ಮನೆ ಸುದ್ದಿ ಜಾಲ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8.1ಕ್ಕೆ ಇಳಿಕೆ

ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8.1ಕ್ಕೆ ಇಳಿಕೆ

0

ನವದೆಹಲಿನಿವೃತ್ತಿ ನಿಧಿ ಸಂಸ್ಥೆ EPFO ಶನಿವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭವಿಷ್ಯ ನಿಧಿ ಠೇವಣಿ(PF)ಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಟ್ಟಕ್ಕೆ ಶೇಕಡಾ 8.5ರಿಂದ ಶೇಕಡಾ 8.1ಕ್ಕೆ ಇಳಿಸಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆಯಾಗಿದ್ದು 5 ಕೋಟಿ ಠೇವಣಿದಾರರಿಗೆ ಇದರಿಂದ ಪರಿಣಾಮ ಬೀರಲಿದೆ.

1977-78ರಲ್ಲಿ EPF ಬಡ್ಡಿ ದರ ಶೇಕಡಾ 8ರಷ್ಟಿತ್ತು. “ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2021-22 ಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲೆ ಶೇಕಡಾ 8.1 ರಷ್ಟು ಬಡ್ಡಿದರವನ್ನು ನೀಡಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

2020-21 ರ EPF ಠೇವಣಿಗಳ ಮೇಲೆ ಶೇಕಡಾ 8.5ರಷ್ಟು ಬಡ್ಡಿ ದರವನ್ನು ಮಾರ್ಚ್ 2021 ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ನಿರ್ಧರಿಸಿತು. ನಂತರ ಅದನ್ನು ಕಳೆದ ವರ್ಷ ಅಕ್ಟೋಬರ್ ನಲ್ಲಿ ಹಣಕಾಸು ಸಚಿವಾಲಯವು ಅನುಮೋದಿಸಿತು. ಹೀಗಾಗಿ 2020-21ರಲ್ಲಿ ಠೇವಣಿದಾರರಿಗೆ ಶೇಕಡಾ 8.5ರ ಬಡ್ಡಿದರ ನೀಡಲು ಭವಿಷ್ಯ ನಿಧಿ ಸಂಸ್ಥೆ ಆದೇಶ ಹೊರಡಿಸಿತ್ತು.

ಇದೀಗ ಇಪಿಎಫ್ ನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ 2021-22ನೇ ಆರ್ಥಿಕ ಸಾಲಿನಲ್ಲಿ ಇಪಿಎಫ್ ಠೇವಣಿಗಳ ಮೇಲೆ ನೀಡಲಾಗುವ ಬಡ್ಡಿದರವನ್ನು ವಿವರಿಸಿ ಹಣಕಾಸು ಸಚಿವಾಲಯಕ್ಕೆ ಒಪ್ಪಿಗೆಗೆ ಕಳುಹಿಸುತ್ತದೆ. ಹಣಕಾಸು ಸಚಿವಾಲಯ ಮೂಲಕ ಸರ್ಕಾರ ಅನುಮತಿ ನೀಡಿದ ನಂತರವೇ ಇಪಿಎಫ್ಒ ಠೇವಣಿದಾರರಿಗೆ ಬಡ್ಡಿದರವನ್ನು ನೀಡುತ್ತದೆ.

ಭವಿಷ್ಯ ನಿಧಿ ಠೇವಣಿ ಮೇಲೆ 7 ವರ್ಷಗಳಲ್ಲಿ ಕಡಿಮೆ ಅಂದರೆ ಶೇಕಡಾ 8.5 ನಿಗದಿಪಡಿಸಿ ಮಾರ್ಚ್ 2020ರಲ್ಲಿ ನಿವೃತ್ತಿ ನಿಧಿ ಸಂಸ್ಥೆ(EPFO) ಆದೇಶ ಹೊರಡಿಸಿತ್ತು. 2018-19ರಲ್ಲಿ ಭವಿಷ್ಯ ನಿಧಿ ಠೇವಣಿ ಮೇಲೆ ಬಡ್ಡಿದರ ಶೇಕಡಾ 8.65ರಷ್ಟಿದ್ದದ್ದು, 2019-20ರಲ್ಲಿ ಶೇಕಡಾ 8.5ರಷ್ಟಾಗಿತ್ತು. 2012-13ರ ನಂತರ 2019-20ರಲ್ಲಿ ಶೇಕಡಾ 8.5ಕ್ಕೆ ಬಡ್ಡಿದರ ತಗ್ಗಿಸಿದ್ದು 7 ವರ್ಷಗಳಲ್ಲಿ ಅತಿ ಕಡಿಮೆಯಾಗಿತ್ತು.

ಇಪಿಎಫ್‌ಒ ತನ್ನ ಠೇವಣಿದಾರರಿಗೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು ಶೇಕಡಾ 8.8ರಷ್ಟು ಸ್ವಲ್ಪ ಹೆಚ್ಚಿತ್ತು. 2013-14 ಮತ್ತು 2014-15 ರಲ್ಲಿ 8.75 ರಷ್ಟು ಬಡ್ಡಿದರವನ್ನು ನೀಡಿತು, 2012-13ರಲ್ಲಿ ಶೇಕಡಾ 8.5ರಷ್ಟು 2011-12ರಲ್ಲಿ ಬಡ್ಡಿ ದರ ಶೇ.8.25ರಷ್ಟಿತ್ತು.