ಮನೆ ದೇವರನಾಮ ಶರಣು ಮೃತ್ಯುಂಜಯ ಶರಣ್ಯ

ಶರಣು ಮೃತ್ಯುಂಜಯ ಶರಣ್ಯ

0

ರಚನೆ : ಶ್ರೀ ಜಗನ್ನಾಥ ದಾಸರು

ಶರಣು ಮೃತ್ಯುಂಜಯ ಶರಣ್ಯ ಸಜ್ಜನರ ಭಯ |

ಪರಿಹರಿಪೆ ಕರುಣಾಳು ಬಿನ್ನಪವ ಕೇಳು || ಪ ||

ವಾಸವಾದ್ಯಮರನುತ ವನಜ ಸಂಭವನ ಸುತ |

ನೀ ಸಲಹು ಕೈಲಾಸವಾಸ ಈಶ |

ಕ್ಲೇಶ ಮೋದಗಳು ಸಮಾ ತಿಳಿಸೊ ಅಶ್ವತ್ಥಾಮ |

ಶ್ರೀ ಶುಕನೆ ದುರ್ವಾಸ ಸ್ಫಟಿಕ ಸಮಭಾಸಾ || 1 ||

ವೈಕಾರಿಕಾದಿತ್ಯರೂಪ ನಿನ್ನಯ ಕೋಪ |

ಶೋಕ ಕೊಡುವದು ದೈತ್ಯಜನಕೆ ನಿತ್ಯಾ |

ಲೌಕಿಕಗಳೆಲ್ಲ ವೈದಿಕವಾಗಲ್ಯೆನಗೆ

ಮೈನಾಕಿ ಹೃತ್ಕುಮುದೇಂದು ಭಕ್ತಜನ ಬಂಧು || 2 ||

ಪವಮಾನತನಯ ನಿನ್ನವರಲ್ಲಿ ಕೊಡು ವಿನಯ |

ದಿವಸ ಸವನಗಳಲ್ಲಿ ಎನ್ನಿರವ ಬಲ್ಲಿ |

ಸವನ ದ್ವಿತೀಯ ರೂಪ ಸತತ ಎನ್ನಯ ಪಾಪ |

ಅವಲೋಕಿಸದಲೆ ಎನ್ನ ಸಲಹೊ ಸುರಮಾನ್ಯ || 3 ||

ಶೇಷನಂದನ ಶೇಷಭೂಷಣ ನಿಶ್ಶೇಷ |

ದೋಷರಹಿತನ ತೋರೊ ಕರುಣವನೆ ಬೀರೊ |

ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂಬೆ |

ಶೋಷಿಸೋ ಭವಾಮಯವ ಬೇಡುವೆನೊ ದಯವ || 4 ||

ಗರ್ಗಮುನಿ ಕರಕಮಲ ಪೂಜ್ಯ ಚರಣಾಬ್ಜ ಮಮ |

ದುರ್ಗುಣಗಳೆಣಿಸದಲೆ ಜಗದಿ ಮ್ಯಾಲೆ|

ನಿರ್ಗತಾಶನ ಜಗನ್ನಾಥವಿಟ್ಠಲನ

ಸನ್ಮಾರ್ಗವನೆ ತೋರು ಈ ದೇಹ ನಿನತೇರು || 5 ||