ಬೆಂಗಳೂರು: ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್’ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಬಸ್ ಒಳಗೆ ಮಲಗಿದ್ದ ನಿರ್ವಾಹಕ ಸಜೀವ ದಹನವಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಮುತ್ತಯ್ಯ (45) ಸ್ಥಳದಲ್ಲೇ ಸಾವಿಗೀಡಾದ ಬಸ್ ನಿರ್ವಾಹಕರೆಂದು ಗುರುತಿಸಲಾಗಿದೆ.
ವಿವರ: ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ತಡರಾತ್ರಿ ಸುಮ್ಮನಹಳ್ಳಿ ಡಿಪೋಗೆ ಸೇರಿದ್ದ KA 57 F 2069 ನಂಬರಿನ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ನಿಲ್ಲಿಸಲಾಗಿತ್ತು. ಬಸ್ ನಲ್ಲಿ ನಿರ್ವಾಹಕ ಮುತ್ತಯ್ಯ ಮತ್ತು ಚಾಲಕ ಪ್ರಕಾಶ್ ಮಲಗಿದ್ದರು.
ಮುಂಜಾನೆ 4 ಗಂಟೆ ವೇಳೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಬಸ್ ಗೆ ಬೆಂಕಿ ಆವರಿಸಿದ್ದು, ಅಗ್ನಿಯ ಕೆನ್ನಾಲಿಗೆಗೆ ಬಸ್ ನೊಳಗಿದ್ದ ಮುತ್ತಯ್ಯ ಬಲಿಯಾಗಿದ್ದಾರೆ. ಅದೃಷ್ಟವಶಾತ್ ಚಾಲಕ ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಲು ಹೊರ ಹೋದಾಗ ಘಟನೆ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.













