ಮೈಸೂರು: ಆಸೆ, ಆಮಿಷಗಳಿಗೆ ಮಾರುಹೋಗದೇ ಉತ್ತಮ ಸರ್ಕಾರ ರೂಪಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಎಂ.ಕೃಷ್ಣರಾಜು ಅವರು ತಿಳಿಸಿದರು.
ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮ ಪಂಚಾಯಿತಿಯ ಕತ್ವಾಡಿಪುರ ಗ್ರಾಮದಲ್ಲಿ ಗುರುವಾರ ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರ ಮತವು ಅಮೂಲ್ಯವಾದದ್ದು, ದೇಶಕಟ್ಟಲು ಪ್ರತಿಯೊಂದು ಮತವು ಮುಖ್ಯಪಾತ್ರ ವಹಿಸುತ್ತದೆ. ಆದ್ದರಿಂದ ಯೋಚಿಸಿ ನೈತಿಕವಾಗಿ ತಮ್ಮ ಹಕ್ಕು ಚಲಾಯಿಸುವಂತೆ ನರೇಗಾ ಕೂಲಿ ಕಾರ್ಮಿಕರಿಗೆ ಅರಿವು ಮೂಡಿಸಿದರು.
ಬಳಿಕ, ರಂಗೋಲಿ ಬಿಡಿಸಿ ಮತದಾನ ಜಾಗೃತಿ ಮೂಡಿಸಿದ ಸಂಜೀವಿನಿ ಸಂಘದ ಮಹಿಯರಿಗೆ ಬಹುಮಾನ ವಿತರಿಸಿದರು. ಬಳಿಕ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಇದೇ ವೇಳೆ ನಂಜನಗೂಡು ತಾಲ್ಲೂಕಿನ ಸ್ವೀಪ್ ಸಮಿತಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ತಾಲ್ಲೂಕಿಗಿಂತ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಜರುಗತ್ತಿದೆ. ಇನ್ನಷ್ಟು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಜಾಗೃತಿ ಮೂಡಿಸಿ ಶೇಕಡವಾರು ಮತದಾನವನ್ನು ಹೆಚ್ಚಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸವಿತಾ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ತಾಲ್ಲೂಕು ಯೋಜನಾಧಿಕಾರಿ ಗುರುಮಹದೇವು, ದೇಬೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್ ಸೇರಿದಂತೆ ಹಲವರು ಹಾಜರಿದ್ದರು.