ಮನೆ ರಾಜ್ಯ ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಒತ್ತಡ: ವಿ.ಸೋಮಣ್ಣ ವಿರುದ್ಧ ಕಾಂಗ್ರೆಸ್ ದೂರು

ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಒತ್ತಡ: ವಿ.ಸೋಮಣ್ಣ ವಿರುದ್ಧ ಕಾಂಗ್ರೆಸ್ ದೂರು

0

ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ವಾಪಸ್ ಪಡೆಯಲು ಒತ್ತಡ ಹೇರಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಆಗ್ರಹಿಸಿ ಸಚಿವ ಸೋಮಣ್ಣ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ಸಲ್ಲಿಸಿದೆ.

Join Our Whatsapp Group

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ. ದೂರಿನಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲುರು ಮಲ್ಲು) ಜೊತೆಗೆ ನಡೆಸಿದ ಸಂಭಾಷಣೆಯ ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ.

ಮಲ್ಲಿಕಾರ್ಜುನ ಸ್ವಾಮಿಗೆ 50 ಲಕ್ಷ ಹಣ ಹಾಗೂ ಗೂಟದ ಕಾರನ್ನು ನೀಡುವ ಆಶ್ವಾಸನೆನ್ನು ಫೋನ್ ಮೂಲಕ ನೀಡಲಾಗಿದೆ. ಇದನ್ನು ಸ್ವತಃ ಮಲ್ಲಿಕಾರ್ಜುನ ಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ಇದು ಐಪಿಸಿ ಸೆಕ್ಷನ್ ( 171ಸಿ, 171 F) ಪ್ರಕಾರ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಸಚಿವ ಸೋಮಣ್ಣ ವಿರುದ್ಧ ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಏನಿದು ವಿವಾದ?

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಸಚಿವ ವಿ ಸೋಮಣ್ಣ ಅವರು ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಎಂಬುವವರಿಗೆ ಫೋನ್ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ನಿನಗೆ ಗೂಟದ ಕಾರನ್ನು ಕೊಡಿಸುತ್ತೇನೆ. ನಿನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡುತ್ತೇನೆ ಎಂದೆಲ್ಲಾ ಆಶ್ವಾಸನೆ ನೀಡಿದ್ದರು.

ಈ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗೂ ಇದನ್ನು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕ್ರಮ ಆಗ್ರಹಿಸಿ ದೂರು ದಾಖಲು ಮಾಡಿದ್ದಾರೆ ಕಾಂಗ್ರೆಸ್ ನಾಯಕರು.