಂತೆ ಎನ್ಐಎ ಪರ ವಕೀಲ ಸಂದೇಶ್ ಪಾಟೀಲ್ ಅವರಿಗೆ ನ್ಯಾಯಾಲಯ ಸೂಚಿಸಿತು.