ಮನೆ ರಾಜ್ಯ ಬಸವಣ್ಣನವರ ಪಠ್ಯ ತಿರುಚುವಿಕೆ: ಸಿಎಂ ಗೆ ಪತ್ರ ಬರೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

ಬಸವಣ್ಣನವರ ಪಠ್ಯ ತಿರುಚುವಿಕೆ: ಸಿಎಂ ಗೆ ಪತ್ರ ಬರೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

0

ಬೆಂಗಳೂರು : 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಪಠ್ಯ ತಿರುಚುವಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದಿದೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಹಂದಿಗುಂದದ ವಿರಕ್ತಮಠದ ನೇತೃತ್ವದಲ್ಲಿ ಶ್ರೀ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಪತ್ರ ಬರೆದಿದ್ದು ಬಸವಣ್ಣನವರ ಕುರಿತು ಪಠ್ಯವನ್ನು ಬದಲಿಸಿರುವುದು ನಿಜಕ್ಕೂ ಬೇಸರ ತರಿಸಿದೆ. ಪಠ್ಯ ಸರಿಪಡಿಸದೇ ಹೋದಲ್ಲಿ ಬೃಹತ್‌ ಮಟ್ಟದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದೆ.

ಪಠ್ಯ ಪುಸ್ತಕದಲ್ಲಿ “ಶೈವ-ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು” ಎಂದು ಬರೆಯಲಾಗಿದೆ. ಇದು ಸಹ ತಪ್ಪು. ಶೈವಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು, ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು. ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬಂದದು. ಅವರೇ ಇಷ್ಟಲಿಂಗದ ಜನಕರು. ಅಲ್ಲಮಪ್ರಭುದೇವರಾದಿಯಾಗಿ ಎಲ್ಲ ಶರಣರು ತಮ್ಮ ವಚನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಕೆ ನೀನೆ ರೂಪಾದೆ’ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ” ಎಂದು ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ಪಠ್ಯದಲ್ಲಿ ಆಗಿರುವ ಈ ಎಲ್ಲ ದೋಷಗಳನ್ನು ನಿವಾರಿಸಿ ಪಠ್ಯಪುಸ್ತಕ ಮುದ್ರಿಸಬೇಕು. ಅನ್ಯಥಾ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುವುದಲ್ಲದೆ ವೈಶಿಷ್ಟ್ಯಪೂರ್ಣವಾದ ಲಿಂಗಾಯತ ಧರ್ಮಕ್ಕೆ ಮತ್ತು ಬಸವಣ್ಣನವರಿಗೆ ಅಪಚಾರವೆಸಗಿದಂತಾಗುತ್ತದೆ. ಲಿಂಗಾಯತ ಧರ್ಮದ ಅನುಯಾಯಿ ಮತ್ತು ಬಸವಣ್ಣನವರ ಹೆಸರಿನವರಾದ ತಾವು ಮುಖ್ಯ ಮಂತ್ರಿಯಾಗಿರುವ ಸಮಯದಲ್ಲಿ ಇಂತಹ ಅಪಚಾರವಾಗಿರುವುದು ನಮಗೆ ಆಘಾತಕಾರಿಯಾಗಿದೆ. ಬಹುಸಂಖ್ಯಾತ ಲಿಂಗಾಯತರು ಮತ್ತು ಲಿಂಗಾಯತ ಮಠಾಧಿಪತಿಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸುವ ಮೊದಲು ಈ ತಪ್ಪು ಸರಿಪಡಿಸಿ ಪಠ್ಯ ಪುಸ್ತಕಗಳನ್ನು ಪ್ರಕಟಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸೂಕ್ತ ಸಂದರ್ಭದಲ್ಲಿ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿ
ಮುಂದಿನ ಲೇಖನಮೈವಿವಿ ಇನ್ನು ಮುಂದೆ ತಾಂತ್ರಿಕ ಪದವಿ ವಿದ್ಯಾರ್ಥಿಗಳನ್ನು ಸೃಷ್ಟಿಸಲಿದೆ: ಪ್ರೊ.ಜಿ.ಹೇಮಂತ್ ಕುಮಾರ್