ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150ಎ ಹಳೇಕೋಟೆ ಸಮೀಪ ಸೈಯದ್ ಕಾಸಿಂವಲಿ ದರ್ಗಾ ಹೆದ್ದಾರಿಯಲ್ಲಿ ಶುಕ್ರವಾರ (ನ.15) ಬೆಳಗಿನ ಜಾವ ಬೈಕ್ ಮತ್ತು ಅಪರಿಚಿತ ವಾಹನ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಸಿರುಗುಪ್ಪದಿಂದ ತೆಕ್ಕಲಕೋಟೆಗೆ ಪಲ್ಸರ್ ಬೈಕ್ ಮೂಲಕ ಮೂವರು ಸವಾರರು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಪಘಾತಕ್ಕೆ ಕಾರಣವಾದ ವಾಹನದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ತೆಕ್ಕಲಕೋಟೆ ಪಟ್ಟಣದ 3 ನೇ ವಾರ್ಡಿನಲ್ಲಿ ವಾಸ ಇರುವ ಕೊಲ್ಕತ್ತಾ ಮೂಲದ ಇಮ್ರಾನ್(28), ಕಲಾಂ(27) ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಹಿಂಬದಿ ಸವಾರ ಜಾಸಿಂ(25) ಗಾಯಗೊಂಡಿದ್ದು ಸಿರುಗುಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.