ಮನೆ ದೇವರ ನಾಮ ನಿನ್ನ ನಾಮವೆ ಎನಗೆ ಅಮೃತಾನ್ನವು

ನಿನ್ನ ನಾಮವೆ ಎನಗೆ ಅಮೃತಾನ್ನವು

0

ನಿನ್ನ ನಾಮವೆ ಎನಗೆ ಅಮೃತಾನ್ನವು |

ಇನ್ನು ಹಸಿದಿರಲೇಕೆ ಎನಗೆ ನೀನೊಲಿದಿರಲು ||ಪ||

ಓಂಕಾರವೆಂಬ ನಾಮ ಉಪ್ಪು – ಉಪ್ಪಿನಕಾಯಿ |

ಶಂಖಪಾಣಿಯ ನಾಮ ಪಾಕಾದಿ ಸೂಪ ||

ಸಂಕರ್ಷಣನ ನಾಮ ದಿವ್ಯ ಶಾಲ್ಯನ್ನವು |

ಪಂಕಜಾಕ್ಷನ ನಾಮ ಪಳಿದೆ ಬಗೆಬಗೆ ಸಾರು ||1||

ಕೇಶವನೆಂಬ ನಾಮ ಕರಿದ ಹೂರಣಗಡಬು |

ವಾಸುದೇವನ ನಾಮ ವಡೆ – ಸೇವಗೆ ||

ಸಾಸಿರದ ನಾಮಗಳು ಸವಿಸವಿಯ ಪರಮಾನ್ನ |

ದೋಷದೂರನ ನಾಮ ದೋಸೆ – ಸೂಸಲಗಡಬು ||2||

ನಾರಾಯಣನ ನಾಮ ನೊರೆಹಾಲು ಸಕ್ಕರೆ |

ಶ್ರೀರಾಮ ನಾಮ ಸರವಳಿ ಸಜ್ಜಿಗೆ ||

ಕಾರಣ್ಯನಿಧಿ ನಾಮ ಕರಿದ ಹಪ್ಪಳ – ಸಂಡಿಗೆ |

ಪಾರಾಯಣನ ನಾಮ ಪರಿಪರಿಯ ಪಕ್ವಾನ್ನ ||3||

ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |

ಮಧುಸೂದನನ ನಾಮ ಮಧುರ ಮಂಡಿಗೆಯು ||

ಚದುರಗೋವಳ ನಾಮ ಚೆಲುವ ಬೀಸೂರಿಗೆ |

ಪದುಮನಾಭನ ನಾಮ ಪರಿಪರಿಯ ಭಕ್ಷ್ಯ ||4||

ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |

ಗೋವಿಂದನ ನಾಮ ಗುಳ್ಳೋರಿಗೆ ||

ಮಾವಮರ್ದನನ ನಾಮ ಕಲಸುಮೇಲೋಗರ |

ರಾವಣಾರಿಯ ನಾಮ ಇಡ್ಡಲಿಗೆ – ಸಖಯುಂಡೆ ||5||

ಗರುಡವಾಹನನ ನಾಮ ಘೃತಪಯೋದಧಿತಕ್ರ |

ಪರಮಪುರುಷನ ನಾಮ ಪನ್ನೀರ ಪಾನ ||

ಕರಿವರದ ನಿನ್ನ ನಾಮ ಕರ್ಪುರದ ವೀಳ್ಯವು |

ಶರಧಿಶಯನನ ನಾಮ ಶಯನಪರ್ಯಂಕ ||6||

ಈ ಪರಿಯ ನಾಮಾವಳಿಯನು ಸವಿದುಂಡು |

ಆಪತ್ತು ಬಿಡಿಸೆಕಿನ್ನ ಕ್ಷುಧೆಯ ನೂಕಿ ||

ಗೋಪಾಲ ಉರಗಾದ್ರಿ ಪುರಂದರವಿಠಲನ |

ಶ್ರೀಪಾದವನೆ ನಂಬಿ ಅಪವರ್ಗ ಸೇರುವ ||7||