ಮನೆ ಪೌರಾಣಿಕ ಗರುಡೋತ್ಪತ್ತಿ; ಅಮೃತಹರಣ

ಗರುಡೋತ್ಪತ್ತಿ; ಅಮೃತಹರಣ

0

ಗರುಡೋತ್ಪತ್ತಿಯ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಆಸ್ತೀಕ ಪರ್ವ (ಅಧ್ಯಾಯ ೨೦-೩೦) ದಲ್ಲಿ ಬರುತ್ತದೆ. ಈ ಕಥೆಯನ್ನು ಸೂತ ಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಹೇಳಿದನು.

ಹಿಂದೆ ದೇವಯುಗದಲ್ಲಿ ಪ್ರಜಾಪತಿ ಬ್ರಹ್ಮನಿಗೆ ಈರ್ವರು ರೂಪವತಿ ಶುಭರೂ ಅನಘರೂ ಆದ ಸುತೆಯರಿದ್ದರು. ಅವರೇ ಕಶ್ಯಪನ ಭಾರ್ಯೆಯರಾದ ಕದ್ರು ಮತ್ತು ವಿನತ. ಪ್ರಜಾಪತಿ ಕಶ್ಯಪನು ಸಂತಾನಕ್ಕೋಸ್ಕರ ಯಜ್ಞವನ್ನು ಕೈಗೊಂಡಾಗ ಋಷಿ-ದೇವತೆ-ಗಂಧರ್ವರೆಲ್ಲರೂ ಬಹಳಷ್ಟು ಸಹಾಯಮಾಡಿದರು. ಕಶ್ಯಪನು ಇಂದ್ರ, ವಾಲಖಿಲ್ಯ ಮುನಿವರ್ಯರು ಮತ್ತು ಇತರ ದೇವಗಣಗಳಿಗೆ ಸಮಿತ್ತುಗಳನ್ನು ತರುವ ಕಾರ್ಯವನ್ನು ವಹಿಸಿದ್ದನು. ಇಂದ್ರನು ಸ್ವಲ್ಪವೂ ಆಯಾಸವಿಲ್ಲದೇ ತನ್ನ ಶಕ್ತಿಗನುಗುಣವಾದ ಒಂದು ಪರ್ವತದಷ್ಟು ಸಮಿತ್ತುಗಳನ್ನು ಹೊತ್ತು ತಂದನು. ದಾರಿಯಲ್ಲಿ ಅವನು ಅಂಗುಷ್ಟದಷ್ಟು ಸಣ್ಣ ಗಾತ್ರದವರಾಗಿದ್ದ ಋಷಿಗಳೆಲ್ಲರೂ ಸೇರಿ ಒಂದೇ ಒಂದು ಪಲಾಶದ ಕಡ್ಡಿಯನ್ನು ಹೊತ್ತು ತರುತ್ತಿರುವುದನ್ನು ನೋಡಿದನು. ನಿರಾಹಾರದಿಂದ ಬಡಕಲಾಗಿದ್ದ ಆ ತಪೋಧನರು ಮಾರ್ಗದಲ್ಲಿ ಗೋವಿನ ಹೆಜ್ಜೆಯಿಂದ ಉಂಟಾಗಿದ್ದ ಕುಣಿಯೊಂದನ್ನು ನೋಡದೇ ಅದರಲ್ಲಿ ಬಿದ್ದು ಸಾಕಷ್ಟು ಹಿಂಸೆಗೊಳಗಾದರು. ಇದೆಲ್ಲವನ್ನೂ ನೋಡಿ ವೀರ್ಯಮತ್ತ ಇಂದ್ರನು ಅವರನ್ನು ಅಪಹಾಸ್ಯ ಮಾಡಿ ನಗುತ್ತಾ ವೇಗದಿಂದ ಅವರನ್ನು ದಾಟಿ ಹೋದನು. ಈ ಅಪಮಾನದಿಂದ ಅವರಿಗೆ ಅತಿ ಕೋಪವುಂಟಾಯಿತು. ದುಃಖ-ರೋಷಸಮಾವಿಷ್ಟರಾದ ಅವರು ಇಂದ್ರನಿಗೆ ಭಯವನ್ನುಂಟುಮಾಡುವ ಒಂದು ಮಹಾಯಜ್ಞವನ್ನು ಆರಂಭಿಸಿದರು. “ದೇವರಾಜನಿಗೆ ಭಯಪ್ರದ ಕಾಮವೀರ್ಯ ಮತ್ತು ಕಾಮಗಾಮಿಯಾದ ಬೇರೊಬ್ಬ ಸರ್ವದೇವತೆಗಳ ಇಂದ್ರನು ಬರಲಿ. ನಮ್ಮ ಈ ತಪಸ್ಸಿನಿಂದ ಇಂದ್ರನಿಗಿಂತಲೂ ನೂರುಪಟ್ಟು ವೀರ್ಯ-ಶೌರ್ಯಗಳಿರುವ ಮನೋವೇಗೀ ದಾರುಣನೋರ್ವನ ಉತ್ಪತ್ತಿಯಾಗಲಿ!” ಎಂದು ಹೇಳಿ ಆ ಸುತಪಸ್ವಿಗಳು ವಿಧಿವತ್ತಾಗಿ ಯಜ್ಞೇಶ್ವರನಲ್ಲಿ ಮಂತ್ರೋಚ್ಛಾರಣೆಗಳೊಂದಿಗೆ ಹವಿಸ್ಸನ್ನು ಹಾಕಿದರು.

ಇದನ್ನು ತಿಳಿದು ಭಯಸಂತಪ್ತನಾದ ಶತಕ್ರತು ದೇವರಾಜ ಇಂದ್ರನು ಕಶ್ಯಪನ ಶರಣು ಹೊಕ್ಕನು. ದೇವರಾಜನ ಮಾತುಗಳನ್ನು ಕೇಳಿದ ಕಶ್ಯಪನು ವಾಲಖಿಲ್ಯರ ಬಳಿಬಂದು ಅವರ ಕರ್ಮಸಿದ್ಧಿಯ ಕುರಿತು ವಿಚಾರಿಸಿದನು. ಆ ಸತ್ಯವಾದಿಗಳು “ಇದು ಹಾಗೆಯೇ ಆಗುತ್ತದೆ!” ಎಂದಾಗ, ಅವರನ್ನು ಸಾಂತ್ವನಗೊಳಿಸಲು ಕಶ್ಯಪನು ಹೇಳಿದನು: “ಈ ಇಂದ್ರನು ಮೂರು ಲೋಕಗಳ ಇಂದ್ರನೆಂದು ಬ್ರಹ್ಮನೇ ನಿಯುಕ್ತಗೊಳಿಸಿದ್ದಾನೆ. ತಪೋಧನರಾದ ನೀವು ಇನ್ನೊಬ್ಬ ಇಂದ್ರನಿಗಾಗಿ ಪ್ರಯತ್ನಿಸುತ್ತಿದ್ದೀರಿ. ಬ್ರಹ್ಮವಾಕ್ಯವನ್ನು ಸುಳ್ಳುಮಾಡುವುದು ಸರಿಯಲ್ಲ. ನಿಮ್ಮ ಸಂಕಲ್ಪವನ್ನು ಸುಳ್ಳಾಗಿಸಲೂ ನನಗೆ ಇಷ್ಟವಿಲ್ಲ. ಅತಿಬಲನೂ ಸತ್ಯವಂತನೂ ಆದ ಪಕ್ಷಿಗಳ ಇಂದ್ರನೋರ್ವನಾಗಲಿ. ಯಾಚಿಸುತ್ತಿರುವ ದೇವೇಂದ್ರನ ಮೇಲೆ ಪ್ರಸನ್ನರಾಗಿರಿ!”

ಕಶ್ಯಪನು ಹೀಗೆ ಹೇಳಲು ತಪೋಧನ ವಾಲಖಿಲ್ಯರು ಅವನನ್ನು ನಮಸ್ಕರಿಸಿ ಉತ್ತರಿಸಿದರು: “ಪ್ರಜಾಪತೇ! ನಮ್ಮ ಈ ಕಾರ್ಯಗಳೆಲ್ಲವೂ ಇಂದ್ರನನ್ನು ಸೃಷ್ಟಿಸುವುದಕ್ಕಾಗಿ. ನಿನಗೆ ನಿನಗಿಷ್ಟವಾದ ಮಗನು ಹುಟ್ಟಲೆಂದೇ ಈ ಕಾರ್ಯವು ನಡೆಯುತ್ತಿದೆ. ಆದುದರಿಂದ ಈ ಸಫಲ ಕರ್ಮವನ್ನು ನೀನು ಪ್ರತಿಗ್ರಹಿಸಬೇಕು. ನೀನು ಹೇಗೆ ಶ್ರೇಯಸ್ಸನ್ನು ಕಾಣುತ್ತೀಯೋ ಹಾಗೆ ನಡೆಸಿಕೋ!”

ಧರ್ಮಪತ್ನಿಯರಿಂದ ಪರಮ ಸುಖವನ್ನುಹೊಂದಿದ ಪ್ರಜಾಪತಿಸಮ ಪತಿ ಕಶ್ಯಪನು ಅವರೀರ್ವರಿಗೆ ಪ್ರೀತಿಯ ವರಗಳನ್ನಿತ್ತನು. ಕಶ್ಯಪನು ಉತ್ತಮ ವರಗಳನ್ನು ನೀಡಲಿದ್ದಾನೆ ಎಂದು ಕೇಳಿ ಆ ವರಸ್ತ್ರೀಯರಿಬ್ಬರಿಗೂ ಹರ್ಷ-ಪ್ರೀತಿಗಳುಂಟಾದವು. ಕದ್ರುವು ತೇಜಸ್ಸಿನಲ್ಲಿ ಸರಿಸಮರಾದ ಸಹಸ್ರ ನಾಗಗಳನ್ನು ತನ್ನ ಪುತ್ರರನ್ನಾಗಿ ಕೇಳಿದಳು. ಕದ್ರುವಿನ ಪುತ್ರರಿಗಿಂತ ಅಧಿಕ ಬಲಾನ್ವಿತ ಓಜಸ್ಸು-ತೇಜಸ್ಸು-ವಿಕ್ರಮಗಳಲ್ಲಿ ಅಧಿಕರಾದ ಈರ್ವರು ಪುತ್ರರನ್ನು ವಿನತೆಯು ಕೇಳಿಕೊಂಡಳು. ಅವರ ಪತಿ ಕಶ್ಯಪನು ಕದ್ರು-ವಿನತೆಯರಿಗೆ “ಹಾಗೆಯೇ ಆಗಲಿ!” ಎಂದು ಬೇಡಿದ ಪುತ್ರರ ವರವನ್ನಿತ್ತನು. ಅಧಿಕವೀರ್ಯ ಸುತರೀರ್ವರನ್ನು ಪಡೆದ ವಿನತೆ ಮತ್ತು ಸರಿಸಮ ತೇಜೋವಂತ ಸಹಸ್ರ ಪುತ್ರರನ್ನು ಪಡೆದ ಕದ್ರು ಇಬ್ಬರೂ ಕೃತಕೃತ್ಯರಾದರು. “ಗರ್ಭವನ್ನು ಜಾಗ್ರತೆಯಲ್ಲಿ ಧರಿಸಿರಿ!” ಎಂದು ಹೇಳಿ ವರಗಳನ್ನಿತ್ತು ಭಾರ್ಯೆಯರನ್ನು ಸಂತುಷ್ಟಗೊಳಿಸಿ ಆ ಮಹಾತಪ ಕಶ್ಯಪನು ವನವನ್ನು ಸೇರಿದನು.

ಬಹಳಕಾಲದ ನಂತರ ಕದ್ರುವು ಒಂದು ಸಾವಿರ ಅಂಡಗಳಿಗೆ ಮತ್ತು ವಿನತೆಯು ಎರಡು ಅಂಡಗಳಿಗೆ ಜನ್ಮವಿತ್ತರು. ಸಂತೋಷಗೊಂಡ ಅವರ ಪರಿಚಾರಿಕೆಯರು ಆ ಅಂಡಗಳನ್ನು ಪ್ರತ್ಯೇಕ ಬಿಸಿ ಪಾತ್ರೆಗಳಲ್ಲಿ ಇಟ್ಟರು. ಹೀಗೆ ಐದು ನೂರು ವರ್ಷಗಳು ಕಳೆದವು. ಐದುನೂರು ವರ್ಷಗಳ ನಂತರ ಕದ್ರುವಿನ ಮಕ್ಕಳು ಅಂಡಗಳಿಂದ ಹೊರಬಂದರು. ಆದರೆ ವಿನತೆಯ ಎರಡು ಅಂಡಗಳು ಒಡೆಯಲೇ ಇಲ್ಲ. ಆಗ ನಾಚಿಕೊಂಡ ಪುತ್ರಾರ್ಥಿ ವಿನತೆಯು ತನ್ನ ಒಂದು ಅಂಡವನ್ನು ಒಡೆದು ಅದರಲ್ಲಿದ್ದ ತನ್ನ ಪುತ್ರನನ್ನು ನೋಡಿದಳು. ಮೇಲಿನ ದೇಹ ಮಾತ್ರ ಬೆಳೆದು ಕೆಳಗಿನ ಭಾಗ ಇನ್ನೂ ಬೆಳೆಯದೇ ಇದ್ದ ಆ ಪುತ್ರನು ರೋಷಸಂಪನ್ನನಾಗಿ ತಾಯಿಗೆ ಶಾಪವನ್ನಿತ್ತನು: “ಮಾತಾ! ದುರಾಸೆಯಿಂದ ಮೊಟ್ಟೆಯನ್ನು ಒಡೆದು ಅಸಮ ಶರೀರನಾದ ನನ್ನನ್ನು ಹೊರತಂದೆ. ಆದುದರಿಂದ ನೀನು ಮುಂದೆ ದಾಸಿಯಾಗುತ್ತೀಯೆ! ಇನ್ನೂ ಐದುನೂರು ವರ್ಷಗಳು ತಾಳ್ಮೆಯಿಂದ ಈ ಇನ್ನೊಂದು ಅಂಡವನ್ನು ಒಡೆಯದೇ ಕಾದರೆ ಅದರಿಂದ ಹುಟ್ಟುವ ನಿನ್ನ ಸುತನು ನಿನ್ನನ್ನು ದಾಸತ್ವದಿಂದ ಮುಕ್ತಗೊಳಿಸುತ್ತಾನೆ! ನೀನು ಈ ಅಂಡವನ್ನು ಒಡೆದು ತಪಸ್ವಿ ಕಶ್ಯಪನ ಇನ್ನೊಬ್ಬ ಮಗನನ್ನು ನನ್ನ ಗಾಗೆ ವ್ಯಂಗ ದೇಹವುಳ್ಳವನನ್ನಾಗಿ ಮಾಡದೇ ಇದ್ದರೆ ಮಾತ್ರ ಇದು ಹೀಗಾಗಲು ಸಾಧ್ಯ. ಅವನು ವಿಶಿಷ್ಟ ಬಲಶಾಲಿಯಾಗಿರಬೇಕೆಂದು ಬಯಸುವೆಯಾದರೆ ನೀನು ಐದುನೂರು ವರ್ಷಗಳ ಪರ್ಯಂತ ಅವನನ್ನು ವಿಶೇಷವಾಗಿ ಪರಿಪಾಲಿಸಬೇಕು!” ಈ ರೀತಿ ಶಾಪವನ್ನಿತ್ತು ವಿನತೆಯ ಪುತ್ರನು ಅಂತರಿಕ್ಷವನ್ನೇರಿದನು. ಸದಾ ಪ್ರಭಾತಸಮಯದಲ್ಲಿ ಕಾಣುವ ಅರುಣನೇ ಅವನು.

ರಾತ್ರಿ ಕಳೆದು ಪ್ರಭಾತದಲ್ಲಿ ರವಿಯು ಉದಯಿಸುತ್ತಿದ್ದಂತೆ ದಾಸ್ಯತ್ವದ ಪ್ರಣವನ್ನಿಟ್ಟು ಆತಂಕಗೊಂಡಿದ್ದ ಅಕ್ಕ-ತಂಗಿ ಕದ್ರು-ವಿನತೆಯರು ಕುದುರೆ ಉಚ್ಛೈಶ್ರವಸ್ಸುವನ್ನು ನೋಡಲು ಹೊರಟರು. ಆಗ ಅಲ್ಲಿ ಅವರು ತಿಮಿಂಗಿಲು-ಮೊಸಳೆಗಳ ಕೂಗಿನಿಂದ ತುಂಬಿದ್ದ ನೀರಿನ ಸಮುದ್ರವನ್ನು ಕಂಡರು. ಅದು ನಾನಾ ರೂಪದ ಸಹಸ್ರಾರು ಜೀವಿಗಳ, ಉಗ್ರ ಜಂತುಗಳ ಮತ್ತು ಆಮೆಗಳ ಸಂಕುಲಗಳಿಂದ ತುಂಬಿತ್ತು. ಸರ್ವ ರತ್ನಗಳ ಆಗರ, ವರುಣನ ಆಲಯ, ಸರ್ಪಗಳ ಆಲಯ, ರಮ್ಯ ಉತ್ತಮ ಸರಿತಾ ಪತಿಯನ್ನು ಅವರು ನೋಡಿದರು. ಅಂತ್ಯವಿಲ್ಲದ ಆಳದ ವರೆಗೂ ನೀರಿನಿಂದ ತುಂಬಿರುವ ಆ ಸಮುದ್ರದಲ್ಲಿ ಸಾತ್ವಿಕರಿಗೆ ಭಯಂಕರ ಅಸುರರ ಬಂಧನಸ್ಥಾನವಾದ ಪ್ರಜ್ವಲಿಸುವ ಪಾತಾಳವಿದೆ. ಆ ಶುಭ ಸಮುದ್ರವು ದೇವತೆಗಳಿಗೆ ಪರಮಾಮೃತದ ಆಕರವೂ, ಅಪ್ರಮೇಯವೂ, ಅಚಿಂತ್ಯವೂ, ಸುಪುಣ್ಯವೂ ಮತ್ತು ಅದ್ಭುತವೂ ಆದ ಜಲಾಶಯವಾಗಿತ್ತು. ಘೋರ ಜಲಚರಗಳ ರೌದ್ರ ಗರ್ಜನೆಗಳಿಂದ ಮತ್ತು ಗಂಭೀರ ಸುಳಿಗಳಿಂದ ಕೂಡಿದ ಅದು ಸರ್ವರಿಗೂ ಭಯಂಕರವಾಗಿತ್ತು. ಕೈಗಳನ್ನು ಮೇಲೆತ್ತಿ ನರ್ತಿಸುತ್ತಿರುವಂತೆ ಎಲ್ಲೆಡೆಯೂ ಭಿರುಗಾಳಿಯಿಂದ ಅಲ್ಲೋಲ-ಕಲ್ಲೋಲಗೊಂಡು ಕ್ಷೋಭೋದ್ವೇಗಗಳೊಂದಿಗೆ ಬರುತ್ತಿರುವ ಅಲೆಗಳು ಕುಣಿಯುತ್ತಿದ್ದವು. ಚಂದ್ರನ ವೃದ್ಧಿ-ಕ್ಷಯಗಳೊಂದಿಗೆ ಏರಿಳಿಯುತ್ತಿದ್ದ ಆ ಅನುತ್ತಮ ಸುಮುದ್ರದಲ್ಲಿಯೇ ಪಾಂಚಜನ್ಯನ ಜನ್ಮವಾಗಿತ್ತು. ಅಮಿತತೇಜಸ್ವಿ ಭಗವಂತ ಗೋವಿಂದನು ಹಂದಿಯ ರೂಪವನ್ನು ಧರಿಸಿ ಆ ಸಮುದ್ರದ ಜಲವನ್ನು ಅಲ್ಲೋಲಕಲ್ಲೋಲಗೊಳಿಸಿ ಅದರಿಂದ ಭೂಮಿಯನ್ನು ಮೇಲೆತ್ತಿದ್ದನು. ಬ್ರಹ್ಮರ್ಷಿ ಅತ್ರಿಯು ನೂರುವರ್ಷ ತಪಸ್ಸನ್ನಾಚರಿಸಿದರೂ ಪಾತಾಳಕ್ಕಿಂತಲೂ ಅಡಿಯಲ್ಲಿರುವ ಇದರ ಆಳವನ್ನು ಅಳೆಯಲು ಸಮರ್ಥನಾಗಲಿಲ್ಲ. ಅಮಿತ ತೇಜಸ ಪದ್ಮನಾಭ ವಿಷ್ಣುವು ಯುಗದ ಆದಿಕಾಲದಲ್ಲಿ ಆಧ್ಯಾತ್ಮಯೋಗನಿದ್ರೆಯಲ್ಲಿದ್ದಾಗ ಇದು ಅವನಿಗೆ ಹಾಸಿಗೆಯಾಗಿ ಸೇವೆ ಸಲ್ಲಿಸಿತ್ತು. ವಡವನ ಬಾಯಿಯಿಂದ ಹೊರಹೊಮ್ಮಿ ಪ್ರಜ್ವಲಿಸುತ್ತಿರುವ ಅಗ್ನಿಗೆ ಅಗಾಧ-ಅಪಾರ-ಅಪ್ರಮೇಯ ವಿಸ್ತೀರ್ಣವನ್ನು ಹೊಂದಿದ ಆ ಶುಭ ಸಮುದ್ರನೇ ಹವಿಸ್ಸಾಗಿದ್ದನು. ಸಹಸ್ರಾರು ಮಹಾನದಿಗಳು ಮತ್ತು ತೊರೆಗಳು ಪ್ರಿಯನನ್ನು ಸೇರಲು ಸ್ಪರ್ಧಿಸುತ್ತಿರುವ ಅಭಿಸಾರಿಕೆಯರಂತೆ ಮಹಾಸಾಗರದೆಡೆಗೆ ಓಡಿ ಬರುತ್ತಿರುವುದನ್ನು ಅವರು ನೋಡಿದರು. ತಿಮಿಂಗಿಲ-ಮಕರ ಸಂಕುಲಗಳ ಉಗ್ರ ಗರ್ಜನೆ ಮತ್ತು ಇತರ ಜಲಚರಗಳ ರೌದ್ರ ನಾದಗಳಿಂದ ಪ್ರತಿಧ್ವನಿಸುತ್ತಿದ್ದ, ಗಗನದ ಪ್ರಕಾಶವನ್ನು ವಿಸ್ತೀರ್ಣವಾಗಿ ಪ್ರತಿಬಿಂಬಿಸುತ್ತಿದ್ದ ಆ ಅಗಾಧ ಮತ್ತು ಗಂಭೀರವಾದ ನೀರಿನ ಅನಂತ ನಿಧಿಯನ್ನು ಅವರು ನೋಡಿದರು. ಹೀಗೆ ಮೊಸಳೆ-ಮೀನುಗಳ ಸಂಕುಲವಿದ್ದ, ಆಕಾಶದ ಪ್ರಕಾಶವನ್ನು ಭಿತ್ತರಿಸುತ್ತಿದ್ದ, ಪಾತಾಳದಲ್ಲಿ ಉರಿಯುತ್ತಿದ್ದ ಅಗ್ನಿಯಿಂದ ಬೆಳಗುತ್ತಿದ್ದ ಆ ಗಂಭೀರ ಸಮುದ್ರವನ್ನು ನೋಡುತ್ತಾ ಅವರು ಅದನ್ನು ಪಾರುಮಾಡಿದರು.

ಶೀಘ್ರವಾಗಿ ಆ ಸಮುದ್ರವನ್ನು ಅತಿಕ್ರಮಿಸಿ ವಿನತೆಯ ಸಹಿತ ಕದ್ರುವು ತಕ್ಷಣವೇ ಆ ತುರಗದ ಬಳಿ ಬಂದಿಳಿದಳು. ಬಾಲವು ಕಪ್ಪು ಕೂದಲುಗಳಿಂದ ಸುತ್ತಿಕೊಂಡಿದುದನ್ನು ನೋಡಿ ವಿಷಣ್ಣವದನಳಾದ ವಿನತೆಯು ಕದ್ರುವಿನ ದಾಸಿಯಾಗಿ ನಿಯೋಜಿತಗೊಂಡಳು. ಆ ಪಣದಿಂದ ಪರಾಜಿತಳಾದ ವಿನತೆಯು ತನಗೊದಗಿದ ದಾಸೀಭಾವದಿಂದ ಅತ್ಯಂತ ದುಃಖಸಂತಪ್ತಳಾದಳು.

ಈ ಮಧ್ಯೆ ಕಾಲಬಂದಂತೆ ಮಹಾತೇಜಸ್ವಿ ಗರುಡನು ಯಾರ ಸಹಾಯವೂ ಇಲ್ಲದೇ ಅಂಡವನ್ನು ಒಡೆದು ಹೊರಬಂದನು. ಅಗ್ನಿರಾಶಿಯಂತೆ ಬೆಳಗುತ್ತಾ ಅತಿಭಯಂಕರನಾಗಿ ಉರಿಯುತ್ತಿರುವ ಆ ಪಕ್ಷಿಯು ತಕ್ಷಣವೇ ಮಹಾಕಾಯನಾಗಿ ಬೆಳೆದು ಗಗನವನ್ನೇರಿದನು. ಅವನನ್ನು ನೋಡಿದ ಸರ್ವಪ್ರಜೆಗಳು ವಿಭಾವಸು ಅಗ್ನಿದೇವನನ್ನು ಮೊರೆಹೊಕ್ಕರು. ಕುಳಿತಿರುವ ವಿಶ್ವರೂಪಿಯನ್ನು ನಮಸ್ಕರಿಸಿ “ಅಗ್ನಿದೇವ! ನಿನ್ನ ಕಾಯವನ್ನು ಇನ್ನೂ ಎಷ್ಟು ಬೆಳೆಸುತ್ತಿದ್ದೀಯೆ? ಈ ನಿನ್ನ ದೊಡ್ಡ ರಾಶಿಯೇ ಎಲ್ಲ ಕಡೆ ಹರಡಿಕೊಂಡಿದೆ!” ಎಂದು ವಿನಂತಿಸಿಕೊಂಡರು. ಆಗ ಅಗ್ನಿಯು ಅವರಿಗೆ “ಅಸುರಾರ್ದನರೇ! ನೀವು ತಿಳಿದುಕೊಂಡ ಹಾಗೆ ಇಲ್ಲ. ಅವನು ನನ್ನ ಸರಿಸಮಾನ ತೇಜಸ್ಸುಳ್ಳ ಬಲವಾನ್ ಗರುಡ!” ಎಂದನು. ಇದನ್ನು ಕೇಳಿದ ದೇವತೆಗಳು ಋಷಿಗಣಗಳೊಂದಿಗೆ ಗರುಡನಲ್ಲಿಗೆ ಹೋಗಿ ದೂರದಲ್ಲಿಯೇ ನಿಂತು ಅವನನು ಸ್ತುತಿಸಿ ಪ್ರಾರ್ಥಿಸಿದರು: “ಪತಗೇಶ್ವರ! ನೀನು ಋಷಿ. ಮಹಾಭಾಗ. ನೀನು ದೇವ. ನೀನು ಪ್ರಭು. ಸೂರ್ಯನ ಉರಿಯುತ್ತಿರುವ ಕಿರಣ. ನಿನ್ನ ಸರಿಸಾಟಿ ಯಾರೂ ಇಲ್ಲ. ಬಲಶಾಲಿಯಾದರೂ ನೀನು ಸಾಧು. ಸತ್ತ್ವವು ನಿನ್ನ ಅಧೀನದಲ್ಲಿದೆ. ನೀನು ಸಮೃದ್ಧಿವಂತ ಮತ್ತು ದುಷ್ಪ್ರಸಹ. ನೀನು ತಪಸ್ಸು ಮತ್ತು ಕ್ಷೀಣವಾಗದ ಕೀರ್ತಿ. ಕೇಲಿದುದೆಲ್ಲವೂ, ನಡೆದುದೆಲ್ಲವೂ ಮತ್ತು ನಡೆಯುವಂಥಹುದೆಲ್ಲವೂ ನೀನೇ. ಇಲ್ಲಿರುವ ಸರ್ವ ಚರಾಚರಗಳಲ್ಲಿ ಸುರ್ಯನ ಪ್ರಕಾಶವನ್ನೇ ಗ್ರಹಣಗೊಳಿಸುವ ನೀನು ಉತ್ತಮ. ಸೂರ್ಯನ ಪ್ರಭೆಯನ್ನೂ ಮೀರಿದ ನೀನು ನಿಶ್ಚಿತ-ಅನಿಶ್ಚಿತಗಳೆಲ್ಲವುದಕ್ಕೂ ಅಂತಕ. ಪರಿಕುಪಿತ ದಿವಾಕರನು ಹೇಗೆ ಸುಡುತ್ತಾನೋ ಹಾಗೆ ಪ್ರಜೆಗಳು ನಿನ್ನ ಈ ಹುತಾಶನಪ್ರಭೆಯಿಂದ ಸುಡುತ್ತಿದ್ದಾರೆ. ಯುಗವನ್ನು ವಿನಾಶಮಾಡಿ ಪರಿವರ್ತನೆಯನ್ನೇ ಅಂತ್ಯಗೊಳಿಸುವ ಭಯಂಕರ ಪ್ರಲಯಾಗ್ನಿಯಂತೆ ನಿಂತಿರುವೆ! ಖಗೇಶ್ವರ! ಮಹೌಜಸ! ವರದ! ಪರಾವರ! ಗರುಡ! ನಾವೆಲ್ಲ ನಿನ್ನ ಶರಣು ಬಂದಿದ್ದೇವೆ.” ಋಷಿಗಣಗಳ ಸಹಿತ ದೇವತೆಗಳು ಈ ರೀತಿ ಸ್ತುತಿಸಲು ಸುಪರ್ಣ ಗರುಡನು ತನ್ನ ತೇಜಸ್ಸು-ಗಾತ್ರಗಳನ್ನು ಕಡಿಮೆಮಾಡಿಕೊಂಡನು.

ನಂತರ ಇಚ್ಛೆಯಿದ್ದಲ್ಲಿಗೆ ಹೋಗಬಲ್ಲ ಆ ಮಹಾವೀರ ಮಹಾಬಲ ಪಕ್ಷಿಯು ಸಾಗರದ ಇನ್ನೊಂದು ತೀರದಲ್ಲಿದ್ದ ತಾಯಿಯ ಬಳಿ ಬಂದನು. ಅಲ್ಲಿ ಪಣವನ್ನು ಸೋತು ದಾಸೀಭಾವವನ್ನು ಹೊಂದಿದ್ದ ವಿನತೆಯು ಅತ್ಯಂತ ದುಃಖಸಂತಪ್ತಳಾಗಿದ್ದಳು.

ಅಲ್ಲಿ ಒಮ್ಮೆ ಕದ್ರುವು ವಿನತೆಯನ್ನು ಕರೆದು ಪುತ್ರನ ಸನ್ನಿಧಿಯಲ್ಲಿ ನಮಸ್ಕರಿಸಿ ನಿಂತಿದ್ದ ಅವಳಿಗೆ “ಭದ್ರೇ ವಿನತೇ! ಸಮುದ್ರತಳದಲ್ಲಿರುವ ರಮ್ಯವೂ ರಮಣೀಯವೂ ಆದ ನಾಗಗಳ ಆಲಯದ ಏಕಾಂತಕ್ಕೆ ನನ್ನನ್ನು ಕರೆದೊಯ್ಯಿ!” ಎಂದಳು. ಆಗ ಗರುಡನ ಮಾತೆಯು ಸರ್ಪಗಳ ಮಾತೆಯನ್ನು ಹಾಗೆಯೇ ತಾಯಿಯ ಮಾತಿನಿಂತೆ ಗರುಡನು ಸರ್ಪಗಳನ್ನು ತನ್ನ ಭುಜದಮೇಲೆ ಹೊತ್ತು ಹೊರಟರು. ವೈನತೇಯ ಗರುಡನು ಸೂರ್ಯನ ಕಡೆ ಏರುತ್ತಿರುವಾಗ ಸೂರ್ಯನ ಕಿರಣಗಳು ತಾಗಿ ಸರ್ಪಗಳೆಲ್ಲವೂ ಮೂರ್ಛಿತಗೊಂಡವು. ಮಕ್ಕಳ ಆ ಅವಸ್ಥೆಯನ್ನು ಕಂಡು ಕದ್ರುವು ಇಂದ್ರನನ್ನು ಸ್ತುತಿಸಿದಳು: “ದೇವದೇವೇಶ! ನಿನಗೆ ನಮನಗಳು. ಬಲಸೂದನ! ನಿನಗೆ ನಮನಗಳು. ನಮೂಚಿಘ್ನ! ನಿನಗೆ ನಮನಗಳು. ಸಹಸ್ರಾಕ್ಷ! ಶಚೀಪತೇ! ನಿನಗೆ ನಮನಗಳು. ಸೂರ್ಯನಿಂದ ಸುಡುತ್ತಿರುವ ಸರ್ಪಗಳನ್ನು ಮಳೆಸುರಿಸಿ ಉಳಿಸು! ಅಮರೋತ್ತಮ! ನೀನೊಬ್ಬನೇ ನಮ್ಮ ಉಕೃಷ್ಟ ತ್ರಾಣ. ಪುರಂದರ! ನೀನು ಮಳೆಯ ಪ್ರಭು ಮತ್ತು ಬೇಕಾದಷ್ಟು ಮಳೆಯನ್ನು ಸುರಿಸಬಲ್ಲೆ. ನೀನೇ ಮೋಡ. ನೀನೇ ವಾಯು. ಅಂಬರದಲ್ಲಿ ಬೆಳಗುವ ಮಿಂಚೂ ನೀನೇ. ಮೋಡಗಳನ್ನು ಒಟ್ಟುಮಾಡುವವನೂ ನೀನೇ. ಮೋಡಗಳನ್ನು ಚದುರಿಸುವವನೂ ನೀನೇ. ನೀನು ಘೋರ ಗುಡುಗು ಮತ್ತು ಘೋಷಗೈಯುವ ಮೋಡಗಳೂ ನೀನೇ. ಲೋಕಗಳನ್ನು ಸೃಷ್ಟಿಸುವವನೂ ಮತ್ತು ಸಂಹರಿಸುವನೂ ನೀನೇ. ನೀನು ಅಪರಾಜಿತ. ಸರ್ವಭೂತಗಳಲ್ಲಿರುವ ಜ್ಯೋತಿಯು ನೀನು. ನೀನೇ ಆದಿತ್ಯ, ವಿಭಾವಸು. ನೀನು ಮಹಾ ಅದ್ಭುತ ಮತ್ತು ಆಶ್ಚರ್ಯ. ನೀನು ರಾಜ. ಸುರೋತ್ತಮ. ನೀನು ವಿಷ್ಣು. ನೀನು ಸಹಸ್ರಾಕ್ಷ. ನೀನು ದೇವ ಮತ್ತು ಪರಾಯಣನೂ ನೀನೇ. ದೇವ! ನಿನ್ನ ಸರ್ವವೂ ಅಮೃತ. ನೀನು ಪರಮಾರ್ಚಿತ ಸೋಮ. ಮುಹೂರ್ತ, ತಿಥಿ, ಲವ, ಕ್ಷಣ ಇವೆಲ್ಲವೂ ನೀನೇ. ಶುಕ್ಲವೂ ನೀನೇ, ಬಹುಳವೂ ನೀನೇ. ಕಾಲ-ಕಾಷ್ಟ-ತ್ರುಟಿಗಳೂ ನೀನೇ. ಸಂವತ್ಸರವೂ ನೀನೇ. ಮಾಸ-ರಾತ್ರಿ-ಹಗಲುಗಳು ಕೂಡ ನೀನೇ. ಗಿರಿ-ವನಗಳಿಂದ ಕೂಡಿರುವ ಉತ್ತಮ ವಸುಂಧರೆಯೂ ನೀನೇ. ಕತ್ತಲೆಯನ್ನು ದೂರಮಾಡುವ ಭಾಸ್ಕರನಿರುವ ಅಂಬರವೂ ನೀನೇ. ಮಹಾ ತಿಮಿಂಗಿಲ, ಮೊಸಳೆ ಮತ್ತು ಅಂಥಹ ಇತರ ಜೀವಿಗಳ ಆಲಯ ಮಹಾ ಸಮುದ್ರವೂ ನೀನೇ. ಮುದಿತ ಮನಸ್ಕ ಮನೀಷೀ ಮಹರ್ಷಿಗಳಿಂದ ಸದಾ ಪೂಜಿಸಲ್ಪಡುವ ಮಹಾ ಯಶಸ್ವಿ ನೀನು. ಅದ್ವರಗಳಲ್ಲಿ ವಷಟ್ಕರಣ ಮಾಡಿ ಅರ್ಪಿಸುವ ಸೋಮದ ಹವಿಸ್ಸನ್ನು ಸೇವಿಸುವವರಲ್ಲಿ ಅಗ್ರನು ನೀನು. ಫಲಾರ್ಥಿ ವಿಪ್ರರಿಂದ ಸತತವಾಗಿ ಯಾಜಿಸಿಕೊಳ್ಳುವವನು ನೀನು. ಅತುಲಬಲಶಾಲೀ! ವೇದಾಂಗಗಳು ನಿನ್ನ ಕೀರ್ತನೆ ಮಾಡುತ್ತವೆ. ನಿನ್ನನ್ನು ಅರಿತುಕೊಳ್ಳಲು ದ್ವಿಜೇಂದ್ರರು ಸರ್ವ ವೇದ ವೇದಾಂಗಗಳ ಪಾರಾಯಣ ಮಾಡುತ್ತಾರೆ.”

ಈ ರೀತಿ ಕದ್ರುವು ಸ್ತುತಿಸಲು ಹರಿವಾಹನ ಇಂದ್ರನು ಆಕಾಶವನ್ನು ಕಪ್ಪು ಮೋಡಗಳಿಂದ ತುಂಬಿದನು. “ಮಳೆ ಸುರಿಸಿ!” ಎಂದು ಆಜ್ಞಾಪಿಸಲು ಆ ಮೇಘಗಳು ಆಕಾಶದಲ್ಲಿ ಮಿಂಚಿನಿಂದ ಬೆಳಗಿ ಸತತವಾಗಿ ಗುಡುಗತೊಡಗಿದವು. ಹೊಡೆದಾಡುತ್ತಿವೆಯೋ ಎನ್ನುವಂಥಹ ಸುಮಾದ್ಭುತ ಅತುಲ ಮಹಾಶಬ್ಧದೊಂದಿಗೆ ಮಳೆಯನ್ನು ಸುರಿಸಿದವು. ಅನೇಕ ಮಿಂಚು-ಗುಡುಗುಗಳಿಂದ ಮಳೆಯು ಸುರಿಯುತ್ತಿರಲು ಅಂಬರವು ಹುಚ್ಚಾಗಿ ಕುಣಿಯುತ್ತಿರುವಂತೆ ತೋರುತ್ತಿತ್ತು. ಇಂದ್ರನು ಮಳೆಸುರಿಸುತ್ತಿದ್ದಂತೆ ನಾಗಗಳು ತುಂಬಾ ಹರ್ಷಿತರಾದರು. ಭೂಮಿಯೂ ಕೂಡ ಶೀತಲ ಶುದ್ಧ ನೀರಿನಿಂದ ತುಂಬಿಕೊಂಡಿತು.

ಗರುಡನು ಎತ್ತಿಕೊಂಡು ಹೋದ ನಾಗಗಳು ಆ ಸಾಗರದ ನೀರನ್ನು ದಾಟಿ ಪಕ್ಷಿಸಂಘಗಳ ನಿನಾದಗಳಿದ್ದ ದ್ವೀಪವನ್ನು ತಲುಪಿದವು. ಅದು ವಿಚಿತ್ರ ಫಲ-ಪುಷ್ಪಗಳನ್ನು ಹೊತ್ತ ವನರಾಶಿಯಿಂದ ತುಂಬಿಕೊಂಡಿತ್ತು, ಮತ್ತು ಅಲ್ಲಿ ರಮ್ಯ ಭವನ ಪ್ರಸನ್ನ ಜಲವಿದ್ದ ಸುಂದರ ಪದ್ಮಾಕರ ಸರೋವರಗಳಿದ್ದವು. ದಿವ್ಯಗಂಧವನ್ನು ಸೂಸುವ ಪುಣ್ಯ ಮಾರುತದಿಂದ ಆ ದ್ವೀಪವು ಪುನರ್ಜೀವನಗೊಂಡಂತಿತ್ತು. ಮಲಯದಲ್ಲಿ ಹುಟ್ಟಿ ಬೀಸುವ ಗಾಳಿಯು ಆಕಾಶವನ್ನು ಮುತ್ತಿಡುವಂತಿದ್ದ ಸುಂದರ ವೃಕ್ಷಗಳಿಂದ ಪುಷ್ಪವೃಷ್ಟಿಯನ್ನು ಸುರಿಸುತ್ತಿತ್ತು. ಅಲ್ಲಿರುವ ವೃಕ್ಷಗಳು ಪುಷ್ಪಗಳನ್ನೇ ನೀರಿನಂತೆ ಸುರಿಸಿ ಸ್ನಾನಮಾಡಿಸುತ್ತಿರುವಂತೆ ತೋರುತ್ತಿದ್ದವು. ಮನಸ್ಸಿಗೆ ಆನಂದವನ್ನು ನೀಡುವ ಪುಣ್ಯಪ್ರದ ಗಂಧರ್ವ-ಅಪ್ಸರೆಯರಿಗೆ ಪ್ರಿಯಕರವಾದ ನಾನಾ ಪಕ್ಷಿಗಳ ಕಲರವಗಳೊಂದಿಗೆ ಪ್ರತಿಧ್ವನಿಸುತ್ತಿದ್ದ ಆ ಪ್ರದೇಶವು ಕದ್ರು-ಪುತ್ರರನ್ನು ಹರ್ಷಗೊಳಿಸಿತು.

ಆ ವನವನ್ನು ಸೇರಿದ ನಾಗಗಳು ಸಾಕಷ್ಟು ಮುದಿತರಾದರು ಮತ್ತು ಪತಗೋತ್ತಮ ಮಹಾವೀರ ಗರುಡನಿಗೆ “ಇದಕ್ಕಿಂತಲೂ ಹೆಚ್ಚು ನೀರಿರುವ ಸುರಮ್ಯ ದ್ವೀಪಕ್ಕೆ ನಮ್ಮನ್ನು ಕರೆದೊಯ್ಯಿ. ನೀನು ಆಕಾಶದಲ್ಲಿ ಹಾರಿ ಬರುವಾಗ ಬಹಳಷ್ಟು ರಮ್ಯ ಪ್ರದೇಶಗಳನ್ನು ನೋಡಿರಬಹುದು!” ಎಂದರು. ಸ್ವಲ್ಪಹೊತ್ತು ಯೋಚಿಸಿ ಗರುಡನು ಮಾತೆ ವಿನತೆಯನ್ನು “ಮಾತೇ! ಈ ಸರ್ಪಗಳು ಹೇಳುವ ಕೆಲಸಗಳನ್ನೆಲ್ಲಾ ನಾವೇಕೆ ಮಾಡಬೇಕು?” ಎಂದು ಕೇಳಿದನು. ಆಗ ವಿನತೆಯು ಅವನಿಗೆ “ಪತಗೋತ್ತಮ! ಸರ್ಪಗಳ ಮೋಸದಿಂದ ನಾನು ಪಣವನ್ನು ಸೋತು ನನ್ನ ಪತಿಯ ಎರಡನೇ ಪತ್ನಿ ಮತ್ತು ನನ್ನ ಸಹೋದರಿಯ ದಾಸಿಯಾಗಿದ್ದೇನೆ” ಎಂದು ಹೇಳಿದಳು. ತಾಯಿಯಿಂದ ಕಾರಣವನ್ನು ತಿಳಿದ ಗಗನೇಚರನು ದುಃಖಿತನಾಗಿ ಸರ್ಪಗಳಿಗೆ “ಸರ್ಪಗಳೇ! ಏನನ್ನು ತಂದುಕೊಡುವುದರಿಂದ ಅಥವಾ ಏನನ್ನು ಹೇಳಿಕೊಡುವುದರಿಂದ ಅಥವಾ ಎಂಥಹ ಪೌರುಷ ಕೆಲಸವನ್ನು ಮಾಡುವುದರಿಂದ ನಾವು ಈ ದಾಸತ್ವದಿಂದ ಬಿಡುಗಡೆ ಹೊಂದಬಹುದು ಎನ್ನುವುದನ್ನು ಹೇಳಿರಿ” ಎಂದು ಕೇಳಿಕೊಂಡನು. ಅವನು ಹೇಳಿದ್ದುದನ್ನು ಕೇಳಿದ ಸರ್ಪಗಳು “ಗರುಡ! ನಿನ್ನ ಬಲವನ್ನುಪಯೋಗಿಸಿ ಅಮೃತವನ್ನು ತೆಗೆದುಕೊಂಡು ಬಾ! ಆಗ ನೀವು ದಾಸತ್ವದಿಂದ ಮುಕ್ತರಾಗುವಿರಿ” ಎಂದವು.

ಸರ್ಪಗಳು ಹೀಗೆ ಹೇಳಲು ಗರುಡನು ಮಾತೆಗೆ “ಅಮೃತವನ್ನು ತರಲು ಹೋಗುತ್ತಿದ್ದೇನೆ. ಏನನ್ನಾದರೂ ತಿನ್ನಲು ಬಯಸುತ್ತೇನೆ. ಏನು ತಿನ್ನಲಿ ಹೇಳು!” ಎಂದು ಕೇಳಿದನು. ಆಗ ವಿನತೆಯು ಅವನಿಗೆ ಇಂತೆಂದಳು: “ಸಮುದ್ರಕುಕ್ಷದ ಅಡಿಯಲ್ಲಿ ಉತ್ತಮ ನಿಷಾದರ ಆಲಯವಿದೆ. ಸಹಸ್ರಾರು ಸಂಖ್ಯೆಯ ಅವರನ್ನು ತಿಂದು ಅಮೃತವನ್ನು ತೆಗೆದುಕೊಂಡು ಬಾ! ಆದರೆ ಎಂದೂ ನೀನು ಬ್ರಾಹ್ಮಣನನ್ನು ಕೊಲ್ಲುವ ಕೆಲಸವನ್ನು ಮಾಡಬೇಡ. ಸರ್ವಭೂತಗಳಲ್ಲಿಯೂ ಬ್ರಾಹ್ಮಣನು ಅವಧ್ಯ. ಅವನು ಬೆಂಕಿಯ ಹಾಗೆ. ಕುಪಿತ ವಿಪ್ರನು ಅಗ್ನಿ, ಸೂರ್ಯ, ವಿಷ ಅಥವಾ ಹರಿತ ಶಸ್ತ್ರದ ಸಮಾನ. ಎಲ್ಲ ಜೀವಿಗಳಲ್ಲಿಯೂ ವಿಪ್ರನು ಅಗ್ರಸ್ಥಾನವನ್ನು ಹೊಂದಿದ್ದಾನೆ. ಪಿತ ಮತ್ತು ಗುರುವಿನಂತೆ ಅವನ ಸ್ಥಾನವು ಶ್ರೇಷ್ಠವಾದುದು.”

ಗರುಡನು “ಮಾತೇ! ಬ್ರಾಹ್ಮಣನನ್ನು ಹೇಗೆ ಗುರುತಿಸಬಹುದು ಹೇಳು. ಅವರ ಶುಭ ಲಕ್ಷಣಗಳು ಯಾವುವು?” ಎಂದು ತಾಯಿಯನ್ನು ಪುನಃ ಕೇಳಿದನು. ಆಗ ವಿನತೆಯು “ಪುತ್ರ! ಗಂಟಲು ಸೇರುತ್ತಿದ್ದಂತೆ ಮೀನು ಹಿಡಿಯಲು ಬಳಸುವ ಕೊಕ್ಕೆಯ ಹಾಗೆ ಪೀಡಿಸುವವನು ಅಥವಾ ಬಿಸಿ ಕೆಂಡದಂತೆ ಸುಡುವವನೇ ಬ್ರಾಹ್ಮಣರ್ಷಭನೆಂದು ತಿಳಿ!” ಎಂದಳು. ಮಗನ ಅತುಲ ವೀರ್ಯವನ್ನು ತಿಳಿದಿದ್ದರೂ ವಿನತೆಯು ಹಾರ್ದಿಕವಾಗಿ ಈ ಮಾತುಗಳಿಂದ ಅವನನ್ನು “ಪಕ್ಷಿಯೇ! ಮಾರುತಗಳು ನಿನ್ನ ರೆಕ್ಕೆಗಳನ್ನು ರಕ್ಷಿಸಲಿ. ಚಂದ್ರನು ನಿನ್ನ ಬೆನ್ನನ್ನು ರಕ್ಷಿಸಲಿ. ಅಗ್ನಿಯು ನಿನ್ನ ಶಿರವನ್ನು ಮತ್ತು ಭಾಸ್ಕರನು ನಿನ್ನ ಸರ್ವವನ್ನೂ ರಕ್ಷಿಸಲಿ. ಪುತ್ರ! ನಾನೂ ಕೂಡ ಸದಾ ಶಾಂತಿ-ಸ್ವಸ್ತಿ ಪರಾಯಣಳಾಗಿ ನಿನ್ನ ದಾರಿಯನ್ನು ಕಾಯುತ್ತಿರುತ್ತೇನೆ. ವತ್ಸ! ನಿನ್ನ ಕಾರ್ಯಾರ್ಥಸಿದ್ಧಿಯಾಗಲಿ!” ಎಂದು ಆಶೀರ್ವದಿಸಿ ಕಳುಹಿಸಿದಳು.

ಮಾತುರ್ವಚನವನ್ನು ಕೇಳಿದ ಗರುಡನು ತನ್ನ ಎರಡು ರೆಕ್ಕೆಗಳನ್ನೂ ಹರಡಿ ನಭವನ್ನೇರಿದನು. ಹಸಿವೆಯಿಂದ ಬಳಲುತ್ತಿದ್ದ ಆ ಬಲವಂತನು ಅಂತಕ ಮಹಾಕಾಲನೋ ಎಂಬಂತೆ ನಿಷಾದರ ಮೇಲೆ ಎರಗಿದನು. ಆ ನಿಷಾದರನ್ನು ಉಪಸಂಹರಿಸಲು ಉದ್ಯುಕ್ತನಾಗಿ ಅವನು ಆಕಾಶದಲ್ಲಿ ಒಂದು ಮಹತ್ತರ ಧೂಳಿನ ಭಿರುಗಾಳಿಯನ್ನು ಎಬ್ಬಿಸಿ, ಸಮುದ್ರದ ತಳದಿಂದ ನೀರನ್ನು ಹೀರಿಕೊಂಡು ಹತ್ತಿರದ ಪರ್ವತಳಲ್ಲಿ ಬೆಳೆದಿದ್ದ ವೃಕ್ಷಗಳು ತತ್ತರಿಸುವಂತೆ ಮಾಡಿದನು. ಅನಂತರ ಆ ಪಕ್ಷಿರಾಜನು ತನ್ನ ಅಗಲ ಬಾಯನ್ನು ನಿಷಾದರ ಮಾರ್ಗದಲ್ಲಿ ಇಟ್ಟು ಅವರನ್ನು ತಡೆಗಟ್ಟಿದನು. ನಿಷಾದರು ಆ ಭುಜಂಗಭೋಜಿನಿಯ ಬಾಯಿಯೆಡೆಗೆ ಒಟ್ಟಿಗೇ ಸೆಳೆಯಲ್ಪಟ್ಟರು. ಭಯಭರಿತ ಪಕ್ಷಿಗಳು ಹೆದರಿ ಗಗನವನ್ನೇರುವಂತೆ ಅವರು ಅವನ ಅಗಲ ಬಾಯಿಯಬಳಿ ಮುತ್ತಿಗೆ ಹಾಕಿದರು. ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಧೂಳಿನ ಮೋಡಗಳಿಂದ ಸಮ್ಮೋಹಿತರಾಗಿ ಅವರು ಸಹಸ್ರ ಸಂಖ್ಯೆಗಳಲ್ಲಿ ಭಿರುಗಾಳಿಯಿಂದ ತರುಬಲ್ಪಟ್ಟ ಪಕ್ಷಿಗಳಂತೆ ಗರುಡ ಬಾಯಿಯ ಹತ್ತಿರ ಬಂದರು. ಆಗ ಹಸಿವೆಯಿಂದ ತನ್ನ ಬಾಯಿಯನ್ನು ದೊಡ್ಡದಾಗಿ ತೆರೆದಿಟ್ಟಿದ್ದ ಗರುಡನು ತನ್ನ ಬಾಯಿಯನ್ನು ಮುಚ್ಚಿ ಬಹುವಿಧದ ಮೀನುಗಳನ್ನು ತಿನ್ನುವ ಆ ನಿಷಾದ ಸಂಕುಲವನ್ನು ಭಕ್ಷಿಸಿದನು.

ಪತ್ನಿಸಹಿತ ಓರ್ವ ಬ್ರಾಹ್ಮಣನು ಅವನ ಗಂಟಲನ್ನು ಸೇರಿ ಉರಿಯುತ್ತಿರುವ ಬೆಂಕಿಯ ಕೆಂಡದ ಹಾಗೆ ಸುಡಲು ಗರುಡನು ಅವನನ್ನುದ್ದೇಶಿಸಿ “ದ್ವಿಜೋತ್ತಮ! ನಿನಗಾಗಿ ನನ್ನ ಬಾಯಿಯನ್ನು ತೆರೆಯುತ್ತೇನೆ. ತಕ್ಷಣವೇ ಹೊರಗೆ ಬಾ. ನಾನು ಯಾವ ಬ್ರಾಹ್ಮಣನನ್ನೂ, ಅವನು ಸದಾ ಪಾಪಕರ್ಮಗಳಲ್ಲಿ ನಿರತನಾಗಿದ್ದರೂ, ವಧಿಸುವುದಿಲ್ಲ” ಎಂದನು. ಗರುಡನು ಹೀಗೆ ಹೇಳಿದುದಕ್ಕೆ ಆ ಬ್ರಾಹ್ಮಣನು “ನನ್ನೊಡನೆ ನನ್ನ ಪತ್ನಿ ನಿಷದಿಯೂ ಹೊರಬರಲಿ” ಎಂದು ಕೇಳಿಕೊಂಡನು. ಅದಕ್ಕೆ ಗರುಡನು “ನಿಷದಿಯನ್ನೂ ನಿನ್ನ ಸಂಗಡ ಕರೆದುಕೊಂಡು ಕೂಡಲೇ ಹೊರಬೀಳು. ನನ್ನ ತೇಜಸ್ಸಿನಿಂದ ಇನ್ನೂ ಜೀರ್ಣವಾಗಿರದೇ ಇದ್ದ ನೀವು ತಡಮಾಡದೇ ನಿಮ್ಮ ಜೀವವನ್ನು ಉಳಿಸಿಕೊಳ್ಳಿ” ಎಂದನು. ಆಗ ಆ ವಿಪ್ರನು ನಿಷದಿಯೊಡನೆ ಹೊರಬಂದು, ಗರುಡನಿಗೆ ಕೃತಘ್ನತೆಗಳನ್ನು ಹೇಳಿ, ತನಗಿಷ್ಟ ಪ್ರದೇಶಕ್ಕೆ ತೆರಳಿದನು. ವಿಪ್ರನು ತನ್ನ ಪತ್ನಿಯೊಡನೆ ಹೊರಬಂದ ತಕ್ಷಣವೇ ಗರುಡನು ಒಂದು ಕ್ಷಣದಲ್ಲಿ ತನ್ನ ರೆಕ್ಕೆಗಳನ್ನು ಹರಡಿ ಮನೋವೇಗದಲ್ಲಿ ಗಗನವನ್ನೇರಿದನು.

ಮಾರ್ಗದಲ್ಲಿ ಕಂಡ ತನ್ನ ತಂದೆ ಕಶ್ಯಪನು ಪ್ರಶ್ನಿಸಲು ಗರುಡನು ಅವನಿಗೆ ಇಂತೆಂದನು: “ಸರ್ಪಗಳಿಂದ ಕಳುಹಿಸಲ್ಪಟ್ಟ ನಾನು ಸೋಮವನ್ನು ತರನು ಹೊರಟಿದ್ದೇನೆ. ಅದನ್ನು ತಂದು ಇಂದು ನಾನು ನನ್ನ ತಾಯಿಯನ್ನು ದಾಸತ್ವದಿಂದ ವಿಮೋಚನಗೊಳಿಸುತ್ತೇನೆ. ನಿಷಾದರನ್ನು ಭಕ್ಷಿಸಲು ತಾಯಿಯು ಹೇಳಿದಳು. ಅವರನ್ನು ಸಹಸ್ರಾರು ಸಂಖ್ಯೆಗಳಲ್ಲಿ ಭಕ್ಷಿಸಿದರೂ ನನಗೆ ತೃಪ್ತಿಯಾಗಲಿಲ್ಲ. ಭಗವನ್! ಭುಂಜಿಸಿ ಅಮೃತವನ್ನು ತರಲು ಸಮರ್ಥನಾಗುವಂತೆ ಬೇರೆ ಯಾವುದಾದರೂ ಭೋಜನವನ್ನು ತೋರಿಸಿಕೊಡು!”

ಕಶ್ಯಪನು ಹೇಳಿದನು: “ಹಿಂದೆ ವಿಭಾವಸು ಎಂಬ ಹೆಸರಿನ ಕೋಪಸ್ವಭಾವದ ಮಹರ್ಷಿಯೊಬ್ಬನಿದ್ದನು. ಅವನಿಗೆ ಸುಪ್ರತೀಕನೆಂಬ ಮಹಾತಪಸ್ವಿ ತಮ್ಮನಿದ್ದನು. ಸುಪ್ರತೀಕನು ಧನವನ್ನು ಅಣ್ಣನಲ್ಲಿ ಇಡಲು ಇಚ್ಛಿಸದೇ ಅದರ ವಿಭಜನೆಯಾಗಬೇಕೆಂದು ನಿತ್ಯವೂ ಕೇಳುತ್ತಿದ್ದನು. ಆಗ ವಿಭಾವಸುವು ತಮ್ಮನಿಗೆ ಹೇಳಿದನು: “ಬಹಳಷ್ಟು ಜನರು ಮೋಹದಿಂದ ವಿಭಜನೆ ಮಾಡಲು ಸದಾ ಬಯಸುತ್ತಿರುತ್ತಾರೆ. ಆದರೆ ವಿಭಜನೆಯಾದ ನಂತರ ಅರ್ಥಮೋಹಿತರಾಗಿ ಅವರು ಅನ್ಯೋನ್ಯರನ್ನು ಕಡೆಗಾಣಿಸುತ್ತಾರೆ. ಅವರು ಬೇರೆಬೇರೆಯಾದದ್ದನ್ನು ತಿಳಿದು ಸ್ವಾರ್ಥಿ ಶತ್ರುಗಳು ಮಿತ್ರರೂಪದಲ್ಲಿ ಬಂದು ಅದೇ ಧನದ ಸಲುವಾಗಿ ಅವರಲ್ಲಿ ಇನ್ನೂ ದೊಡ್ಡ ಬಿರುಕನ್ನು ಹುಟ್ಟಿಸುತ್ತಾರೆ. ಇನ್ನೂ ದೂರವಾಗಿದ್ದಾರೆಂದು ತಿಳಿದು ಇತರರು ಅವರ ಪತನಕ್ಕೆ ಕಾರಣರಾಗುತ್ತಾರೆ. ಹೀಗೆ ಬೇರೆಬೇರೆಯಾದ ಸಹೋದರರು ಬೇಗನೇ ನಾಶಹೊಂದುತ್ತಾರೆ. ಆದುದರಿಂದ ಗುರುಶಾಸ್ತ್ರಗಳಲ್ಲಿ ನಿಬದ್ಧ ಪಂಡಿತರು ಅನ್ಯೋನ್ಯರಲ್ಲಿ ಪ್ರೀತಿಯಿರುವವರ ನಡುವೆ ಅರ್ಥವಿಭಜನೆಯನ್ನು ಒಪ್ಪುವುದಿಲ್ಲ. ಆದರೆ ಧನವನ್ನು ವಿಂಗಡಿಸಲು ಇಚ್ಛಿಸುತ್ತಿರುವ ನಿನ್ನನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆದುದರಿಂದ ನೀನು ಒಂದು ಆನೆಯಾಗುತ್ತೀಯೆ!” ಈ ರೀತಿ ಶಪಿಸಲ್ಪಟ್ಟ ಸುಪ್ರತೀಕನು ವಿಭಾವಸುವಿಗೆ “ನೀನೂ ಕೂಡ ನೀರಿನಲ್ಲಿ ಚಲಿಸುವ ಆಮೆಯಾಗುತ್ತೀಯೆ” ಎಂದು ಹೇಳಿದನು. ಸಂಪತ್ತಿನ ಸಲುವಾಗಿ ಹೀಗೆ ಅನ್ಯೋನ್ಯರಿಗೆ ಶಾಪವನ್ನಿತ್ತು ಮೂಢಚೇತಸ ಸುಪ್ರತೀಕ-ವಿಭಾವಸು ಇಬ್ಬರೂ ಆನೆ-ಆಮೆಗಳ ರೂಪಗಳನ್ನು ಹೊಂದಿದರು. ರೋಷದೋಷದಿಂದ ಕೀಳುಯೋನಿಗಳಲ್ಲಿ ಜನಿಸಿದರೂ ಅವರವರ ಪ್ರಮಾಣ ಮತ್ತು ಬಲದಿಂದ ದರ್ಪಿತ ಅವರೀರ್ವರು ಪರಸ್ಪರರಲ್ಲಿ ದ್ವೇಷವನ್ನು ಸಾಧಿಸಿಕೊಂಡೇ ಬಂದಿದ್ದಾರೆ. ಈ ಈರ್ವರು ಮಹಾಕಾಯರು ಈ ಸರೋವರದಲ್ಲಿ ಅವರ ಪೂರ್ವ ವೈರತ್ವವನ್ನು ಮುಂದುವರೆಸಿದ್ದಾರೆ. ನೋಡು! ಆ ಸುಂದರ ಮಹಾಗಜವು ನೀರಿನ ಕಡೆ ಬರುತ್ತಿದೆ. ಅವನ ಕೂಗಿನ ಶಬ್ಧದಿಂದ ನೀರಿನ ಒಳಗಿದ್ದ ಮಹಕಾಯ ಆಮೆಯು ಸರೋವರವನ್ನು ಅಲ್ಲೋಲಕಲ್ಲೋಲಗೊಳಿಸುತ್ತಾ ಮೇಲೆ ಏರುತ್ತಿದೆ. ಅವನನ್ನು ನೋಡಿದ ವೀರ ಆನೆಯು ತನ್ನ ದಂತ-ಸೊಂಡಿಲು-ಬಾಲಗಳನ್ನು ಸುರುಳಿಸುತ್ತಿ ವೇಗದಿಂದ ನೀರನ್ನು ಪ್ರವೇಶಿಸುತ್ತಿದೆ. ಮೀನುಗಳಿಂದ ತುಂಬಿದ ಸರೋವರವನ್ನು ಅದು ಅಲ್ಲೋಲಕಲ್ಲೋಲಗೊಳಿಸುತ್ತಿದೆ. ವೀರ ಆಮೆಯೂ ಕೂಡ ತನ್ನ ತಲೆಯನ್ನು ಮೇಲೆತ್ತಿ ಯುದ್ಧಕ್ಕಾಗಿ ಮುಂದೆ ಬರುತ್ತಿದೆ. ಆ ಆನೆಯ ಎತ್ತರ ಆರು ಯೋಜನ ಮತ್ತು ಪರಿಧಿಯು ಅದರ ಎರಡರಷ್ಟು. ಆಮೆಯೂ ಕೂಡ ಮೂರು ಯೋಜನ ಎತ್ತರ ಮತ್ತು ಅದರ ಎರಡು ಪಟ್ಟು ಅಗಲವಾಗಿದೆ. ಈ ರೀತಿ ಪರಸ್ಪರರನ್ನು ಕೊಲ್ಲುವ ಹಠದಿಂದ ಯುದ್ಧನಿರತರಾಗಿರುವ ಇವರೀರ್ವರನ್ನೂ ಭಕ್ಷಿಸಿ ನಿನ್ನ ಕಾರ್ಯವನ್ನು ಮುಂದುವರೆಸು.”

ಪಿತೃವಾಕ್ಯವನ್ನು ಕೇಳಿದ ಗರುಡನು ಭೀಮವೇಗದಲ್ಲಿ ಬಂದು ಉಗುರಿನಿಂದ ಆನೆಯನ್ನೂ ಇನ್ನೊಂದರಿಂದ ಆಮೆಯನ್ನೂ ಹಿಡಿದನು. ಚಂಗನೆ ಆಕಾಶಕ್ಕೆ ಹಾರಿ ಆ ಪಕ್ಷಿಯು ಅಲಂಬತೀರ್ಥವನ್ನು ತಲುಪಿ ಅಲ್ಲಿದ್ದ ದೇವವೃಕ್ಷಗಳ ಮೇಲೆ ಇಳಿದನು. ಬಯಸಿದ ಫಲಗಳನ್ನು ಕೊಡುವ ಆ ವೃಕ್ಷಗಳು ಹೆದರಿ ತತ್ತರಿಸಿದುದನ್ನು ಕಂಡ ಗರುಡನು ರೂಪದಲ್ಲಿ ಸರಿಸಾಟಿಯಾದ ಅನ್ಯ ವೃಕ್ಷಗಳ ಕಡೆ ಹಾರಿದನು. ಕಾಂಚನ-ರಜತ ಫಲಗಳು ಮತ್ತು ವೈಢೂರ್ಯದ ರೆಂಬೆಗಳಿಂದ ಕೂಡಿದ್ದ ಆ ಮಹಾದ್ರುಮಗಳು ಸಾಗರದ ಅಲೆಗಳಿಂದ ತೊಳೆಯಲ್ಪಟ್ಟು ಹೊಳೆಯುತ್ತಿದ್ದವು. ಅಲ್ಲಿಯೇ ವಿಸ್ತಾರವಾಗಿ ಬೆಳೆದಿದ್ದ ಆಲದ ಮರವೊಂದು ಮನೋವೇಗದಲ್ಲಿ ಇಳಿಯುತ್ತಿದ್ದ ಆ ಖಗಶ್ರೇಷ್ಠನಿಗೆ “ಶತಯೋಜನ ವಿಸ್ತೀರ್ಣವುಳ್ಳ ನನ್ನ ಈ ಮಹಾಶಾಖೆಗಳ ಮೇಲೆ ಬಂದಿಳಿದು ಆ ಆನೆ-ಆಮೆಗಳನ್ನು ತಿನ್ನು!” ಎಂದಿತು. ಆಗ ಆ ಖಗೋತ್ತಮನು ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ ನಿಧಾನವಾಗಿ ಅದರ ಮೇಲೆ ಬಂದಿಳಿದಾಗ ಸಹಸ್ರಾರು ಪಕ್ಷಿಗಳಿದ್ದ ಆ ಪರ್ವತ ಸಮಾನ ವೃಕ್ಷವು ತತ್ತರಿಸಿ, ದಪ್ಪ ದಪ್ಪ ಎಲೆಗಳ ಆ ರೆಂಬೆಯು ತುಂಡಾಯಿತು.ಮಹಾಬಲಿ ಗರುಡನು ತನ್ನ ಪಂಜುಗಳಿಂದ ಆ ರೆಂಬೆಯನ್ನು ಮುಟ್ಟಿದಾಕ್ಷಣವೇ ಅದು ಮುರಿಯಲು ಅವನು ಆ ತುಂಡಾದ ರೆಂಬೆಯನ್ನೂ ಹಿಡಿದುಕೊಂಡನು. ತುಂಡಾದ ಆ ಮಹಾಶಾಖೆಯನ್ನು ಮುಗುಳ್ನಗುತ್ತಾ ನೋಡುತ್ತಿರಲು ಅಲ್ಲಿ ಅಧೋಮುಖರಾಗಿ ನೇಲುತ್ತಿದ್ದ ವಾಲಖಿಲ್ಯರನ್ನು ಕಂಡನು. ಅವನ ನಾಶದ ಭಯಪಟ್ಟು ಆ ಖಗಾಧಿಪನು ಅವರನ್ನು ಉಳಿಸುವ ಅಪೇಕ್ಷೆಯಿಂದ ಆ ರೆಂಬೆಯನ್ನು ಕೊಕ್ಕಿನಲ್ಲಿ ಹಿಡಿದು ಪರ್ವತವನ್ನೇ ನಡುಗಿಸುತ್ತಾ ಮೆಲ್ಲನೇ ಮೇಲೇರಿದನು. ಈ ರೀತಿ ಆನೆ-ಆಮೆ-ವಾಲಖಿಲ್ಯರನ್ನು ಹಿಡಿದು ಹಾರುತ್ತಿದ್ದ ಅವನು ಬಹಳಷ್ಟು ಪ್ರದೇಶಗಳನ್ನು ನೋಡಿದರೂ ಇಳಿಯಲು ಯೋಗ್ಯವಾದ ಯಾವ ಪ್ರದೇಶವನ್ನೂ ಕಾಣಲಿಲ್ಲ. ಆಗ ಅವ್ಯಯ ಪರ್ವತಶ್ರೇಷ್ಠ ಗಂಧಮಾದನಕ್ಕೆ ಹೋಗಿ ಅಲ್ಲಿ ತಪಸ್ಸಿನಲ್ಲಿ ನಿರತನಾಗಿದ್ದ ತಂದೆ ಕಶ್ಯಪನನ್ನು ಕಂಡನು. ಗರುಡನನ್ನು ನೋಡಿ ಕಶ್ಯಪನು ಅವನ ಸಂಕಲ್ಪವೇನೆಂದು ತಿಳಿದು ಅವನನ್ನುದ್ದೇಶಿಸಿ “ಪುತ್ರ! ಮುಂದೆ ನೋವನ್ನು ಅನುಭವಿಸಬೇಕಾಗಿ ಬರುವಂಥಹ ಯಾವ ಸಾಹಸವನ್ನೂ ಮಾಡಬೇಡ. ಸೂರ್ಯನ ಕಿರಣಗಳಿಂದ ಜೀವಿಸುತ್ತಿರುವ ವಾಲಖಿಲ್ಯರು ಕುಪಿತರಾದರೆ ನಿನ್ನನ್ನು ಸುಟ್ಟುಬಿಡಬಲ್ಲರು!” ಎಂದನು. ತನ್ನ ಪುತ್ರನ ಪರವಾಗಿ ಕಶ್ಯಪನು ತಪಃಸಿದ್ಧ ವಾಲಖಿಲ್ಯರನ್ನು ಸಂತುಷ್ಟಿಗೊಳಿಸುತ್ತಾ “ತಪೋಧನರೇ! ಪ್ರಜಾಹಿತಾರ್ಥಕ್ಕಾಗಿಯೇ ಗರುಡನ ಉದ್ಭವವಾಗಿದೆ. ಒಂದು ಮಹತ್ತರ ಕಾರ್ಯವನ್ನು ಕೈಗೊಂಡಿದ್ದಾನೆ. ಅದಕ್ಕೆ ನಿಮ್ಮ ಅನುಜ್ಞೆಯನ್ನು ನೀಡಬೇಕು!” ಎಂದು ಕೇಳಿಕೊಂಡನು. ಮುನಿಯ ಮಾತುಗಳನ್ನು ಕೇಳಿದ ತಪಾರ್ಥಿ ಮುನಿಗಳು ಆ ರೆಂಬೆಯನ್ನು ಬಿಟ್ಟು ಪುಣ್ಯಕರ ಹಿಮವತ್ ಗಿರಿಗೆ ತೆರಳಿದರು.

ಅವರು ಹೊರಟುಹೋದ ನಂತರ ವಿನತಾತ್ಮಜನು ರೆಂಬೆಯನ್ನು ಕಚ್ಚಿಹಿಡಿದ ಬಾಯಿಯಿಂದಲೇ ತನ್ನ ತಂದೆ ಕಶ್ಯಪನನ್ನು “ಭಗವನ್! ಈ ಮಹಾವೃಕ್ಷದ ಶಾಖೆಯನ್ನು ಎಲ್ಲಿ ಇಳಿಸಲಿ? ಬ್ರಾಹ್ಮಣರಿಲ್ಲದಿರುವ ಒಂದು ಪ್ರದೇಶವನ್ನು ನನಗೆ ತೋರಿಸಿಕೊಡು!” ಎಂದು ಕೇಳಿದನು. ಆಗ ಕಶ್ಯಪನು ಬ್ರಾಹ್ಮಣರಿಲ್ಲದೇ ಇರುವ ಹಿಮಸಂವೃದ್ಧ ಕಂದರಗಳಿರುವ ಸಾಧಾರಣ ಮನುಷ್ಯರ ಯೋಚನೆಗೂ ಸಿಲುಕದ ಪರ್ವತವೊಂದನ್ನು ತೋರಿಸಿದನು. ಆ ಮಹಾಕಂದರವನ್ನು ಮನಸ್ಸಿನಲ್ಲಿಯೇ ಕಂಡ ಗರುಡನು ರೆಂಬೆ-ಆಮೆ-ಆನೆಗಳನ್ನು ಹಿಡಿದು ಅದರೆಡೆಗೆ ಅತ್ಯಂತ ವೇಗದಿಂದ ಹೊರಟನು. ಗರುಡನು ಕಚ್ಚಿ ಹಾರುತ್ತ್ತಿದ್ದ ಆ ಮಹಾಶಾಖೆಯನ್ನು ಒಂದು ನೂರು ಮಹಾಮೃಗಗಳ ಚರ್ಮದಿಂದ ತಯಾರಿಸಿದ ತೆಳು ವಸ್ತ್ರದಿಂದಲೂ ಸುತ್ತಲು ಸಾಧ್ಯವಾಗುತ್ತಿರಲಿಲ್ಲ.

ಗರುಡನು ಸ್ವಲ್ಪವೇ ಸಮಯದಲ್ಲಿ ನೂರು ಸಾವಿರ ಯೋಜನೆಗಳನ್ನು ದಾಟಿದನು. ಕ್ಷಣಮಾತ್ರದಲ್ಲಿ ತಂದೆಯು ಹೇಳಿದ ಪರ್ವತವನ್ನು ತಲುಪಿ ಮಹಾಶಾಖೆಯನ್ನು ಬಿಡುಗಡೆ ಮಾಡಿದಾಗ ಅದು ಅಬ್ಬರದಿಂದ ಕೆಳಗುರುಳಿತು. ಅವನ ರೆಕ್ಕೆಗಳಿಂದ ಎಬ್ಬಿಸಲ್ಪಟ್ಟ ಭಿರುಗಾಳಿಯಿಂದ ಶೈಲರಾಜನು ತತ್ತರಿಸಿದನು ಮತ್ತು ಅಲ್ಲಿರುವ ಮರಗಳು ಕೆಳಗುರುಳಿ ಬೀಳುವಾಗ ಪುಷ್ಪವರ್ಷವೇ ಆಯಿತು. ಆ ಮಹಾಗಿರಿಯ ಶಿಖರಗಳನ್ನು ಅಲಂಕರಿಸಿದ್ದ ಮಣಿ-ಕಾಂಚನಚಿತ್ರಗಳು ಸಡಿಲವಾಗಿ ಪರ್ವತದ ಎಲ್ಲ ಕಡೆಗಳಿಂದ ಉದುರಿದವು. ಕಾಂಚನ ಕುಸುಮಗಳಿದ್ದ ಹಲವಾರು ರೆಂಬೆಗಳ ಮೇಲೆ ಈ ರೆಂಬೆಯು ಬಿದ್ದಾಗ ಅವು ಮಿಂಚುಬಡಿದ ಕಪ್ಪು ಮೋಡಗಳಂತೆ ಕಂಡವು. ಪರ್ವತ ಖನಿಜಗಳನ್ನೊಡಗೂಡಿ ಕೆಳಗೆ ಉರುಳುತ್ತಿದ್ದ ಬಂಗಾರದ ಹೊಳಪಿನ ರೆಂಬೆಗಳು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತಿದ್ದವು. ಗರುಡನು ಆ ಗಿರಿಶಿಖರದ ಮೇಲೇರಿ ಆನೆ-ಆಮೆಗಳೆರಡನ್ನೂ ಭಕ್ಷಿಸಿದನು.

ಮನಸ್ಸಿನಷ್ಟೇ ವೇಗವಾಗಿ ಅವನು ಆ ಪರ್ವತ ಶಿಖರದಿಂದ ಮೇಲೇರುತ್ತಿದ್ದಂತೆ ದೇವತೆಗಳಿಗೆ ಭಯ-ನೋವುಗಳನ್ನು ಸೂಚಿಸುವ ಅಪಶಕುನಗಳು ಕಾಣಿಸಿಕೊಂಡವು. ಇಂದ್ರನ ಪ್ರಿಯ ವಜ್ರವು ಭಯದಿಂದ ಪ್ರಜ್ವಲಗೊಂಡಿತು. ದಿನದಲ್ಲಿಯೂ ನಭದಿಂದ ಹೊಗೆ-ಬೆಂಕಿಗಳ ಉಲ್ಕೆಗಳು ಬೀಳತೊಡಗಿದವು. ವಸು-ರುದ್ರ-ಆದಿತ್ಯ-ಸಾದ್ಯ-ಮರುತ ಮತ್ತು ಅನ್ಯ ದೇವತೆಗಳ ಆಯುಧಗಳೆಲ್ಲವೂ ಪರಸ್ಪರ ಹೊಡೆದಾಡಲು ಪ್ರಾರಂಭಿಸಿದವು. ಇದಕ್ಕೆ ಮೊದಲು ಎಂದೂ – ದೇವಾಸುರರ ಸಂಗ್ರಾಮದ ಸಮಯದಲ್ಲಿಯೂ – ಹೀಗೆ ಆಗಿರಲಿಲ್ಲ. ಗುಡುಗಿನೊಂದಿಗೆ ಭಿರುಗಾಳಿ ಬೀಸುತ್ತಾ ಒಂದೇ ಸಮನೆ ಉಲ್ಕೆಗಳು ತೂರತೊಡಗಿದವು. ಮೋಡಗಳಿಲ್ಲದಿದ್ದರೂ ಆಕಾಶವು ಜೋರಾಗಿ ಗರ್ಜಿಸಿತು. ದೇವತೆಗಳ ಮಾಲೆಗಳು ಮಾಸಿದವು. ಅವರ ತೇಜಸ್ಸು ಕುಂದಿತು. ಮೋಡಗಳು ಮೇಲೆದ್ದು ರೌದ್ರಾಕಾರವಾಗಿ ಗರ್ಜಿಸುತ್ತಾ ರಕ್ತದ ಮಳೆಯನ್ನು ಸುರಿಸಿದವು. ಭಿರುಗಾಳಿಯಿಂದ ಮೇಲೆದ್ದ ಧೂಳು ದೇವತೆಗಳ ಕಿರೀಟಗಳನ್ನು ಮರೆಮಾಡಿತು.

ಈ ದಾರುಣ ಉತ್ಪಾತಗಳನ್ನು ಕಂಡು ಉದ್ವಿಗ್ನನಾದ ಇಂದ್ರನು ಇತರ ದೇವತೆಗಳೊಡಗೂಡಿ ಬೃಹಸ್ಪತಿಯನ್ನು “ಭಗವನ್! ಈ ಘೋರ ಮಹೋತ್ಪಾತಗಳು ಏಕೆ ಕಾಣಿಸಿಕೊಳ್ಳುತ್ತಿವೆ? ಯುದ್ಧದಲ್ಲಿ ನಮ್ಮ ಮೇಲೆ ಜಯಗಳಿಸುವ ಶತ್ರುವು ಯಾರೂ ಕಾಣಬರುತ್ತಿಲ್ಲವಲ್ಲ?” ಎಂದು ಕೇಳಿದನು. ಆಗ ಬೃಹಸ್ಪತಿಯು ಹೇಳಿದನು: “ಶತಕ್ರತು ದೇವೇಂದ್ರ! ನಿನ್ನದೇ ಅಪರಾಧದಿಂದ ಮತ್ತು ವಾಲಖಿಲ್ಯರ ತಪಸ್ಸಿನಿಂದ ಅದ್ಭುತ ಜೀವಿಯೊಂದು ಮುನಿ ಕಶ್ಯಪ ಮತ್ತು ವಿನತೆಯರ ಪುತ್ರನಾಗಿ ಉತ್ಪನ್ನನಾಗಿದ್ದಾನೆ. ಇಷ್ಟಬಂದ ರೂಪ ಧರಿಸಬಲ್ಲ ಆ ಬಲಶಾಲೀ ಗರುಡನು ಅಮೃತವನ್ನು ಎತ್ತಿಕೊಂಡು ಹೋಗಲು ಬರುತ್ತಿದ್ದಾನೆ. ಬಲಶಾಲಿಗಳಲ್ಲಿಯೇ ಶ್ರೇಷ್ಠ ಆ ಗರುಡನು ಸೋಮವನ್ನು ತೆಗೆದುಕೊಂಡು ಹೋಗಲು ಸಮರ್ಥನಾಗಿದ್ದಾನೆ. ಅವನಿಗೆ ಎಲ್ಲ ಅಸಾಧ್ಯಗಳೂ ಸಾಧ್ಯವಾಗುತ್ತವೆ.”

ಈ ವಚನವನ್ನು ಕೇಳಿದ ಇಂದ್ರನು ಅಮೃತ-ರಕ್ಷಕರಿಗೆ “ಮಹಾವೀರ ಬಲಶಾಲೀ ಪಕ್ಷಿಯೋರ್ವನು ಸೋಮವನ್ನು ಅಪಹರಿಸಲು ನಿಶ್ಚಯಿಸಿದ್ದಾನೆ. ಅವನು ಬಲಾತ್ಕಾರವಾಗಿ ಅದನ್ನು ಎತ್ತಿಕೊಂಡು ಹೋಗಬಾರದೆಂದು ನಿಮಗೆ ಮೊದಲೇ ನಾನು ಚೇತಾಗ್ನಿಯನ್ನು ನೀಡುತ್ತಿದ್ದೇನೆ. ಬೃಹಸ್ಪತಿಯ ಮಾತಿನಂತೆ ಬಲದಲ್ಲಿ ಅವನ ಸರಿಸಾಟಿಯಾರೂ ಇಲ್ಲ” ಎಂದನು. ಈ ಮಾತನ್ನು ಕೇಳಿ ವಿಸ್ಮಿತರಾದ ದೇವತೆಗಳು ವಜ್ರಧಾರೀ ಶತಕ್ರತು ಇಂದ್ರನ ಜೊತೆಗೂಡಿ ಅಮೃತದ ಸುತ್ತಲೂ ಕಾವಲು ನಿಂತರು. ಅವರು ಮನಸೂಸುವ ಅತ್ಯಮೂಲ್ಯ ಕಾಂಚನ-ವೈಡೂರ್ಯಗಳಿಂದ ತಯಾರಿಸಿದ ವಿಚಿತ್ರ ಕವಚಗಳನ್ನು ಧರಿಸಿದ್ದರು. ಸಹಸ್ರಸಂಖ್ಯೆಗಳಲ್ಲಿದ್ದ ಅವರು ಮೊನಚಾಗಿ ಮಸೆದ ಅನೇಕ ಘೋರರೂಪೀ ಆಯುಧಗಳನ್ನು ಧರಿಸಿದ್ದರು. ಎಲ್ಲರೂ ತಮ್ಮ ತಮ್ಮ ದೇಹಗಳಿಗೆ ತಕ್ಕಂತೆ ಧೂಮ್ರ-ಜ್ವಾಲೆಗಳನ್ನು ಹೊರಚೆಲ್ಲುತ್ತಿದ್ದ ಚಕ್ರ-ಪರಿಘ-ತ್ರಿಶೂಲ-ಪರಶು-ಶಕ್ತಿ-ಕರವಾಲ-ಗದೆಗಳನ್ನು ಧರಿಸಿದ್ದರು. ದಿವ್ಯಾಭರಣ ಭೂಷಿತ ಸುರಗಣವು ಶಸ್ತ್ರಗಳ ಕಾಂತಿಯಿಂದ ಬೆಳಗುತ್ತ್ತಾ ನಿರ್ಭಯವಾಗಿ ಅಲ್ಲಿ ನಿಂತಿತು. ಅನುಪಮ ಬಲ-ವೀರ್ಯ-ತೇಜಸರೂ, ಅಸುರಪುರಗಳನ್ನು ಪುಡಿಮಾಡಬಲ್ಲ, ಜ್ವಾಲೆಗಳಂತೆ ಪ್ರಕಾಶಿಸುತ್ತಿದ್ದ ಆ ಸುರರೆಲ್ಲರೂ ದೃಢಮನಸ್ಕರಾಗಿ ಅಮೃತಕ್ಕೆ ಕಾವಲು ನಿಂತರು. ನೂರಾರು ಸಹಸ್ರಾರು ಪರಿಘಗಳನ್ನು ಹಿಡಿದು ನಿಂತಿದ್ದ ಸುರರಿಂದಾಗಿ ಆ ಸಮರಭೂಮಿಯು ಆಕಾಶದಲ್ಲಿ ಸುಡನ ಸೂರ್ಯನ ಕಿರಣಗಳ ಬಲೆಯಂತೆಯೇ ಕಂಡುಬಂದಿತು.

ದೇವತೆಗಳೆಲ್ಲರೂ ಯುದ್ಧಸನ್ನದ್ಧರಾಗಿ ನಿಂತಿರುವಾಗ ಪಕ್ಷಿರಾಜ ಗುರುತ್ಮಂತನು ಅವರ ಬಳಿ ತಲುಪಿದನು. ಆ ಅತಿಬಲನನ್ನು ಕಂಡು ದೇವತೆಗಳು ಭಯದಿಂದ ತತ್ತರಿಸಿದರು. ಸೋಮದ ಪರಿರಕ್ಷಕರಲ್ಲಿ ಒಂದಾಗಿದ್ದ ಅಮೇಯಾತ್ಮ, ವಿದ್ಯುದಗ್ನಿ ಸಮಪ್ರಭ ಸುಮಹಾವೀರ್ಯ ಭೌವವನು ಒಂದೇ ಕ್ಷಣದಲ್ಲಿ ಗರುಡನ ರೆಕ್ಕೆ-ಕೊಕ್ಕು-ಪಂಜುಗಳಿಗೆ ಸಿಲುಕಿ ರಣಭೂಮಿಯನ್ನು ಮಡಿದನು.

ಆ ಖೇಚರನು ತನ್ನ ವಿಸ್ತಾರ ರೆಕ್ಕೆಗಳಿಂದ ಅತಿದೊಡ್ಡ ಧೂಳಿನ ಭಿರುಗಾಳಿಯನ್ನೇ ಎಬ್ಬಿಸಿ ಮೂರೂ ಲೋಕಗಳನ್ನು ಅಂಧಕಾರದಲ್ಲಿ ಮುಳುಗಿಸಿ, ದೇವತೆಗಳನ್ನು ಉದ್ವಿಗ್ನಗೊಳಿಸಿದನು. ಧೂಳಿನಿಂದ ಆವರಿಸಲ್ಪಟ್ಟು ದೇವತೆಗಳು ಮೂರ್ಛೆ ಹೊಂದಿದರು. ಅಮೃತವನ್ನು ಕಾಯಲು ನಿಂತವರು ಆ ಧೂಳಿನಲ್ಲಿ ಅವನನ್ನು ನೋಡಲು ಅಸಮರ್ಥರಾದರು. ಹೀಗೆ ಗರುಡನು ತನ್ನ ರೆಕ್ಕೆ ಕೊಕ್ಕುಗಳ ಪ್ರಹಾರದಿಂದ ಮೂರುಲೋಕಗಳ ಪಾಲಕರಾದ ದೇವತೆಗಳನ್ನು ಮುದ್ದೆ ಮಾಡಿದನು. ಆಗ ದೇವ ಸಹಸ್ರಾಕ್ಷನು ಗಾಬರಿಯಿಂದ ವಾಯುವಿಗೆ ಆಜ್ಞೆಯನ್ನಿತ್ತನು: “ಮಾರುತ! ಈ ಧೂಳಿನ ಮಳೆಯನ್ನು ನಿಲ್ಲಿಸುವುದು ನಿನ್ನ ಕೆಲಸ!” ಬಲಶಾಲಿ ವಾಯುವು ಆ ಧೂಳಿನ ಮಳೆಯನ್ನು ಹೋಗಲಾಡಿಸಿದನು. ಕತ್ತಲೆಯು ನಾಶವಾದಾಗ ದೇವತೆಗಳು ಪಕ್ಷಿಯ ಮೇಲೆರಗಿದರು. ಈ ರೀತಿ ಸುರಗಣಗಳ ಹೊಡೆತಕ್ಕೆ ಸಿಲುಕಿದ ಆ ಬಲವಾನ್ ಪಕ್ಷಿಯು ಸರ್ವಭೂತಗಳಿಗೂ ಭಯವನ್ನುಂಟುಮಾಡುವ ಮಹಾಮೇಘದಂತೆ ಗರ್ಜಿಸಿದನು. ಮಹಾವೀರ್ಯ ಪಕ್ಷಿರಾಜನು ತನ್ನ ರೆಕ್ಕೆಗಳನ್ನೇರಿ ಹಾರಿದನು. ಮೇಲೆ ಹಾರಿದ ಅವನು ಅಂತರಿಕ್ಷದಲ್ಲಿ ದೇವತೆಗಳ ಮೇಲೆ ನಿಂತನು. ಆಗ ವಾಸವನೂ ಸೇರಿ ಎಲ್ಲ ದೇವತೆಗಳೂ ಅವನ ಮೇಲೆ ನಾನಾ ಶಸ್ತ್ರಗಳಿಂದ, ಪಟ್ಟಿಶ, ಪರಿಘ, ಶೂಲ, ಗದೆ, ಪ್ರಜ್ವಲಿಸುತ್ತಿರುವ ಬಾಣಗಳು ಮತ್ತು ಆದಿತ್ಯರೂಪೀ ಚಕ್ರಗಳಿಂದ ಪ್ರಹಾರಮಾಡಿದರು. ಹೀಗೆ ಒಂದೇಸಮನೆ ನಾನಾ ಶಸ್ತ್ರಗಳ ಪ್ರಹಾರಕ್ಕೊಳಗಾದರೂ ಸರಿಸಾಟಿಯಾಗಿ ಯುದ್ಧ ಮಾಡುತ್ತಿದ್ದ  ಪಕ್ಷಿರಾಜನು ಸ್ವಲ್ಪವೂ ಆಯಾಸಗೊಳ್ಳಲಿಲ್ಲ. ಆಕಾಶದಲ್ಲಿ ಉರಿಯುತ್ತಿದ್ದ ಪ್ರತಾಪವನ್ ವೈನತೇಯನು ಸುರರೆಲ್ಲರನ್ನೂ ತನ್ನ ರೆಕ್ಕೆ ಮತ್ತು ಛಾತಿಗಳಿಂದ ಧಾಳಿಮಾಡಿ ಎಲ್ಲ ಕಡೆಗೂ ಓಡಿಹೋಗುವಂತೆ ಮಾಡಿದನು. ಗರುಡನ ಹೊಡೆತಕ್ಕೆ ಸಿಲುಕಿದ ದೇವತೆಗಳು ಸೋತು ಪಲಾಯನ ಮಾಡತೊಡಗಿದರು. ಅವನ ಉಗುರು ಪಂಜಗಳಿಂದ ಪೆಟ್ಟು ತಿಂದವರ ದೇಹದಿಂದ ಬಹಳಷ್ಟು ರಕ್ತ ಸೋರತೊಡಗಿತು. ಪತಗೇಂದ್ರನ ಹೊಡೆತ ತಿಂದ ಸಾಧ್ಯರು ಮತ್ತು ಗಂಧರ್ವರು ಪೂರ್ವದಿಕ್ಕಿಗೆ ಪಲಾಂiನ ಗೈದರು. ವಸುಗಳು ಮತ್ತು ರುದ್ರರು ದಕ್ಷಿಣದ ಕಡೆ ಓಡಿದರು. ಆದಿತ್ಯರು ಪಶ್ಚಿಮಕ್ಕೆ, ನಾಸತ್ಯರು ಉತ್ತರಕ್ಕೆ, ಯುದ್ಧದಲ್ಲಿ ತೊಡಗಿರುವ ಮಃಹೋಜಸನನ್ನು ಪುನಃ ಪುನಃ ತಿರುಗಿ ನೋಡುತ್ತಾ ಪಲಾಂiiನಗೈದರು. ಈ ರೀತಿ ಖೇಚರ ಪಕ್ಷಿಯು ವೀರ ಅಶ್ವಕ್ರಂದ ಮತ್ತು ರೇಣುಕ, ಶೂರ ಕ್ರಥನ ಮತ್ತು ತಪನ, ಉಲೂಕ, ಅಶ್ವಸನ, ನಿಮಿಷ, ಪ್ರರುಜ, ಪ್ರಲಿನ, ಮುಂತಾದವರೊಂದಿಗೆ ಯುದ್ಧ ಮಾಡಿದನು. ಆ ಮಹಾಬಲ ವಿನತಸುತನು ಯುಗಾಂತಕಾಲದಲ್ಲಿ ಸಂಕೃದ್ಧ ಪಿನಾಕಿಯ ಹಾಗೆ ತನ್ನ ರೆಕ್ಕೆ, ಉಗುರು ಮತ್ತು ಪಂಜಗಳ ತುದಿಯಿಂದ ಗಾಯಗೊಳಿಸಿದನು. ಮಹಾವೀರ್ಯ ಮಹೋತ್ಸಾಹೀ ದೇವತೆಗಳು ಅವನಿಂದ ಹೊಡೆತ ತಿಂದು ರಕ್ತದ ಮಳೆ ಸುರಿಸುತ್ತಿರುವ ಕಪ್ಪು ಮೋಡಗಳಂತೆ ಕಂಡುಬಂದರು. ಈ ರೀತಿ ಸರ್ವ ದೇವತೆಗಳನ್ನು ನಿರ್ಜೀವರನ್ನಾಗಿ ಮಾಡಿ ಆ ಪತಗಶ್ರೇಷ್ಠನು ಅಮೃತದ ಕಡೆ ಮುಂದುವರೆದನು. ಅದರ ಎಲ್ಲ ಕಡೆಯಿಂದಲೂ ಅಗ್ನಿಯು ಆವರಿಸಿರುವುದನ್ನು ಕಂಡನು. ಆ ಬೆಂಕಿಯ ಮಹಾಜ್ವಾಲೆಗಳು ಇಡೀ ಆಕಾಶವನ್ನೇ ಆವರಿಸುವಂತಿದ್ದವು ಮತ್ತು ಘೋರ ಭಿರುಗಾಳಿಯಿಂದ ತತ್ತರಿಸುತ್ತಾ ಅವು ಸೂರ್ಯನನ್ನೇ ಸುಡುತ್ತಿವೆಯೋ ಎಂಬಂತೆ ತೋರುತ್ತಿದ್ದವು. ಆಗ ಮಹಾತ್ಮ ಗರುಡನು ಎಂಭತ್ತೊಂದು ಮುಖಗಳನ್ನು ಧರಿಸಿ ಆ ಬಾಯಿಗಳಿಂದ ಹಲವಾರು ನದಿಗಳನ್ನು ಕುಡಿದು ತನ್ನ ರೆಕ್ಕೆಗಳ ರಥವನ್ನೇರಿ ಸುಶೀಘ್ರವಾಗಿ ಮರಳಿ ಬಂದು ಉರಿಯುತ್ತಿರುವ ಅಗ್ನಿಯಲ್ಲಿ ಆ ನದಿಗಳನ್ನು ಸುರುವಿದನು. ಬೆಂಕಿಯನ್ನು ಆರಿಸಿದ ತಕ್ಷಣವೇ ಅಲ್ಪ ರೂಪವನ್ನು ತಾಳಿ ಅಮೃತವನ್ನಿಟ್ಟಿದ್ದ ಸ್ಥಳವನ್ನು ಪ್ರವೇಶಿಸಲು ಸಿದ್ಧನಾದನು.

ಸೂರ್ಯನ ಕಿರಣಗಳಂತೆ ಪ್ರಜ್ವಲಿಸುತ್ತಿರುವ ಕಾಂಚನದೇಹವನ್ನು ತಾಳಿ ಆ ಪಕ್ಷಿಯು ಸಮುದ್ರವನ್ನು ಸೇರುತ್ತಿರುವ ನದಿಯಂತೆ ವೇಗವಾಗಿ ಒಳ ಹೊಕ್ಕನು. ಅಮೃತವನ್ನು ಕದಿಯಲು ಬರುವವರನ್ನು ಕತ್ತರಿಸಲು ದೇವತೆಗಳು ಪ್ರಯತ್ನಪಟ್ಟು ರಚಿಸಿದ್ದ ಸೂರ್ಯ ಪ್ರಭೆಯಂತೆ ಪ್ರಜ್ವಲಿಸುತ್ತಿದ್ದ ನಿರಂತರವಾಗಿ ಪರಿಭ್ರಮಿಸುತ್ತಿದ್ದ ತೀಕ್ಷ್ಣ ಹಲ್ಲುಗಳ ಘೋರ ಚಕ್ರವೊಂದನ್ನು ಅಮೃತದ ಮುಂದೆ ನೋಡಿದನು. ಅವುಗಳ ಮಧ್ಯದಲ್ಲಿ ದಾರಿಯೊಂದನ್ನು ಕಂಡ ಖೇಚರನು ಒಂದು ಕ್ಷಣದಲ್ಲಿ ಸಣ್ಣದಾಗಿ ಆ ಚಕ್ರದ ಹಲ್ಲುಗಳ ಮಧ್ಯದಿಂದ ಒಳ ಹೊಕ್ಕನು. ಆ ಚಕ್ರದ ಹಿಂದೆ ಉರಿಯುತ್ತಿರುವ ಬೆಂಕಿಯಂತೆ ಪ್ರಜ್ವಲಿಸುತ್ತಿರುವ ಮಿಂಚಿನಂತೆ ನಾಲಿಗೆಗಳನ್ನು ಹೊರಚಾಚುತ್ತಿದ್ದ, ಬೆಂಕಿಯನ್ನು ಕಾರುತ್ತಿದ್ದ ಬಾಯಿ ಮತ್ತು ಉರಿಯುತ್ತಿರುವ ಕಣ್ಣುಗಳನ್ನು ಹೊಂದಿದ್ದ, ವಿಷಕಾರಕ, ಮಹಾಘೋರ, ಮಹಾವೀರ್ಯ, ಸದಾ ಸಿಟ್ಟಿನಲ್ಲಿರುವ, ಕಣ್ಣನ್ನು ಮಚ್ಚದೆಯೇ ಯಾವಾಗಲೂ ಎಚ್ಚರದಲ್ಲಿದ್ದು ಅಮೃತವನ್ನು ರಕ್ಷಿಸುತ್ತಿದ್ದ ಈರ್ವರು ಸರ್ಪೋತ್ತಮರನ್ನು ಕಂಡನು. ಯಾವುದೇ ಸರ್ಪದ ಕಣ್ಣು ಯಾರ ಮೇಲೆ ಬಿದ್ದರೂ ಅವರು ತಕ್ಷಣವೇ ಭಸ್ಮವಾಗಿ ಬಿಡುತ್ತಿದ್ದರು. ಆಗ ಸುಪರ್ಣನು ಅವರ ಕಣ್ಣುಗಳನ್ನು ಧೂಳಿನಿಂದ ಮುಚ್ಚಿ, ಅವರನ್ನು ಅಂಧರನ್ನಾಗಿ ಮಾಡಿ, ಎಲ್ಲ ಕಡೆಯಿಂದಲೂ ಅವರನ್ನು ಆಕ್ರಮಣ ಮಾಡಿದನು. ಆ ಅಂತರಿಕ್ಷಗ ವೈನತೇಯನು ಅವರನ್ನು ತುಂಡುಮಾಡಿ ಮುದ್ದೆಮಾಡಿ ತಡಮಾಡದೇ ಸೋಮದ ಕಡೆ ಧಾವಿಸಿದನು. ಬಲಶಾಲಿ ವೀರ್ಯವಾನ್ ವೈನತೇಯನು ಅಮೃತವನ್ನು ಅಲ್ಲಿಂದ ಎತ್ತಿ, ಆ ಚಕ್ರವನ್ನು ತುಂಡು ತುಂಡು ಮಾಡಿ ವೇಗದಿಂದ ಮೇಲೇರಿದನು. ಆ ವೀರ ಪಕ್ಷಿಯು ಕುಡಿಯದೆಯೇ ಅಮೃತವನ್ನು ಎತ್ತಿಕೊಂಡು ಸ್ವಲ್ಪವೂ ಆಯಾಸಗೊಳ್ಳದೇ ಮೇಲೆ ಹಾರಿ, ಸೂರ್ಯನ ಪ್ರಭೆಯನ್ನೂ ಕುಂಠಿತಗೊಳಿಸಿದನು. ಆಕಾಶದಲ್ಲಿ ವಿಷ್ಣು ನಾರಾಯಣನು ವೈನತೇಯನನ್ನು, ಅವನ ಸ್ವ-ನಿಯಂತ್ರಣವನ್ನು ಮತ್ತು ಕಾರ್ಯವನ್ನು ಕಂಡು ತುಷ್ಟನಾದನು. ಆ ಅವ್ಯಯ ದೇವನು ಹೇಳಿದನು: “ಪಕ್ಷಿಯೇ! ನಿನಗೆ ವರವನ್ನು ನೀಡುತ್ತೇನೆ.” ಅದಕ್ಕೆ ಅಂತರಿಕ್ಷಗನು “ನಿನ್ನ ಮೇಲೆಯೇ ನನಗೆ ಸ್ಥಾನವನ್ನು ಕೊಡು” ಎಂದನು. ನಾರಾಯಣನಲ್ಲಿ ಇನ್ನೂ ಕೇಳಿಕೊಂಡನು: ಅಮೃತವನ್ನು ಕುಡಿಯದೆಯೇ ನಾನು ಅಜರ ಮತ್ತು ಅಮರನಾಗಲಿ. ಆ ಎರಡು ವರಗಳನ್ನು ಸ್ವೀಕರಿಸಿದ ಗರುಡನು ವಿಷ್ಣುವಿಗೆ  ಹೇಳಿದನು: “ಭಗವನ್! ನಾನೂ ಕೂಡ ನಿನಗೆ ವರವನ್ನು ಕೊಡುತ್ತೇನೆ. ಕೇಳಿಕೋ.” ಆ ಮಾತಿಗೆ ಕೃಷ್ಣನು ಮಹಾಬಲ ಗರುತ್ಮಂತನನ್ನು ತನ್ನ ವಾಹನವನ್ನಾಗಿ ಆರಿಸಿಕೊಂಡನು. ಮತ್ತು ಅವನನ್ನು ಧ್ವಜದಲ್ಲಿ ಇಟ್ಟು “ಈ ರೀತಿ ನನ್ನ ಮೇಲೆಯೂ ನೀನು ಇರುತ್ತೀಯೆ” ಎಂದನು. ಅಮೃತವನ್ನು ಬಲಾತ್ಕಾರವಾಗಿ ಕದ್ದು ಒಯ್ಯುತ್ತಿರುವ ಸುರಶತ್ರು ಗರುಡನನ್ನು ಇಂದ್ರನು ವಜ್ರದಿಂದ ಹೊಡೆದನು. ಪಕ್ಷಿಗಳಲ್ಲಿಯೇ ಶ್ರೇಷ್ಠ ವಜ್ರಸಮಾಹತ ಗರುಡನು ಸಿಟ್ಟಿಗೆದ್ದ ಇಂದ್ರನಿಗೆ ನಗುತ್ತಾ ಶ್ಲಾಘನೀಯ ಮಾತುಗಳಿಂದ ಹೇಳಿದನು: “ಯಾವ ಋಷಿಗಳ ಎಲುಬಿನಿಂದ ಈ ವಜ್ರವು ಮಾಡಲ್ಪಟ್ಟಿದೆಯೋ ಅವರನ್ನು, ಈ ವಜ್ರವನ್ನು ಮತ್ತು ಶತಕ್ರತು! ನಿನ್ನನ್ನು ಗೌರವಿಸುತ್ತೇನೆ. ನನ್ನ ಈ ಒಂದು ರೆಕ್ಕೆಯ ಪುಕ್ಕವನ್ನು ಬಿಸಾಡುತ್ತಿದ್ದೇನೆ. ಅದರ ಕೊನೆಯನ್ನು ನೀನೂ ಕೂಡ ಕಾಣಲಾರೆ. ವಜ್ರದ ಹೊಡೆತದಿಂದ ನನಗೆ ಸ್ವಲ್ಪವೂ ನೋವಾಗಲಿಲ್ಲ.” ಆ ಸುಂದರ ರೆಕ್ಕೆಯ ಪುಕ್ಕವನ್ನು ನೋಡಿ ವಿಸ್ಮಿತರಾದ ಸರ್ವ ಜೀವಿಗಳೂ “ಇವನು ಸುಪರ್ಣ ಎಂದು ಕರೆಯಲ್ಪಡಲಿ!” ಎಂದರು. ಆ ಅದ್ಭುತವನ್ನು ಕಂಡ ಸಹಸ್ರಾಕ್ಷ ಪುರಂದರನು ಈ ಪಕ್ಷಿಯು ಒಂದು ಮಹಾ ಜೀವಿ ಎಂದು ಗಮನಿಸಿ ಹೇಳಿದನು: “ನಿನ್ನ ಅನುತ್ತಮ ಪರಮ ಬಲವನ್ನು ತಿಳಿಯ ಬಯಸುತ್ತೇನೆ. ಮತ್ತು ಖಗೋತ್ತಮ! ನಿನ್ನೊಡನೆ ಅನಂತ ಸಖ್ಯವನ್ನು ಬಯಸುತ್ತೇನೆ.”

ಗರುಡನು ಹೇಳಿದನು: “ಪುರಂದರ! ನಿನ್ನ ಬಯಕೆಯಂತೆ ನಮ್ಮೀರ್ವರಲ್ಲಿ ಸಖ್ಯವಿರಲಿ. ನನ್ನ ಬಲವು ಮಹತ್ತರ ಮತ್ತು ಅಸಹನೀಯ ಎಂದು ತಿಳಿ. ಶತಕ್ರತು! ತನ್ನನ್ನು ತಾನೇ ಹೊಗಳಿಕೊಳ್ಳುವುದನ್ನು ಮತ್ತು ತನ್ನ ಬಲವನ್ನು ತಾನೇ ಪ್ರಶಂಸೆ ಮಾಡುವುದನ್ನು ಸಂತರು ಒಪ್ಪಿಕೊಳ್ಳುವುದಿಲ್ಲ. ಸಖ! ನಾವೀರ್ವರೂ ಈಗ ಸ್ನೇಹಿತರಾದುದರಿಂದ ನೀನು ಕೇಳಿದೆಯೆಂದು ಸ್ವ ಸ್ತುತಿಯು ಒಳ್ಳೆಯದಲ್ಲದಿದ್ದರೂ ಹೇಳುತ್ತಿದ್ದೇನೆ. ಶಕ್ರ! ನಾನು ಪರ್ವತ, ಸಮುದ್ರ, ವನ ಮತ್ತು ನಿನ್ನನ್ನೂ ಸೇರಿ ಈ ಭೂಮಿಯನ್ನು ನನ್ನ ರೆಕ್ಕೆಯ ಒಂದು ಪುಕ್ಕದ ಮೇಲೆ ಹೊರಬಲ್ಲೆ. ಸರ್ವ ಲೋಕಗಳನ್ನೂ ಅವುಗಳಲ್ಲಿರುವ ಸ್ಥಾಣು ಜಂಗಮಗಳನ್ನೂ ಸೇರಿ ಆಯಾಸವಿಲ್ಲದೇ ಹೊರಬಲ್ಲೆ. ಇದು ನನ್ನ ಮಹಾ ಬಲವೆಂದು ತಿಳಿ.”

ವೀರನ ಈ ಮಾತುಗಳಿಗೆ ಶ್ರೀಮಂತ ಶ್ರೇಷ್ಠ ವೀರ ಕಿರೀಟೀ ಸರ್ವಭೂತಹಿತ ಪ್ರಭು ದೇವೇಂದ್ರನು ಉತ್ತರಿಸಿದನು: “ನಿರಂತರವೂ ಉತ್ತಮವೂ ಆದ ನನ್ನ ಈ ಸಖ್ಯವನ್ನು ಪ್ರತಿಗ್ರಹಿಸು. ನಿನಗೆ ಸೋಮವು ಯಾವ ಪ್ರಯೋಜನಕ್ಕೂ ಬಾರದಿದ್ದರೆ ಸೋಮವನ್ನು ನನಗೆ ಹಿಂದಿರುಗಿಸು. ನೀನು ಇದನ್ನು ಯಾರಿಗೆ ಕೊಡುತ್ತೀಯೋ ಅವರು ನಮ್ಮ ಜೊತೆ ಯಾವಾಗಲೂ ಹೊಡೆದಾಡುತ್ತಾರೆ.”

ಗರುಡನು ಹೇಳಿದನು: “ಯಾವುದೋ ಒಂದು ಉದ್ದೇಶದಿಂದ ನಾನು ಈ ಸೋಮವನ್ನು ಒಯ್ಯುತ್ತಿದ್ದೇನೆ. ಈ ಸೋಮವನ್ನು ನಾನು ಯಾರಿಗೂ ಕುಡಿಯಲು ಕೊಡುವುದಿಲ್ಲ. ಸಹಸ್ರಾಕ್ಷ! ತ್ರಿದಶೇಶ್ವರ! ನಾನು ಇದನ್ನು ಕೆಳಗೆ ಇಟ್ಟಕೂಡಲೇ ಅದನ್ನು ನೀನು ಸ್ವತಃ ಅಪಹರಿಸಿ ತೆಗೆದುಕೊಂಡು ಹೋಗು.”

ಶಕ್ರನು ಹೇಳಿದನು: “ಅಂಡಜ! ನಿನ್ನ ಈ ಮಾತುಗಳಿಂದ ನಾನು ಸಂತುಷ್ಟನಾಗಿದ್ದೇನೆ. ಖಗೋತ್ತಮ! ನನ್ನಿಂದ ನಿನಗಿಷ್ಟವಾದ ವರವನ್ನು ಪಡೆದುಕೋ.”

ಈ ರೀತಿ ಕೇಳಲ್ಪಟ್ಟಾಗ ಅವನು ಕದ್ರುವಿನ ಮಕ್ಕಳನ್ನೂ ಮತ್ತು ಅವರ ಮೋಸದಿಂದ ತನ್ನ ತಾಯಿಗಾದ ದಾಸತ್ವವನ್ನೂ ನೆನೆಸಿಕೊಂಡು ಹೇಳಿದನು: “ಶಕ್ರ! ನಾನು ಎಲ್ಲವನ್ನು ಮಾಡಲು ಶಕ್ಯನಿದ್ದರೂ ನೀನು ಹೇಳಿದೆಯೆಂದು ಕೇಳುತ್ತಿದ್ದೇನೆ. ಮಹಾಬಲ ನಾಗಗಳು ನನ್ನ ಆಹಾರವಾಗಲಿ.”

“ಹಾಗೆಯೇ ಆಗಲಿ. ನೀನು ಸೋಮವನ್ನು ಕೆಳಗಿಟ್ಟಕೂಡಲೇ ನಾನು ಅಪಹರಿಸುತ್ತೇನೆ!”ಎಂದು ಹೇಳಿ ಆ ದಾನವ ಸೂದನನು ಹೊರಟುಹೋದನು. ತಕ್ಷಣವೇ ಸುಪರ್ಣನು ವೇಗವಾಗಿ ತನ್ನ ತಾಯಿಯ ಬಳಿ ಬಂದು ಪರಮ ಹರ್ಷಿತನಾಗಿ ಸರ್ವ ಸರ್ಪಗಳಿಗೂ ಹೇಳಿದನು: “ಇಗೋ ನಾನು ಅಮೃತವನ್ನು ತಂದಿದ್ದೇನೆ. ಕುಶಗಳ ಮಧ್ಯೆ ಇಡುತ್ತಿದ್ದೇನೆ. ಪನ್ನಗಗಳೇ! ಮಂಗಳ ಸ್ನಾನವನ್ನು ಮಾಡಿ ಇದನ್ನು ಕುಡಿಯಿರಿ. ನೀವು ನನಗೆ ಹೇಳಿದುದನ್ನು ನಾನು ಮಾಡಿದ್ದೇನೆ. ನೀವು ಮಾತುಕೊಟ್ಟಹಾಗೆ ಇಂದಿನಿಂದ ನನ್ನ ತಾಯಿಯು ಅದಾಸಿಯಾಗುತ್ತಾಳೆ.” “ಹಾಗೆಯೇ ಆಗಲಿ!” ಎಂದು ಸರ್ಪಗಳು ಸ್ನಾನಕ್ಕೆಂದು ಹೋದವು. ಆಗ ಶಕ್ರನು ಅಮೃತವನ್ನು ಎತ್ತಿಕೊಂಡು ಪುನಃ ಸ್ವರ್ಗಕ್ಕೆ ಕೊಂಡೊಯ್ದನು. ಸ್ನಾನ, ಜಪ ಮತ್ತು ಮಂಗಲ ಕಾರ್ಯಗಳನ್ನು ಮುಗಿಸಿ ಪ್ರಹೃಷ್ಟರಾಗಿ ಸೋಮಾರ್ಥಿ ಸರ್ಪಗಳು ಆ ಸ್ಥಳಕ್ಕೆ ಹಿಂದಿರುಗಿದರು. ಸೋಮವನ್ನು ಇರಿಸಿದ್ದ ದರ್ಭೆಗಳು ಖಾಲಿಯಾಗಿದ್ದುದನ್ನು ಸರ್ಪಗಳು ಕಂಡು ಮೋಸದಿಂದ ಅದನ್ನು ಕೊಂಡೊಯ್ಯಲಾಗಿದೆ ಎಂದು ತಿಳಿದರು. ಆಗ ಅವರು ಅಮೃತವನ್ನು ಇಟ್ಟಿದ್ದ ದರ್ಭೆಗಳನ್ನು ನೆಕ್ಕ ತೊಡಗಿದರು ಮತ್ತು ಇದರಿಂದ ಅವುಗಳ ನಾಲಿಗೆಗಳು ಸೀಳಿಹೋದವು. ಇದೇ ಕಾರಣದಿಂದಲೇ ದರ್ಭೆಗಳು ಪವಿತ್ರವೆನಿಸಿಕೊಂಡವು. ನಂತರ ಸುಪರ್ಣನು ಪರಮ ಹರ್ಷಿತನಾಗಿ ತನ್ನ ತಾಯಿಯೊಂದಿಗೆ ಆ ಕಾನನದಲ್ಲಿ ವಾಸಿಸಿದನು. ಸರ್ಪಗಳನ್ನು ಭಕ್ಷಿಸುವುದರ ಮೂಲಕ ಮತ್ತು ಇನ್ನೂ ಇತರ ಮಹಾಕಾರ್ಯಗಳನ್ನು ಎಸಗುವುದರ ಮೂಲಕ ಎಲ್ಲ ಪಕ್ಷಿಗಳಿಂದ ಪೂಜಿಸಲ್ಪಟ್ಟ ಗರುಡನು ತನ್ನ ತಾಯಿಯನ್ನು ಸಂತಸಗೊಳಿಸಿದನು.

ಈ ಕಥೆಯನ್ನು ಯಾವ ನರನು ಕೇಳುತ್ತಾನೋ ಅಥವಾ ಮುಖ್ಯ ದ್ವಿಜನರ ಸನ್ನಿದಿಯಲ್ಲಿ ಸದಾ ಓದುತ್ತಾನೋ ಅವನು ಗರುಡನ ಸಂಕೀರ್ತನೆಯಿಂದ ನಿಸ್ಸಂಶಯವಾಗಿ ಪುಣ್ಯವಂತನಾಗಿ ಸ್ವರ್ಗವನ್ನು ಸೇರುತ್ತಾನೆ.

ಹಿಂದಿನ ಲೇಖನರಾಹುಲ್ ಗಾಂಧಿ ಅನರ್ಹತೆ: ಮಹಿಳಾ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ
ಮುಂದಿನ ಲೇಖನಖಾತೆಯೊಂದನ್ನು ವಂಚನೆ ವರ್ಗಕ್ಕೆ ಸೇರಿಸುವ ಮುನ್ನ ಸಾಲ ಪಡೆದವರ ವಾದ ಆಲಿಸಿ ತಾರ್ಕಿಕ ತೀರ್ಮಾನಕ್ಕೆ ಬರಬೇಕು: ಸುಪ್ರೀಂ