ಮನೆ ದೇವರ ನಾಮ ಬಾ ಬಾ ಭಕುತರ ಹೃದಯ

ಬಾ ಬಾ ಭಕುತರ ಹೃದಯ

0

ಬಾ ಬಾ ಭಕುತರ ಹೃದಯ ಮಂದಿರ

ಬಾ ಬಾ ಜಗದೋದ್ಧಾರ ||pa||

ಬಾ ಬಾ ವೇಂಕಟಾಚಲ ವಿಹಾರ

ಬಾ ಬಾನೇಕಾವತಾರ ಧೀರ-ಶೂರ ||a.pa||

ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ

ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ

ಅಕ್ಷಯವಂತ ಸೂಕ್ಷ್ಮಾಂಬರ ಧರಾಧ್ಯಕ್ಷ ಪ್ರತ್ಯಕ್ಷದ ದೈವ

ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ ||1||

ಜಾಂಬೂನಾದಾಂಬರ ಸಾಂಬಜನಕ ನೀಲಾಂಬುದ ವರ್ಣಸುಪೂರ್ಣ

ಸಾಂಬವಿನುತ ಸುಗುಣಾಂಬುಧಿ ನಾನಾ ವಿಡಂಬನ ತೋರಿದ ಮಹಿಮ

ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿಶ್ವಂಭರಂಬರಗ್ಗಣಿಯ ಪಡೆದ ವೃತ್ತುಂಬರೇಶಾಂಬುಧಿ ಶಾಯಿ ||2||

ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ –

ನಿಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ

ಸೂಳೈಸುತಲಿರೆ ಭಾಗವತರು ಸಂಮೇಳದಿ ಕುಣಿದೊಲಿದಾಡೆ

ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜಢಾಲುಗಳು ಒಪ್ಪಿರಲು||3||

ಹಂಸವಾಹನ ಕ್ರತುಧ್ವಂಸಿ ಸುಮನಸೋತ್ತಂಸ ಕೃಶಾನು ಪಾಪಿಗಳ

ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ

ಅಂಶಮಾಲಿ ಸೋಮಕಂಶಿಕಮುನಿ ಪರಮಹಂಸರು ಅಲ್ಲಲ್ಲಿ ನಿಂದು

ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ ||4||

ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು

ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು

ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದವಾರಿಧಿಯಲಿ ಮಗ್ನರಾಗಿ

ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು ||5||

ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು

ಬಂದು ಕೆಣಕೆ ನಗುತ ಮಹಾಲೀಲೆಯಿಂದಲಿ ನೀನಾ ಖಳನ

ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ

ಇಂದು ನಿನಗೆ ಈ ರಥವ ನಡೆಸುವುದು ಅಂದವಾಗಿಹುದೇನೊ ದೇವ||6||

ಬಂಗಾರ ರಥದೊಳು ಶೃಂಗಾರವಾದ ಶ್ರೀಮಂಗಳಾಂಗ ಕಳಿಂಗ

ಭಂಗ ನರಸಿಂಗಂ ಅಂಗಜ ಜನಕ ಸಾರಂಗ ರಥಾಂಗ ಪಾಣಿ

ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲವಂಗ ನಾಯಕ ಪರಿಪಾಲ

ಸಂಗೀತ ಲೋಲ ಗೋಪಾಂಗನೆಯರ ಅಂತರಂಗ ಸಂತಾಪ ವಿದೂರ ||7||

ತಡಮಾಡಲಾಗದೊ ಪೊಡವೀಶ ನೀನಿಂದು ತಡೆಯದಲೆ ಪೊರಟರೆ

ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ

ನಡೆವುದು ನುಡಿವುದು ಅಡಿಗಡಿಗೆ ನೀನುಬಿಡದೆ ಒಳಗೆ ಹೊರಗಿದ್ದು

ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ||8||

ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ

ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎನ್ಹತ್ತಿಲಿ ಆಡುವ ಮರಿಯೆ

ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ

ಅತ್ತಿತ್ತ ಪೋಗದೆ ಇತ್ತ ಬಾರೈಯ ಎನ್ಹತ್ತಿಲಿ ವೆಂಕಟದೊರೆಯ ||9||