ಮನೆ ಕಾನೂನು ಪಿಎಸ್ ಐ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಮನವಿಯನ್ನು ಮೂರನೇ ಬಾರಿ ತಿರಸ್ಕರಿಸಿದ...

ಪಿಎಸ್ ಐ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಮನವಿಯನ್ನು ಮೂರನೇ ಬಾರಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

0

ಪೊಲೀಸ್ ಸಬ್ ಇನ್ ಸ್ಪೆಕ್ಟರ್ (ಪಿಎಸ್ ಐ) ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರ ಜಾಮೀನು ಅರ್ಜಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಂಗಳವಾರ ವಜಾ ಮಾಡಿದ್ದು, ಸತತ ನಾಲ್ಕನೇ ಬಾರಿಗೆ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇದರೊಂದಿಗೆ ಒಟ್ಟು ಐದು ಬಾರಿ ಪೌಲ್ ಅವರ ಜಾಮೀನು ಅರ್ಜಿ ವಜಾಗೊಂಡಂತಾಗಿದೆ.

ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್ ಅವರು ಪುರಸ್ಕರಿಸಲಿಲ್ಲ. ವಿಸ್ತೃತವಾದ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.

ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದ ಪೌಲ್ ಅವರ ಡಿಫಾಲ್ಟ್ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯವು ಜನವರಿ 4ರಂದು ತಿರಸ್ಕರಿಸಿತ್ತು. ಇದಕ್ಕೂ ಮುನ್ನ, 2022ರ ನವೆಂಬರ್ 23ರಲ್ಲೂ ವಿಶೇಷ ನ್ಯಾಯಾಲಯವು ಪೌಲ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದಕ್ಕೂ ಮೊದಲು ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಮುನ್ನ ಬೆಂಗಳೂರಿನ 51ನೇ ಹೆಚ್ಚುವರಿ ನಗರ ಮತ್ತು ಸತ್ರ ನ್ಯಾಯಾಧೀಶರಾದ ಯಶವಂತ ಅವರು ಜಾಮೀನು ನೀಡಲು ನಿರಾಕರಿಸಿದ್ದರು. ಅದಕ್ಕೂ ಮುನ್ನ, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೌಲ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈವರೆಗೆ ಒಟ್ಟು ಐದು ಬಾರಿ ಪೌಲ್ ಅವರ ಜಾಮೀನು ಅರ್ಜಿ ತಿರಸ್ಕೃತವಾಗಿದೆ.

ಅಮೃತ್ ಪೌಲ್ ಅವರಿಗೆ 5 ಕೋಟಿ ರೂಪಾಯಿ ನೀಡಿದ್ದು, ಹೀಗಾಗಿ ಅವರು ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಓಎಂಆರ್ ಕಿಟ್ ಬಾಕ್ಸ್ ಗಳನ್ನು ಇರಿಸಿದ್ದ ಅಲ್ಮೇರಾಗಳ ಕೀಗಳನ್ನು ನೀಡಿದ್ದು, ಇದನ್ನು ಬಳಸಿ ಓಎಂಆರ್ ತಿರುಚಿರುವುದಾಗಿ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಂಧಿತರಾಗಿ ಅಮಾನತುಗೊಂಡಿರುವ 31ನೇ ಆರೋಪಿ ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ 2022ರ ಜುಲೈ 4ರಂದು ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿತ್ತು.