ಮನೆ ಸುದ್ದಿ ಜಾಲ ತಂದೆಯ ಅಂತ್ಯಸಂಸ್ಕಾರಕ್ಕೆ ಬಂದ ಪುತ್ರನ ಮರಣ: ಅಂಗಾಂಗ ದಾನ

ತಂದೆಯ ಅಂತ್ಯಸಂಸ್ಕಾರಕ್ಕೆ ಬಂದ ಪುತ್ರನ ಮರಣ: ಅಂಗಾಂಗ ದಾನ

0

ಚಿಕ್ಕಬಳ್ಳಾಪುರ: ತಂದೆಯ ಅಂತ್ಯಸಂಸ್ಕಾರಕ್ಕೆಂದು ದೂರದಿಂದ ಬಂದ ಪುತ್ರ ಈಗ ಮರಳಿ ಬಾರದಷ್ಟು ದೂರ ಹೋಗಿದ್ದಾನೆ. ಮತ್ತೊಂದೆಡೆ ಎರಡು ಸಾವಿನ ಆಘಾತದ ನಡುವೆಯೂ ಆ ಮಹಿಳೆಯರಿಬ್ಬರು ಮೂರ್ನಾಲ್ಕು ಜೀವ ಉಳಿಸಲು ನೆರವಾಗಿ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೌದು.. ಈ ರೀತಿಯ ಪ್ರಕರಣವೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರವೀಂದ್ರ ಎಂಬವರು ದೂರದ ಮಸ್ಕತ್​ನಲ್ಲಿ ದುಡಿಮೆಯಲ್ಲಿದ್ದರು. ಆದರೆ ತಂದೆಯ ಸಾವಿನ ಸುದ್ದಿ ಕೇಳಿ ಜನವರಿಯಲ್ಲಿ ಭಾರತಕ್ಕೆ ಮರಳಿದ್ದರು.

ತಂದೆಯನ್ನು ಕಳೆದುಕೊಂಡ ಶೋಕದಲ್ಲಿದ್ದ ರವೀಂದ್ರಗೆ ಫೆ. 28ರಂದು ಮಾರಣಾಂತಿಕ ಇಂಟ್ರಾಕಾರ್ನಿಯಲ್ ಬ್ಲೀಡ್ ಆಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ತೀವ್ರ ನಿಗಾ ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಿದರೂ ಮಾ. 9ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು.

ರವೀಂದ್ರರ ತಾಯಿ ಹಾಗೂ ಪತ್ನಿ ಇಬ್ಬರೂ ಪತಿಯ ಅಗಲಿಕೆಯ ಆಘಾತಕ್ಕೆ ಒಳಗಾದರು. ಹಾಗೆ ನೋಡಿದರೆ ಇಬ್ಬರೂ ಎರಡೆರಡು ಸಾವಿನ ಶಾಕ್​ನಿಂದ ಕಂಗೆಟ್ಟಿದ್ದರು. ಅದಾಗ್ಯೂ ಬೇರೆ ಜೀವಗಳನ್ನು ಉಳಿಸುವ ಕೆಲಸ ಮಾಡುವ ಮೂಲಕ ಅವರಿಬ್ಬರು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಂದರೆ.. ರವೀಂದ್ರರ ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ ಮಾತ್ರವಲ್ಲದೆ ಕಣ್ಣುಗಳೆರಡನ್ನೂ ಅವರು ದಾನ ಮಾಡಿದ್ದಾರೆ. ಈ ಮೂಲಕ ಬೇರೆ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8.1ಕ್ಕೆ ಇಳಿಕೆ
ಮುಂದಿನ ಲೇಖನಪುತ್ರನ ಸ್ಪರ್ಧೆಗೆ ಕ್ಷೇತ್ರ ಇತ್ಯರ್ಥವಾದ ಬಳಿಕ ಕಾಂಗ್ರೆಸ್ ಸೇರ್ಪಡೆ ತೀರ್ಮಾನ