ಮನೆ ಅಪರಾಧ ಆಸ್ತಿ ವಿವಾದ: ಯುವಕನನ್ನು ಕೊಂದ ನಾಲ್ವರ ಬಂಧನ, ಐವರು ತಲೆಮರೆವು

ಆಸ್ತಿ ವಿವಾದ: ಯುವಕನನ್ನು ಕೊಂದ ನಾಲ್ವರ ಬಂಧನ, ಐವರು ತಲೆಮರೆವು

0

ಹನೂರು: ತಾಲ್ಲೂಕಿನ ಜಿ.ಕೆ.ಹೊಸೂರು ಗ್ರಾಮದಲ್ಲಿ ಸೋಮವಾರ ಸಂಜೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಸಂಬಂಧಿಕರೇ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಹನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಗ್ರಾಮದ ಗುರುಸ್ವಾಮಿ ಎಂಬುವವರ ಮಗನಾದ ಮನೋಜ್ (23) ಕೊಲೆಯಾದ ಯುವಕ. ಗಿರೀಶ್, ರವಿ, ಶಶಿಕಲಾ ಹಾಗೂ ಗೌಡರ ಮಹದೇವಪ್ಪ ಎಂಬುವವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಶ್ರೀಕಂಠ, ಮಹೇಶ್, ಸಿದ್ದಪ್ಪ, ಭ್ರಮರಾಂಭ ಹಾಗೂ ಲಿಂಗರಾಜು ಅವರು ತಲೆ ಮರೆಸಿಕೊಂಡಿದ್ದಾರೆ ಎಂದಿದ್ದಾರೆ.

ಇನ್ನುಳಿದವರ ಬಲೆಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳ ಪಾತ್ರವಿದ್ದಲ್ಲಿ ಈ ಸಂಬಂಧ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿಲಾಗಿದೆ’ ಎಂದರು.

ಘಟನೆ ಹಿನ್ನೆಲೆ: ಜಿ.ಕೆ.ಹೊಸೂರು ಗ್ರಾಮದ ಹೊರವಲಯದ ಸರ್ವೆ ನಂಬರ್ 383 ಸಿ ನಲ್ಲಿನ ಜಮೀನಿನ ಒತ್ತುವರಿ ವಿಚಾರದ ಸಂಬಂಧ ಮನೋಜ್ ಕುಟುಂಬಕ್ಕೂ ಅವರ ಸಂಬಂಧಿಕರಾದ ಶ್ರೀಕಂಠ, ಲಿಂಗರಾಜು, ರವಿ ಹಾಗೂ ಸಿದ್ದಪ್ಪ ಅವರ ವಿರುದ್ಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ.ಹಾಗಿದ್ದರೂ, ರವಿ ಹಾಗೂ ಸಿದ್ದಪ್ಪ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು‌ ಎಂದು ಆರೋಪಿಸಲಾಗಿದೆ.

ಈ ವೇಳೆ ರವಿ ಅವರು ಸರ್ವೆ ನಡೆಸಿದಾಗ ಹೆಚ್ಚುವರಿ ಜಮೀನನ್ನು ಬಿಡಿಸಿಕೊಡಲಾಗಿತ್ತು. ಆದರೆ, ಮನೋಜ್ ಅವರಿಗೆ ಕೃಷಿ ಮಾಡಲು ಸಾಧ್ಯವಾಗದೇ ಜಮೀನನ್ನು ಪಾಳು ಬಿಟ್ಟಿದ್ದರು. ರವಿ ಅವರು ಸೋಮವಾರ ಜಮೀನನ್ನು ಉಳುಮೆ ಮಾಡುತ್ತಿದ್ದರು. ಇದನ್ನು ತಿಳಿದ ಮನೋಜ್‌ ಉಳುಮೆಯನ್ನು ನಿಲ್ಲಿಸಿದ್ದಾರೆ.

ನಂತರ ರವಿ, ಲಿಂಗರಾಜು ಹಾಗೂ ಇನ್ನಿತರರು ಹನೂರು ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ವೇಳೆ ಪೊಲೀಸರು ಉಳುಮೆ ನಿಲ್ಲಿಸುವಂತೆ ಸೂಚಿಸಿದ್ದರು. ಹಾಗಿದ್ದರೂ, ಸಂಜೆ ವೇಳೆಯಲ್ಲಿ ರವಿ ಮತ್ತೆ ಉಳುಮೆ ಆರಂಭಿಸಿದ್ದರು. ಇದನ್ನು ತಿಳಿದ ಮನೋಜ್ ಜಮೀನಿಗೆ ಹೋಗಿ ಪ್ರಶ್ನಿಸಿದರು.

‘ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿತು. ಸ್ಥಳದಲ್ಲಿದ್ದ ಶ್ರೀಕಂಠಮೂರ್ತಿ, ಮಹೇಶ್, ಗಿರೀಶ್ ಹಾಗೂ ರವಿ ಎಂಬವರು ಮಚ್ಚು, ದೊಣ್ಣೆ ಹಾಗೂ ಕಬ್ಬಿಣದ ಸಲಾಕೆಯಿಂದ ಮನೋಜ್‌ಗೆ ಹೊಡೆದಿದ್ದಾರೆ. ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದನೆ.

ಮನೋಜ್‌ ತಾಯಿ ಚಿಕ್ಕಮಣಿ ಅವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಸಮೀಪದ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಒಂಬತ್ತು ಮಂದಿ ವಿರುದ್ಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.