ಮನೆ ರಾಜಕೀಯ ಬಿಜೆಪಿ ಸೇರ್ಪಡೆ: ಸುಮಲತಾ ಇಂದು ನಿರ್ಧಾರ ಪ್ರಕಟಿಸಲಿದ್ದಾರೆ ಎಂದ ಸಿಎಂ ಬೊಮ್ಮಾಯಿ

ಬಿಜೆಪಿ ಸೇರ್ಪಡೆ: ಸುಮಲತಾ ಇಂದು ನಿರ್ಧಾರ ಪ್ರಕಟಿಸಲಿದ್ದಾರೆ ಎಂದ ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ಮಂಡ್ಯ ಸಂಸದೆ ಸುಮಲತಾ ಅವರೊಂದಿಗೆ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಮಾತುಕತೆ ನಡೆಸಿದ್ದಾರೆ. ಇಂದು ಅವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಲ್ಲಿನ ಆದರ್ಶ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಸಲ‌ ಚುನಾವಣೆ ಬಂದಾಗ ಎಲ್ಲಾ ಪಕ್ಷಗಳಲ್ಲಿ ಪಕ್ಷಾಂತರ ನಡೆಯುವುದು ಸಹಜ ಪ್ರಕ್ರಿಯೆ.‌ ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 60 ಸ್ಥಾನಗಳು ಬರುತ್ತವೆ. ಇದನ್ನೇ ಕಾಂಗ್ರೆಸ್ ನ ಡಿ.ಕೆ.‌ ಶಿವಕುಮಾರ್ ಅವರು ತಪ್ಪಾಗಿ, ಬಿಜೆಪಿಗೆ 60 ಸೀಟು ಸಿಗಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ನನ್ನ ಆಡಳಿತಾವಧಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗಿದ್ದು, ಜನರಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷದ ಚುನಾವಣೆ ಕೆಲಸಗಳು ಭರದಿಂದ ಸಾಗಿವೆ. ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದು ಮತ್ತೆ ಅಧಿಕಾರ ಹಿಡಿಯುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾರ್ಚ್ 12ಕ್ಕೆ ಮೋದಿ ಅವರು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಐಐಟಿ ಉದ್ಘಾಟನೆ, ಜಯದೇವ ಹೃದ್ರೋಗ ಆಸ್ಪತ್ರೆಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಮಹದಾಯಿ ಕಳಸಾ -ಬಂಡೂರಿ ಕಾಮಗಾರಿಗೆ ಸಂಬಂಧಿಸಿದಂತೆ, ಟೆಂಡರ್ ಕರೆಯುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಚುನಾವಣೆ ಘೋಷಣೆಗೆ ಮುಂಚೆ ಎಲ್ಲಾ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು‌ ಹೇಳಿದರು.