ಮನೆ ಕಾನೂನು ಗಲ್ಲುಶಿಕ್ಷೆಗೊಳಗಾದವರಿಂದ ವಿಳಂಬದ ಲಾಭ; ಕ್ಷಮಾದಾನ ಅರ್ಜಿಗಳ ಬೇಗ ನಿರ್ಧರಿಸಿ ಎಂದ ಸುಪ್ರೀಂ

ಗಲ್ಲುಶಿಕ್ಷೆಗೊಳಗಾದವರಿಂದ ವಿಳಂಬದ ಲಾಭ; ಕ್ಷಮಾದಾನ ಅರ್ಜಿಗಳ ಬೇಗ ನಿರ್ಧರಿಸಿ ಎಂದ ಸುಪ್ರೀಂ

0

ಮರಣದಂಡನೆ ಪ್ರಶ್ನಿಸಿ ಸಲ್ಲಿಸಲಾದ ಕ್ಷಮಾದಾನ ಅರ್ಜಿಗಳನ್ನು ತ್ವರಿತವಾಗಿ ಮತ್ತು ಯಾವುದೇ ವಿಳಂಬ ಇಲ್ಲದೆ ನಿರ್ಧರಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

Join Our Whatsapp Group

ಮರಣದಂಡನೆಗೊಳಗಾದವರು ಪ್ರಕರಣದ ವಿಚಾರಣೆ ವಿಳಂಬವಾಗುವುದರ ಲಾಭ ಪಡೆಯದಂತೆ ಮಾಡುವುದು ಅವಶ್ಯಕವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

“ಈ ನ್ಯಾಯಾಲಯದ ಅಂತಿಮ ತೀರ್ಪಿನ ಬಳಿಕವೂ,  ಕ್ಷಮಾದಾನ ಅರ್ಜಿಯನ್ನು ನಿರ್ಧರಿಸಲು ಹೆಚ್ಚಿನ ವಿಳಂಬವಾದರೆ, ಮರಣದಂಡನೆಯ ಉದ್ದೇಶ ಮತ್ತು ಗುರಿ ಈಡೇರದು. ಆದ್ದರಿಂದ, ರಾಜ್ಯ ಸರ್ಕಾರ ಮತ್ತು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಿ ಕ್ಷಮಾದಾನ ಅರ್ಜಿಗಳನ್ನು ಶೀಘ್ರದಲ್ಲಿಯೇ ತೀರ್ಮಾನಿಸಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಬೇಕು, ಇದರಿಂದ ಆರೋಪಿಯೂ ಸಹ ತನ್ನ ಭವಿಷ್ಯವನ್ನು ಖಚಿತವಾಗಿ ತಿಳಿದುಕೊಳ್ಳಬಹುದಾಗಿದೆ ಮತ್ತು ಸಂತ್ರಸ್ತರಿಗೆ  ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ” ಎಂದು ನ್ಯಾಯಾಲಯ ವಿವರಿಸಿದೆ. ಹೀಗಾಗಿ ತನ್ನ ಆದೇಶವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸುವಂತೆ ರಿಜಿಸ್ಟ್ರಿಗೆ ಅದು ಸೂಚಿಸಿತು.

1990ರಿಂದ 1996ರವರೆಗೆ ಆರು ವರ್ಷಗಳ ಕಾಲ ಒಂದರಿಂದ ಹದಿಮೂರು ವರ್ಷದ ಮಕ್ಕಳನ್ನು ಅಪಹರಿಸಿ ದರೋಡೆಗೆ ಅವರನ್ನು ಬಳಸಿ ಭೀಕರವಾಗಿ ಹತ್ಯೆ ಮಾಡುತ್ತಿದ್ದ ಕುಖ್ಯಾತ ಪ್ರಕರಣದಲ್ಲಿ ಮಲ ಸಹೋದರಿಯರಾದ ರೇಣುಕಾ ಶಿಂಧೆ ಮತ್ತು ಸೀಮಾ ಗವಿತ್ ಅವರಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಜನವರಿ 2022ರಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.