ಸಲಿಂಗ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಗಳು ವಿಚಾರಣಾರ್ಹವೇ ಎಂಬ ಬಗ್ಗೆ ಮೊದಲು ನಿರ್ಧರಿಸುವಂತೆ ನ್ಯಾಯಾಲಯವನ್ನು ಕೋರಿದೆ.
ಶಾಸಕಾಂಗ ಜನರಿಗೆ ಉತ್ತರದಾಯಿಯಾಗಿದ್ದು ಅದರಲ್ಲಿಯೂ ವೈಯಕ್ತಿಕ ಕಾನೂನುಗಳಲ್ಲಿ ಜನಮನ್ನಣೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರದ ಅರ್ಜಿ ವಾದಿಸಿದೆ.
ಅರ್ಜಿಯ ಪ್ರಮುಖಾಂಶಗಳು
• ಸಾಮಾಜಿಕ ಒಮ್ಮತ ಎಂಬುದು ಮದುವೆಯ ನಿರ್ದಿಷ್ಟ ವ್ಯಾಖ್ಯಾನವನ್ನು ಬೆಂಬಲಿಸಿದರೆ, ಶಾಸಕಾಂಗವು ಆ ರೂಪಕ್ಕೆ, ನಿರ್ದಿಷ್ಟ ವ್ಯಾಖ್ಯಾನಕ್ಕೆ ಅನುಮತಿ ನೀಡುವಾಗ ಕೇವಲ ಜನರ ಇಚ್ಛೆಗೆ ಬದ್ಧವಾಗಿರುವ ಕರ್ತವ್ಯ ನಿರ್ವಹಿಸುತ್ತಿರುತ್ತದೆ. ಈ ನಿಸ್ಸಂದಿಗ್ಧವಾದ ಪ್ರಜಾಸತ್ತಾತ್ಮಕ ಇಚ್ಛೆಯನ್ನು ನ್ಯಾಯಾಂಗ ಆದೇಶದಿಂದ ನಿರಾಕರಿಸಬಾರದು.
• ಅರ್ಜಿಗಳು ಸಾಮಾಜಿಕ ಮನ್ನಣೆ ದೊರೆಯಲಿ ಎಂಬ ಉದ್ದೇಶಕ್ಕಾಗಿ ಕೇವಲ ʼನಗರ ಗಣ್ಯರʼ ಅಭಿಪ್ರಾಯಗಳನ್ನುಪ್ರತಿನಿಧಿಸುತ್ತವೆ. ವಿಶಾಲವಾದ ದೃಷ್ಟಿಕೋನಗಳನ್ನು ಶಾಸಕಾಂಗ ಪರಿಗಣಿಸಬೇಕಾಗುತ್ತದೆ .
• ಶಾಸಕಾಂಗ ಗ್ರಾಮೀಣ, ಅರೆ-ಗ್ರಾಮೀಣ ಹಾಗೂ ನಗರದ ಎಲ್ಲಾ ಜನಸಮುದಾಯಗಳ ವಿಶಾಲ ದೃಷ್ಟಿಕೋನ ಮತ್ತು ಅಹವಾಲುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ, ಧಾರ್ಮಿಕ ಪಂಗಡಗಳ ದೃಷ್ಟಿಕೋನ ಗಮನದಲ್ಲಿಟ್ಟುಕೊಂಡು ವೈಯಕ್ತಿಕ ಕಾನೂನುಗಳು ಮತ್ತು ಮದುವೆಯ ಕ್ಷೇತ್ರವನ್ನು ನಿಯಂತ್ರಿಸುವ ಸಂಪ್ರದಾಯಗಳು ಹಾಗೂ ಇತರ ಕಾನೂನುಗಳ ಮೇಲೆ ಅದರ ಅನಿವಾರ್ಯ ಬಹುಹಂತದ ಪರಿಣಾಮಗಳನ್ನು ಯೋಚಿಸಿ ಪರಿಗಣಿಸಬೇಕಾಗುತ್ತದೆ.
• ಕಾನೂನನ್ನು ರಚಿಸುವಾಗ, ಸಂಸತ್ತು ಜನರ ಹಿತದೃಷ್ಟಿ ಏನು ಎಂಬುದನ್ನು ಅರಿಯುತ್ತದೆ. ಅದರಲ್ಲಿಯೂ ವೈಯಕ್ತಿಕ ಕಾನೂನಿನ ವಿಷಯದಲ್ಲಿ ಎರಡು ಪಟ್ಟು ಯೋಚಿಸುತ್ತದೆ. ಅಂತೆಯೇ, ಒಂದು ಕ್ರಮ ಎಷ್ಟು ಸದುದ್ದೇಶದಿಂದ ಕೂಡಿದ್ದರೂ, ಈ ಮೂಲಭೂತ ತತ್ತ್ವದ ಉಲ್ಲಂಘನೆಯಾದರೆ ಅದನ್ನು ಜಾರಿಗೆ ತರಬಾರದು. ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಏಪ್ರಿಲ್ 18ರಂದು ವಿಚಾರಣೆ ನಡೆಸಲಿದೆ.














