ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 18 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬುಧವಾರ ಬೆಳಿಗ್ಗೆ 75 ಸ್ಥಳಗಳಲ್ಲಿ ಶೋಧ ಆರಂಭಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೋಪಿತ ಅಧಿಕಾರಿಗಳ ಮನೆಗಳು, ಸಂಬಂಧಿಕರು ಮತ್ತು ನಿಕಟವರ್ತಿಗಳ ಮನೆಗಳು, ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ. ಎಸಿಬಿಯ 300ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್, ಬಿಡಿಎ ನಗರ ಯೋಜನಾ ವಿಭಾಗದ ರಾಕೇಶ್ ಕುಮಾರ್, ಯಾದಗಿರಿ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಮೇಶ್ ಕಣಕಟ್ಟೆ, ಲೋಕೋಪಯೋಗಿ ಇಲಾಖೆಯ ಕೌಜಲಗಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಶೇಖರ್ ರೆಡ್ಡಿ ಪಾಟೀಲ್, ಗದಗ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಬಸವಕುಮಾರ್ ಎಸ್. ಅಣ್ಣಿಗೇರಿ, ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್ ಎಸ್.ಎನ್. ಮಳಗಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ. ಶಿವಕುಮಾರ್, ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಪಿ. ಶರಣಪ್ಪ ಖೇಡಗಿ, ರಾಮನಗರ ಉಪ ವಿಭಾಗಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್, ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಹಾವೇರಿ ಕೃಷಿ ಉತ್ಪನ್ನ ನಿಯಂತ್ರಣ ಮಾರುಕಟ್ಟೆ ಸಹಾಯಕ ಎಂಜಿನಿಯರ್ ಕೃಷ್ಣನ್, ಗುಂಡ್ಲುಪೇಟೆ ಅಬಕಾರಿ ಇನ್‌ಸ್ಪೆಕ್ಟರ್ ಚಲುವರಾಜ್, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಎಂಜಿನಿಯರ್ ಗಿರೀಶ್, ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್., ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗವಿರಂಗಪ್ಪ, ಕೃಷ್ಣಾ ಭಾಗ್ಯ ಜಲ ನಿಗಮದ ದೇವದುರ್ಗ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ರೆಡ್ಡಿ ಪಾಟೀಲ್ ಮತ್ತು ಮಂಗಳೂರಿನ ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಯಾ ಸುಂದರ್ ರಾಜು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸುತ್ತಿದೆ.
ಬಾದಾಮಿಯ ಸಾಮಾಜಿ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮನೆಯಲ್ಲಿ 3 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳು ಮತ್ತು ನೋಟು ಎಣಿಸುವ ಯಂತ್ರ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.