ಮನೆ ಸುದ್ದಿ ಜಾಲ ಗ್ರಂಥಾಲಯ ಇಲಾಖೆಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಿ: ಟಿ.ಎಸ್.ಛಾಯಾಪತಿ

ಗ್ರಂಥಾಲಯ ಇಲಾಖೆಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಿ: ಟಿ.ಎಸ್.ಛಾಯಾಪತಿ

0

ಮೈಸೂರು: ‌‌’ಏಕ ಗವಾಕ್ಷಿ ಯೋಜನೆಯಡಿ ಪುಸ್ತಕ ಖರೀದಿಸಲು ಗ್ರಂಥಾಲಯ ಇಲಾಖೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಈ ಮೂಲಕ ಪ್ರಕಾಶಕರನ್ನು ಪ್ರೋತ್ಸಾಹಿಸಬೇಕು’ ಎಂದು ಸಮ್ಮೇಳನಾಧ್ಯಕ್ಷ ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯ ಮಾಲೀಕ ಟಿ.ಎಸ್.ಛಾಯಾಪತಿ ಆಗ್ರಹಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳವಾರ ಇಲ್ಲಿ ಆಯೋಜಿಸಿದ್ದ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಪುಸ್ತಕೋದ್ಯಮ ಬಹು ಕಷ್ಟಕರ ಉದ್ಯಮ. ಒಬ್ಬ ಪ್ರಕಾಶಕ ತಾನು ಎಷ್ಟೇ ಹಣ ಹಾಕಿದರೂ ಹಿಂಪಡೆಯಲು ಒಂದು ವರ್ಷವಾದರೂ ಬೇಕು. ಈಗ ಏಕ ಗವಾಕ್ಷಿ ಯೋಜನೆಯಿದ್ದರೂ ಪುಸ್ತಕ ಸರಬರಾಜು ಮಾಡಿ ಹಣಕ್ಕೆ ಕಾಯಬೇಕಾದ ಪರಿಸ್ಥಿತಿ ಇದೆ’ ಎಂದರು.

‘ಕನ್ನಡ ಪುಸ್ತಕ ಪ್ರಕಾಶಕರ ಕನಿಷ್ಠ 300 ಪ್ರತಿಗಳು ವ್ಯಾಪಾರವಾದರೆ ಅವರು ನಿರಾಳವಾಗಿ ಉಸಿರಾಡಬಹುದು ಎಂಬುದಾಗಿ ಹಾ.ಮಾ.ನಾಯಕರು ಹೇಳುತ್ತಿದ್ದರು. ಏಕ ಗವಾಕ್ಷಿ ಯೋಜನೆಯಿಂದ ಅದು ಸಾಕಾರವಾಗಿದೆ. ಆದರೆ, ಈ ಯೋಜನೆ ಇದೆ ಎಂದು ಪ್ರಕಾಶಕರಾಗುವುದು, ಪುಸ್ತಕ ಪ್ರಕಟಿಸುವುದು ಬೇಡ. ದುರದೃಷ್ಟಕರವೆಂದರೆ ಶಿಕ್ಷಣ ಇಲಾಖೆಯ ಸಗಟು ಖರೀದಿ ಯೋಜನೆ ಸ್ಥಗಿತಗೊಳಿಸಲಾಗಿದೆ. ಪ್ರಕಾಶಕರೊಬ್ಬರು ಬೇರೆ ಬೇರೆ 25 ಸಂಸ್ಥೆಗಳ ಹೆಸರಿನಲ್ಲಿ ಪುಸ್ತಕ ಸರಬರಾಜು ಮಾಡಿ ಸಿಕ್ಕಿಬಿದ್ದರು. ಆ ಪ್ರಕಾಶಕರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಯೋಜನೆಯನ್ನೇ ಸ್ಥಗಿತಗೊಳಿಸಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಕಾಶಕನು ಲೇಖಕರಿಂದ ಹಸ್ತಪ್ರತಿ ಪಡೆದು ಮುದ್ರಕನಿಗೆ ತಲುಪಿಸಿದರೆ ಸಾಲದು. ಪ್ರಕಾಶಕನಾದವನು ಹಸ್ತಪ್ರತಿಯನ್ನು ಅವಲೋಕಿಸಿ, ಓರೆಕೋರೆಗಳ ಬಗ್ಗೆ ಲೇಖಕರೊಂದಿಗೆ ಚರ್ಚಿಸಬೇಕು. ಲೇಖಕ ಪ್ರಕಾಶಕರ ಬಾಂಧವ್ಯ‌ ಹಾಲು ಜೇನಿನಂತಿರಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯಗಳ ವಿಸ್ತರಣಾ ನಿಲಯಗಳ ವಿಸ್ತರಣಾ ವಿಭಾಗಗಳು ನಿಷ್ಕ್ರಿಯವಾಗಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಪುಸ್ತಕ ಪ್ರೀತಿ ಉಂಟು ಮಾಡುವ ಬಗ್ಗೆ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಘಗಳು, ಕನ್ನಡ ಚಳವಳಿಗಾರರು ವಿಶೇಷ ಅಸ್ಥೆ ವಹಿಸುತ್ತಿಲ್ಲ’ ಎಂದರು.

‘ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಕಾಲದಲ್ಲಿ ಪುಸ್ತಕದ ಬೆಲೆಯೂ ಹೆಚ್ಚಾಗುತ್ತಿರುವುದು ಅಸಹಜವೇನಲ್ಲ. ಆದರೆ, ಕೆಲವು ಕನ್ನಡ ಪುಸ್ತಕದ ಬೆಲೆ ಯದ್ವಾತದ್ವಾ ಹೆಚ್ಚಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಕಾರಣ ಕೇಳಿದರೆ ಕಾಗದ, ಮುದ್ರಣದ ವೆಚ್ಚದ ಬಗ್ಗೆ ಮಾತನಾಡುತ್ತಾರೆ’ ಎಂದು ನುಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೇಯರ್ ಸುನಂದಾ ಫಾಲನೇತ್ರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್.ನಂದೀಶ್ ಹಂಚೆ, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ಪಾಲ್ಗೊಂಡಿದ್ದಾರೆ.

ಹಿಂದಿನ ಲೇಖನಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಸದುಪಯೋಗಪಡಿಸಿಕೊಳ್ಳಿ: ಡಿ.ಮಾದೇಗೌಡ
ಮುಂದಿನ ಲೇಖನಆದಾಯಕ್ಕಿಂತ ಹೆಚ್ಚು ಆಸ್ತಿ: 18 ಅಧಿಕಾರಿಗಳ ಮನೆ ಮೇಲೆ ಎಸಿಬಿ ರೈಡ್