ಮನೆ ರಾಜ್ಯ ಭೂಮಿ, ಸ್ತ್ರೀ  ಹಾಗೂ ಗೋವುಗಳ ರಕ್ಷಣೆಗಾಗಿ ಅಗ್ನಿ ಬನ್ನಿರಾಯಸ್ವಾಮಿ ಜನನ: ಡಾ.ಟಿ.ರಮೇಶ್

ಭೂಮಿ, ಸ್ತ್ರೀ  ಹಾಗೂ ಗೋವುಗಳ ರಕ್ಷಣೆಗಾಗಿ ಅಗ್ನಿ ಬನ್ನಿರಾಯಸ್ವಾಮಿ ಜನನ: ಡಾ.ಟಿ.ರಮೇಶ್

0

ಮೈಸೂರು: ಪುರಾಣದಲ್ಲಿ ನಂಬಿರುವಂತೆ, ಸತ್ಯ ಯುಗದಲ್ಲಿ ಇದ್ದರೆಂದು ನಂಬಲಾಗಿದ್ದ ಅಗ್ನಿ ಬನ್ನಿರಾಯ ಸ್ವಾಮಿಯ ಜನನದ ಉದ್ದೇಶ ಭೂಮಿ, ಸ್ತ್ರೀ ಹಾಗೂ ಗೋವುಗಳನ್ನು ರಕ್ಷಣೆ ಮಾಡುವುದಾಗಿತ್ತು ಎಂದು ಬಾಸುದೇವ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಟಿ ರಮೇಶ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ಕ್ಷತ್ರಿಯ ಕುಲದವರು ಪರಾಕ್ರಮಿಗಳು ಹಾಗೂ ಧೈರ್ಯವಂತರು. ಇತಿಹಾಸ ಪುಟಗಳಲ್ಲಿ ಕ್ಷತ್ರಿಯ ವರ್ಗ ತನ್ನದೇ ಆದ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ನಾಡಿಗಾಗಿ ರಾಜ ಮಹಾರಾಜರು ಬಲಿದಾನವನ್ನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿದುಕೊಳ್ಳಬೇಕು. ರಾಜ್ಯವನ್ನು ಆಳುವ ಹಾಗೂ ಕಾಯುವ ವರ್ಗವೇ ಕ್ಷತ್ರಿಯ ವರ್ಗವಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಹಾಗೂ ಕೋಲಾರಗಳಲ್ಲಿ ಹೆಚ್ಚಾಗಿ ಕಂಡು ಬರುವ ತಿಗಳ ಸಮುದಾಯದವರು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ತಿಳಿಸಿದರು.

ಪ್ರಥಮ ಬಾರಿಗೆ ಬನ್ನಿರಾಯ ಸ್ವಾಮಿ ಜಯಂತಿಯನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷ ತಂದಿದೆ. 18 ಪುರಾಣಗಳ ಪೈಕಿ 9 ಪುರಾಣಗಳಲ್ಲಿ ಬನ್ನಿರಾಯಸ್ವಾಮಿಯವರ ಬಗ್ಗೆ ಉಲ್ಲೇಖವಿದೆ. ದೇವಲೋಕದಲ್ಲಿ ವಾತಾಪಿ ಎಂಬ ರಾಕ್ಷಸನ ಅಟ್ಟಹಾಸದಿಂದ ಕಂಗೆಟ್ಟ ದೇವತೆಗಳು ಶಿವನ ಮೊರೆ ಹೋದರು. ಶಿವನ ಆ ತ್ರಿನೇತ್ರದಿಂದ ಹೊರಹೊಮ್ಮಿದ ಒಂದು ಹನಿಯು ಋಷಿಮುನಿಗಳು ಆಚರಿಸುತ್ತಿದ್ದ ಯಾಗದ ಕುಂಡದಲ್ಲಿ ಬಿದ್ದು, ಆ ಕುಂಡದಿಂದ ಅಗ್ನಿ ಬನ್ನಿರಾಯ ಸ್ವಾಮಿ ಉದಯಿಸಿದನೆಂದು ನಂಬಿಕೆಯಿದೆ ಎಂದರು.

ಹೈದರಾಲಿಯು ಒಂದು ಸುಂದರವಾದ ತೋಟವನ್ನು ನಿರ್ಮಿಸಬೇಕೆಂಬ ಕನಸನ್ನು ಕಂಡಿದ್ದನು. ಹಾಗಾಗಿ ತಮಿಳುನಾಡಿನ ಅರ್ಕಾಟ್ ಪ್ರದೇಶಕ್ಕೆ ದಾಳಿ ಮಾಡಿ ಸುಂದರವಾದ ತೋಟಗಳನ್ನು ನಿರ್ಮಿಸುವುದರಲ್ಲಿ ಕುಶಲತೆ ಹೊಂದಿದ್ದ ತಿಗಳ ಸಮುದಾಯದವರನ್ನು ಕರ್ನಾಟಕದ ಬೆಂಗಳೂರಿನಲ್ಲಿ 60 ಎಕರೆಗೆ ಒಳಪಟ್ಟ ಹೂವಿನ ತೋಟವನ್ನು ನಿರ್ಮಿಸುವಂತೆ ಹೇಳಿದನು. ಹೈದರ್‌ನ ಮಾತಿನಂತೆ ಬೆಂಗಳೂರಿನಲ್ಲಿ ಒಂದು ತೋಟವನ್ನು ನಿರ್ಮಿಸಲಾಯಿತು. ಈ ಸಮುದಾಯದವರು ನಿರ್ಮಿಸಿದ ತೋಟವೇ ಲಾಲ್‌ಬಾಗ್ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಅವರು ಅಗ್ನಿ ಬನ್ನಿರಾಯ ಸ್ವಾಮಿ ತಿಗಳರ ಸಮುದಾಯದ ಮೂಲಪುರುಷ ಎಂದು ನಂಬಲಾಗಿದೆ. ಸರ್ಕಾರದ ಮಟ್ಟದಲ್ಲಿ ಇವರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಮೈಸೂರಿನ ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘ, ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.