ಕೊಪ್ಪಳ: ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಸೇರಿದಂತೆ ಐವರ ವಿರುದ್ಧ ಸೋಮವಾರ ಎಫ್ ಐಆರ್ ದಾಖಲಾಗಿದೆ.
ಕನಕಗಿರಿ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ವೆಂಕಟರಮಣ ದಾಸರಿ, ಆಂಬುಲೆನ್ಸ್ ವಾಹನದ ಮಾಲೀಕ ಜಿ. ನವೀನಕುಮಾರ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣಾ ಮತ್ತು ಆಂಬುಲೆನ್ಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪಕ್ಷದ ಪೋಸ್ಟರ್ ಜೊತೆಗೆ ಉಚಿತ ಸೇವೆ ಎಂದು ಆಂಬುಲೆನ್ಸ್ ಮೇಲೆ ಬರೆಯಲಾಗಿತ್ತು. ಕನಕಗಿರಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಈ ವಾಹನವನ್ನು ಪೊಲೀಸರು ಎರಡು ದಿನಗಳ ಹಿಂದೆ ಜಪ್ತಿ ಮಾಡಿದ್ದರು.
ವಾಹನದ ಮೇಲೆ ರೆಡ್ಡಿ, ಅರುಣಾ ಮತ್ತು ದಾಸರಿ ಭಾವಚಿತ್ರಗಳು ಇದ್ದವು. ಅನುಮತಿ ಪಡೆಯದೇ ಕಲ್ಯಾಣ ಪ್ರಗತಿ ಪಕ್ಷಕ್ಕೆ ಸೇರಿದ ವಾಹನ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿತ್ತು. ಆದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.