ಮನೆ ರಾಜಕೀಯ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ: ಸಿದ್ದರಾಮಯ್ಯ

0

ಮೈಸೂರು: ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಜನ ಇಂದು ಬೇಸತ್ತಿದ್ದಾರೆ. ಹಾಗೂ ಎಲ್ಲ ರಂಗದಲ್ಲೂ ಸಂಪೂರ್ಣ ವಿಫಲವಾಗಿರುವ ಸರ್ಕಾರವಿದು  ಎಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Join Our Whatsapp Group

ಮೈಸೂರಿನಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದಾಗಿ ಜನರು ಬೇಸತ್ತಿದ್ದಾರೆ. ಆದ್ದರಿಂದ ರಾಜ್ಯದಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧವಾದ ಗಾಳಿ ಬೀಸಲು ಪ್ರಾರಂಭವಾಗಿದೆ. ಜನರು ಬದಲಾವಣೆ ಬಯಸಿದ್ದಾರೆ ಎಂದರು.

ಆಪರೇಷನ್ ಕಮಲ ಎಂಬುದು ಪರಿಚಯವಾದದ್ದೇ ಕರ್ನಾಟಕ ಬಿಜೆಪಿಯಿಂದ. ಶಾಸಕರಿಗೆ ಹಣ ಕೊಟ್ಟು ಖರೀದಿಸಿ, ಅವರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಗೆಲ್ಲಿಸುವುದು ಆಪರೇಷನ್ ಕಮಲ. ಇಂಥ ದ್ವಂದ್ವ ನಿಲುವು ಇರುವಂತವರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಿದರೆ ಯಾವ ಸರ್ಕಾರ ಕೂಡ ಜನಪರವಾಗಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೂರಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಜನರಿಗೆ ‘ನ ಖಾವೂಂಗ ನ ಖಾನೇದೂಂಗ’ ಎಂದಿದ್ದರು, ಆದರೆ ಪತ್ರ ಬರೆದು ಇಷ್ಟು ಕಾಲ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರ ಈ ಭರವಸೆ ಕೇವಲ ಪ್ರಚಾರಕ್ಕಾಗಿ ನೀಡಿದ್ದ ಹೇಳಿಕೆ ಮಾತ್ರ. ರುಪ್ಸಾ (ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ) ದವರು ಪ್ರಧಾನಿಗಳಿಗೆ ಪತ್ರ ಬರೆದು ಈ ಸರ್ಕಾರ 40% ಕಮಿಷನ್ ಕೇಳುತ್ತಿದ್ದೆ ಎಂದರು. ಬೊಮ್ಮಾಯಿ ಅವರು ತಮ್ಮ ಭ್ರಷ್ಟಾಚಾರಗಳಿಗೆ ದಾಖಲೆ ಕೇಳುತ್ತಾರೆ, ಈ ಪತ್ರಗಳು ದಾಖಲಾತಿಗಳಲ್ವಾ?  ಎಂದು ಪ್ರಶ್ನಿಸಿದರು.

ಪಿಎಸ್’ಐ ನೇಮಕಾತಿಯಲ್ಲಿ ಎಡಿಜಿಪಿ ಸಹಿತವಾಗಿ ಸುಮಾರು 70 ಜನ ಜೈಲಿಗೆ ಹೋದರು, ಇದು ಸಾಕ್ಷಿ ಅಲ್ಲವಾ? ಸಂತೋಷ್ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಳನ್ನು ಮಾಡಿ, ಲಂಚ ಕೊಡದ ಕಾರಣಕ್ಕೆ ಬಿಲ್ ಹಣ ನೀಡಲಿಲ್ಲ ಎಂದು ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಇದು ಸಾಕ್ಷಿ ಅಲ್ಲವಾ? ನಾವು  ಸದನದ ಒಳಗೆ ಮತ್ತು ಹೊರಗೆ ಹಗಲು ರಾತ್ರಿ ಹೋರಾಟವನ್ನು ಮಾಡಿದ್ದೆವು, ಧರಣಿ ಮಾಡಿದ್ದೆವು. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು ಎಂದರು.

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರು ಸೋಪ್ ಮತ್ತು ಡಿಟರ್ಜೆಂಟ್ ನಿಗಮದ ಅಧ್ಯಕ್ಷರಾಗಿದ್ದವರು. ಅವರ ಮಗ ಅಪ್ಪನ ಪರವಾಗಿ ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮನೆಯನ್ನು ಶೋಧ ಮಾಡಿದಾಗ ಸುಮಾರು 8 ಕೋಟಿ ಭ್ರಷ್ಟ ಹಣ ಸಿಗುತ್ತದೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಾಬೀತಾಗಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು? ಎಂದರು.

ಇವೆಲ್ಲವೂ ಈ ಸರ್ಕಾರ 40% ಕಮಿಷನ್ ಸರ್ಕಾರ ಎಂಬುದನ್ನು ತೋರಿಸುತ್ತದೆ. ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ನೇಮಕಾತಿ, ವರ್ಗಾವಣೆ, ಯೋಜನೆಗೆ ಅನುಮೋದನೆ ನೀಡುವಾಗ, ಎನ್,ಒ,ಸಿ ನೀಡುವಾಗ ಲಂಚದಿಂದ ತುಂಬಿಹೋಗಿದೆ. ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ಯಾವಾಗಲೂ ನಡೆದಿರಲಿಲ್ಲ ಎಂದರು.

ಇದರ ಜೊತೆಗೆ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನೂ ಮಾಡಿಲ್ಲ. ಕೋಮುವಾದವನ್ನು ಬೆಳೆಸಿದೆ. ಹಿಜಾಬ್, ಹಲಾಲ್, ಆಜಾನ್, ಜಾತ್ರೆಗಳಲ್ಲಿ ಯಾವ ಧರ್ಮದವರು ವ್ಯಾಪಾರ ಮಾಡುತ್ತಾರೆ ಎನ್ನುವುದು ಸಮಸ್ಯೆಗಳೇ ಅಲ್ಲ, ಇವುಗಳನ್ನು ಅನಗತ್ಯವಾಗಿ ಸಮಸ್ಯೆಯ ರೀತಿ ಬಿಂಬಿಸಿದ್ರು. ಇದರಿಂದ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇವೆಲ್ಲ ಜನರಿಗೆ ಬೇಕಿದೆಯಾ? ಎಂದರು.

ಬಿಜೆಪಿಯವರು 2018ರಲ್ಲಿ 600 ಭರವಸೆಗಳನ್ನು ನೀಡಿದ್ದರು, ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆಂದು ಹೇಳಲಿ ನೋಡೋಣ. ಮೋದಿ ಅವರು ಕಾಂಗ್ರೆಸ್ ನ ವಾರೆಂಟಿಯೇ ಮುಗಿದಿದೆ, ಇನ್ನು ಗ್ಯಾರೆಂಟಿಗಳನ್ನು ಈಡೇರಿಸುತ್ತಾರ ಎಂದು ಲಘುವಾಗಿ ಮಾತನಾಡುತ್ತಾರಲ್ವಾ ಅವರೇ ಈ ಪ್ರಶ್ನೆಗೆ ಉತ್ತರ ನೀಡಲಿ ಎಂದರು.

ಈ ಬಾರಿ ಜನ ಅತಂತ್ರ ವಿಧಾನಸಭೆ ನಿರ್ಮಾಣ ಮಾಡಬಾರದು, ಇದರಿಂದ ಸುಭದ್ರ ಸರ್ಕಾರ ನೀಡಲು ಆಗಲ್ಲ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಹೀಗಾಗಿ ಕಾಂಗ್ರೆಸ್ ಗೆ ಬಹುಮತ ನೀಡುವ ತೀರ್ಮಾನ ಮಾಡಿದ್ದಾರೆ ಎಂದರು.

ಮೋದಿ ಹೇಳಿಕೆಗೆ ತಿರುಗೇಟು:

ನಾವು ನೀಡಿರುವ ಐದು ಪ್ರಮುಖ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ, ದುಡ್ಡಿಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದೆಲ್ಲಾ ಮೋದಿ ಲಘುವಾಗಿ ಹೇಳಿದ್ದಾರೆ. ಆದರೆ, ಅವರ ಸರ್ಕಾರ ಎಷ್ಟು ಭರವಸೆಗಳನ್ನು ಈಡೇರಿಸಿದೆ, ಪ್ರಣಾಳಿಕೆಯಲ್ಲಿದ್ದ ಎಷ್ಟನ್ನು ಅನುಷ್ಠಾನಕ್ಕೆ ತಂದಿದೆ? ಬಹಿರಂಗ ಚರ್ಚೆಗೆ ಬರಲಿ’ ಎಂದು ಮುಖ್ಯಮಂತ್ರಿಗೆ ಸವಾಲೆಸೆದರು.

ಪ್ರಧಾನಿಯು ಬೇರೆ ರಾಜ್ಯದ ಬಗ್ಗೆ ಹೇಳುವಾಗ, ದೇಶದಲ್ಲಿ ಏನಾಗಿದೆ ಎನ್ನುವುದನ್ನು ನೋಡಿಕೊಳ್ಳಬೇಕು. ಮನಮೋಹನ್ ಸಿಂಗ್ ಅಧಿಕಾರದಿಂದ ಕೆಳಗಿಳಿದಾಗ ದೇಶದ ಸಾಲ ₹ 53.11 ಲಕ್ಷ ಕೋಟಿ ಇತ್ತು. ಈಗ ₹ 155 ಲಕ್ಷ ಕೋಟಿಗೆ ಏರಿದೆ. 9 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದಾರೆ. ದೇಶವನ್ನು ದಿವಾಳಿ ಮಾಡಿರುವವರಾರು? ರಾಜ್ಯದಲ್ಲಿ 2018ರವರೆಗೆ ₹ 2.42 ಲಕ್ಷ ಕೋಟಿ ಇತ್ತು. ಈಗ ₹5.64 ಲಕ್ಷ ಕೋಟಿ ಸಾಲವಿದೆ. ರಾಜ್ಯವನ್ನು ದಿವಾಳಿ ಮಾಡಿದವರಾರು? ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ’ ಎಂದು ತಿರುಗೇಟು ನೀಡಿದರು.

ದುರಾಡಳಿತದಿಂದಾಗಿ ಕರ್ನಾಟಕದ ಆರ್ಥಿಕ ಸ್ಥಿತಿ ದುಃಸ್ಥಿತಿ ತಲುಪಿರುವುದು ಮೋದಿಗೆ ಗೊತ್ತಿಲ್ಲವೆಂದು ಕಾಣಿಸುತ್ತದೆ ಎಂದರು.

ಈ ಬಾರಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬಂದೇ ಬರುತ್ತದೆ. ಸಾಲದ ಪ್ರಮಾಣ ಕಡಿಮೆ ಮಾಡಿ, ಆರ್ಥಿಕ ಶಿಸ್ತನ್ನು ನಿರ್ವಹಿಸಿದರೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸಬಹುದು ಎಂದು ಸಮರ್ಥಿಸಿಕೊಂಡರು.

ಮೊಮ್ಮಗನನ್ನು ಉತ್ತರಾಧಿಕಾರಿಯೆಂದು ಹೇಳಿಲ್ಲ

ನನ್ನ ಮೊಮ್ಮಗನಿಗೆ ಇನ್ನು 17 ವರ್ಷ. ಅವನು ಒಂದು ವೇಳೆ ರಾಜಕೀಯಕ್ಕೆ ಬರಲು ಮನಸು ಮಾಡಿದರು ಅದಕ್ಕೆ ಇನ್ನು 8 ರಿಂದ 10 ವರ್ಷ ಬೇಕು. ಮೊಮ್ಮಗನನ್ನು ನನ್ನ ಉತ್ತರಾಧಿಕಾರಿ ಎಂದು ಹೇಳಿಯೇ ಇಲ್ಲ. ರಾಜಕೀಯಕ್ಕೆ ಅವನು ಬರಬಹುದು ಇಲ್ಲ ಬರದೇ ಇರಬಹುದು. ಅದು ಅವನ ವೈಯಕ್ತಿಕ ಇಷ್ಟ ಎಂದರು.

ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಎಂ., ಉಪಾಧ್ಯಕ್ಷ (ನಗರ) ಬಸವಣ್ಣ ಎಂ.ಎಸ್. ಹಾಗೂ ಕಾರ್ಯದರ್ಶಿ (ನಗರ) ರಂಗಸ್ವಾಮಿ ಪಿ. ಇದ್ದರು.