ಧಾರವಾಡ: 2012ರಲ್ಲಿ ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಪಕ್ಷ ಸ್ಥಾಪಿಸಲು ಹೇಳಿ, ತಾವು ಕಾಂಗ್ರೆಸ್ ಸೇರಲು ಕದ ತಟ್ಟಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರೆತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದ ಹೆಬ್ಬಳ್ಳಿ ಅಗಸಿ ಬಳಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಶುಕ್ರವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, . ಕಾಂಗ್ರೆಸ್ ಕೆಸರು ಎಂದು ಹೇಳುತ್ತಿರುವ ಅವರು, ಆಗ ಏನಂದುಕೊಂಡಿದ್ದರು ಎಂಬುದನ್ನು ಅವಲೋಕಿಸಲಿ ಎಂದು ತಿರುಗೇಟು ನೀಡಿದರು.
ಬೊಮ್ಮಾಯಿ ಅವರಿಗೆ ಬೇಕಾದ ಕ್ಷೇತ್ರವನ್ನು ಕಾಂಗ್ರೆಸ್ ನೀಡದ ಕಾರಣ, ಬಿಜೆಪಿಯಲ್ಲೇ ಉಳಿದರು. ನನಗೆ ನೈತಿಕತೆಯ ಪಾಠ ಹೇಳುವ ಅಧಿಕಾರ ಬೊಮ್ಮಾಯಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಂಶಾಡಳಿತ, 65 ವರ್ಷದ ಮಿತಿ ಹಾಗೂ ಚಾರಿತ್ರ್ಯವಂತರ ಸ್ಪರ್ಧೆ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಆದರೆ 80 ಕ್ರಿಮಿನಲ್ ಪ್ರಕರಣವಿರುವ ರೌಡಿ ಶೀಟರ್’ಗೆ ಕಲಬುರ್ಗಿಯಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಹಲವೆಡೆ ವಂಶಾಡಳಿತಕ್ಕೆ ಮಣೆ ಹಾಕಿದೆ. 70 ಮೀರಿದವರಿಗೂ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲೀಗ ಯಾವ ಸಿದ್ಧಾಂತವೂ ಉಳಿದಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕಾಂಗ್ರೆಸ್ ಈ ಬಾರಿ 140ರಿಂದ 150 ಸ್ಥಾನಗಳಲ್ಲಿ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.













