ಮನೆ ಕಾನೂನು ಖಾತೆಯೊಂದನ್ನು ವಂಚನೆ ವರ್ಗಕ್ಕೆ ಸೇರಿಸುವ ಮುನ್ನ ಸಾಲ ಪಡೆದವರ ವಾದ ಆಲಿಸಿ ತಾರ್ಕಿಕ ತೀರ್ಮಾನಕ್ಕೆ ಬರಬೇಕು:...

ಖಾತೆಯೊಂದನ್ನು ವಂಚನೆ ವರ್ಗಕ್ಕೆ ಸೇರಿಸುವ ಮುನ್ನ ಸಾಲ ಪಡೆದವರ ವಾದ ಆಲಿಸಿ ತಾರ್ಕಿಕ ತೀರ್ಮಾನಕ್ಕೆ ಬರಬೇಕು: ಸುಪ್ರೀಂ

0

ಸಾಲಗಾರನ ಖಾತೆಯನ್ನು ವಂಚನೆಗೆ ಎಸಗಿರುವ ಖಾತೆ ಎಂದು ವರ್ಗೀಕರಿಸುವ ಬ್ಯಾಂಕಿನ ನಿರ್ಧಾರ ತಾರ್ಕಿಕ ಆದೇಶವಾಗಿರಬೇಕಿದ್ದು ಸಾಲಗಾರನಿಗೆ ವಿಚಾರಣೆಯ ಅವಕಾಶ  ಒದಗಿಸಿದ ನಂತರವೇ ಅಂತಹ ಆದೇಶವನ್ನು ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

[ಎಸ್ಬಿಐ ಮತ್ತು ರಾಜೇಶ್ ಅಗರ್ವಾಲ್ ನಡುವಣ ಪ್ರಕರಣ].

ಈ ಸಂಬಂಧ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ ಎತ್ತಿಹಿಡಿಯಿತು.  

“ಸಾಲಗಾರನ ಖಾತೆಯನ್ನು ವಂಚನೆ ಎಸಗಿದ ಖಾತೆ ಎಂದು ವರ್ಗೀಕರಿಸುವ ನಿರ್ಧಾರ ತರ್ಕಬದ್ಧ ಆದೇಶವನ್ನು ಒಳಗೊಂಡಿರಬೇಕು. ಮತ್ತೊಬ್ಬ ಪಕ್ಷಕಾರನನ್ನು ಆಲಿಸಿಯೇ ಆದೇಶ ನೀಡಬೇಕು ಎಂಬ ಅಂಶವನ್ನು ಇಲ್ಲಿ ಅನ್ವಯಿಸಬೇಕು. ಸಾಲ ಪಡೆದಾತನ ಖಾತೆಗಳನ್ನು ನಿರ್ಬಂಧಿಸುವ ಮುನ್ನ ವಿಚಾರಣೆ ನಡೆಸುವ ಅಗತ್ಯವಿದೆ” ಎಂದು ಪೀಠ ನುಡಿಯಿತು.

ಸಾಂಸ್ಥಿಕ ಹಣ ಪಡೆಯದಂತೆ ಸಾಲಗಾರರಿಗೆ ನಿರ್ಬಂಧ ವಿಧಿಸುವುದು ಅವರ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಅವರನ್ನು ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ಇದು ಸಮನಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವಂಚನೆ ಖಾತೆಗಳ ಕುರಿತಂತೆ ಸಾಲಗಾರನ ವಾದ ಆಲಿಸಿಯೇ ಆದೇಶ ನೀಡಬೇಕು ಎಂಬ ನೈಸರ್ಗಿಕ ನ್ಯಾಯ ತತ್ವವನ್ನು ಆರ್ಬಿಐ ಪ್ರಧಾನ ಸುತ್ತೋಲೆಯೊಟ್ಟಿಗೆ ಸಹವಾಚನ ಮಾಡಬೇಕು ಎಂದು ಪೀಠ ತೀರ್ಪು ನೀಡಿತು.

ಆದರೆ ಎಫ್ಐಆರ್ ದಾಖಲಿಸುವ ಮುನ್ನ ವಿಚಾರಣೆಗೆ ಯಾವುದೇ ಅವಕಾಶ ನೀಡುವ ಅಗತ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಆ ಮೂಲಕ ಭಿನ್ನ ನಿಲುವು ತಳೆದು ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಅದು ಬದಿಗೆ ಸರಿಸಿತು.