ಮನೆ ರಾಜ್ಯ ಏಪ್ರಿಲ್ 8, 9 ರಂದು ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಏಪ್ರಿಲ್ 8, 9 ರಂದು ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ

0

ಚಾಮರಾಜನಗರ: ಏಪ್ರಿಲ್ 8 ಹಾಗೂ 9ರಂದು ಬಂಡೀಪುರ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿದೆ.

ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಇದೇ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಲಿದ್ದಾರೆ. ಆ ಹಿನ್ನೆಲೆಯಲ್ಲಿ, ಏ. 8 ಹಾಗೂ 9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿದೆ.

ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಹುಲಿಗಳ ಗಣತಿ ವರದಿಯನ್ನು ಪ್ರಧಾನಿಯವರು ಏ. 9ರಂದು ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ, ಈ ಸಮಾರಂಭದ ಸ್ಮರಣೆಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿರುವ ವಿಶೇಷ ನಾಣ್ಯಗಳನ್ನು ಮೋದಿಯವರು ಬಿಡುಗಡೆ ಮಾಡಲಿದ್ದಾರೆ.

ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿ ಬಂಡೀಪುರವನ್ನು ತಲುಪುವ ಮಾರ್ಗದ ದುರಸ್ತಿ ಮಾಡುತ್ತಿದ್ದಾರೆ. ಮೇಲುಕಮನಹಳ್ಳಿಯಲ್ಲಿಯೂ (ಸಫಾರಿ ಪಾಯಿಂಟ್) ರಸ್ತೆಗಳನ್ನು ದುರಸ್ತಿ ಮಾಡಿಸಿ, ಸಫಾರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ನಿರತರಾಗಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ಆಗಮಿಸಿದ್ದ ಭದ್ರತಾ ತಂಡವೊಂದು, ಸಫಾರಿ ನಡೆಸುವ ಸ್ಥಳ, ಪ್ರಧಾನಿಯವರ ವಾಹನ ಆಗಮಿಸುವ ಮಾರ್ಗ, ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿರುವ ವ್ಯವಸ್ಥೆಗಳು – ಇವೆಲ್ಲವನ್ನೂ ಪರಿಶೀಲಿಸಿದೆ. ಪ್ರಧಾನಿಯವರ ಕಾರ್ಯಕ್ರಮದ ದಿನದಂದು 1,500 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲು ನಿರ್ಧರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಏ. 8ರ ರಾತ್ರಿ ಮೈಸೂರಿಗೆ ಆಗಮಿಸಲಿದ್ದು, ಅಂದು ರಾತ್ರಿ ಮೈಸೂರಿನಲ್ಲಿಯೇ ಉಳಿಯಲಿದ್ದಾರೆ. ಏ. 9ರಂದು ಬಂಡೀಪುರಕ್ಕೆ ಆಗಮಿಸಿ, ಮೂರು ದಿನಗಳ ಮೆಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆನಂತರ ಸಫಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಕ್ರಮದಲ್ಲಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದ ಕಾಡಾನೆಯನ್ನು ಸಂರಕ್ಷಿಸಿದ್ದ ಬಂಡೀಪುರದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಬಂಡೀಪುರದಲ್ಲಿ ಏ. 9ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಸಿಬ್ಬಂದಿಗೆ ಸನ್ಮಾನ ಮಾಡಲಿದ್ದಾರೆ.