ಮನೆ ಕಾನೂನು ಪಕ್ಷಾಂತರಿ ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸದಂತೆ ತಡೆ: ತನಗೆ ಸಂಬಂಧವಿಲ್ಲ ಎಂದು ಸುಪ್ರೀಂಗೆ ತಿಳಿಸಿದ...

ಪಕ್ಷಾಂತರಿ ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸದಂತೆ ತಡೆ: ತನಗೆ ಸಂಬಂಧವಿಲ್ಲ ಎಂದು ಸುಪ್ರೀಂಗೆ ತಿಳಿಸಿದ ಇಸಿಐ

0

ಪಕ್ಷಾಂತರಗೊಂಡ ಕಾರಣಕ್ಕೆ ಅನರ್ಹರಾಗಿರುವ ಶಾಸಕರು ಸದನದ ಉಳಿದ ಅವಧಿಗೆ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕೆ ಅಥವಾ ಬೇಡವೆ ಎಂಬ ಪ್ರಶ್ನೆಗೆ ನಿರ್ಣಯ ಕೈಗೊಳ್ಳುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ [ಡಾ ಜಯಾ ಠಾಕೂರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಂವಿಧಾನದ 191(1)(ಇ) ಮತ್ತು ಸಂವಿಧಾನದ ಹತ್ತನೇ ಪರಿಚ್ಛೇದ ಅಡಿಯಲ್ಲಿ ಅನರ್ಹಗೊಂಡಿರುವ ಶಾಸಕರು  ಅದೇ ಸದನದ ಉಳಿದ ಅವಧಿಗೆ ಮತ್ತೆ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ ಮನವಿಯ ಮೇರೆಗೆ ಚುನಾವಣಾ ಆಯೋಗ ಪ್ರತಿ-ಅಫಿಡವಿಟ್ ಸಲ್ಲಿಸಿದೆ.

2021ರಲ್ಲಿ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠವು ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು.

ಸಂವಿಧಾನದ 19 (1) (ಇ) ವಿಧಿ ಮತ್ತು ಸಂವಿಧಾನದ ಹತ್ತನೇ ಪರಿಚ್ಛೇದದ ನಿಯಮಾವಳಿಗಳ ಅಡಿಯಲ್ಲಿ ಅನರ್ಹಗೊಂಡವರು  ಆಯ್ಕೆಯಾದ ಅವಧಿಗೆ ಮರು ಸ್ಪರ್ಧಿಸುವಂತಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು. ಪಕ್ಷಾಂತರ ತಡೆ ಕಾನೂನಿನ ಉದ್ದೇಶವನ್ನು ಮಣಿಸದೇ ಇರಲು ಇದನ್ನು ಜಾರಿಗೆ ತರಬೇಕು. ಹತ್ತನೇ ಪರಿಚ್ಛೇದದ ಅಡಿಯಲ್ಲಿ ಅನರ್ಹತೆಗೆ ಒಳಗಾಗುವ ಸದನದ ಸದಸ್ಯರು ಚುನಾಯಿತರಾದ ಅವಧಿಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅನುಮತಿ ಇಲ್ಲ ಎಂದು ಒತ್ತಿ ಹೇಳಿದ್ದರು.

ಆದರೂ, ಪ್ರಕರಣದಲ್ಲಿ ತೀರ್ಪು ನೀಡಬೇಕಾದ ಪ್ರಶ್ನೆಯು 191 (1) (ಇ) ವಿಧಿಯ ವ್ಯಾಖ್ಯಾನಕ್ಕೆ ಸಂಬಂಧಿಸಿದೆ, ಇದಕ್ಕೂ ಚುನಾವಣಾ  ಆಯೋಗದ ಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇಸಿಐ ತಿಳಿಸಿದೆ.

“ಪ್ರಕರಣದ ವಿಷಯ ಸಂವಿಧಾನದ 191 (1) (ಇ) ವ್ಯಾಖ್ಯಾನಕ್ಕೆ ಸಂಬಂಧಿಸಿದ್ದು ಇದು ಸಂವಿಧಾನದ  324ನೇ ವಿಧಿಯಡಿ ತಾನು ಚುನಾವಣೆಗಳನ್ನು ನಡೆಸಲು ಸಂಬಂಧ ಹೊಂದಿರದ ವಿಷಯಗಳನ್ನು ಕುರಿತಾಗಿದೆ” ಎಂದು ಇಸಿಐ ತನ್ನ ಪ್ರತಿ ಅಫಿಡವಿಟ್ನಲ್ಲಿ ವಿವರಿಸಿದೆ. ಆದ್ದರಿಂದ, ಪ್ರಸ್ತುತ ಅರ್ಜಿಯಲ್ಲಿ ಮಾಡಲಾದ ಮನವಿಗಳ ಕುರಿತು ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಕ್ತ ಎಂದು ಚುನಾವಣಾ ಸಂಸ್ಥೆ ಹೇಳಿದೆ.

ಹಿಂದಿನ ಲೇಖನ5 ರೂಪಾಯಿ ಕೇಳಿದ್ದಕ್ಕೆ ಬಾಲಕನನ್ನು ಕೊಂದಿದ್ದ ವ್ಯಕ್ತಿಯ ಬಂಧನ
ಮುಂದಿನ ಲೇಖನನೀತಿ ಸಂಹಿತೆ ಉಲ್ಲಂಘನೆ: ಜನಾರ್ದನ್ ರೆಡ್ಡಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲು