ಮನೆ ಅಪರಾಧ ಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ ಎಂದು ಪೊಲೀಸ್​ ಅಧಿಕಾರಿಗೆ ದೂರು ನೀಡಿದ ಬಾಲಕ.

ಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ ಎಂದು ಪೊಲೀಸ್​ ಅಧಿಕಾರಿಗೆ ದೂರು ನೀಡಿದ ಬಾಲಕ.

0

ಅಪ್ಪ ದಿನಾ ಕುಡಿದು ಬಂದು ಅಮಲಿನಲ್ಲಿ  ತಾಯಿಯನ್ನು ಹೊಡೆಯುವುದನ್ನು ಮಗನಿಗೆ ನೋಡಲಾಗಲಿಲ್ಲ. ಪ್ರತಿದಿನ ತಂದೆಯ ಕಿರುಕುಳ ಸಹಿಸಲಾಗದೆ ಮಗ ಸೀದಾ ಪೊಲೀಸ್​ ಠಾಣೆಗೆ ಹೋಗಿದ್ದಾನೆ. ಅಲ್ಲಿದ್ದ ಪೊಲೀಸ್​ ಅಧಿಕಾರಿ ಎದುರು ತನ್ನ ದುಃಖ ತೋಡಿಕೊಂಡಿದ್ದಾನೆ. ಹೀಗೆ ತನ್ನ ಜೀನವದಲ್ಲಿ ಅದಾಗಲೇ ಮಡುಗಟ್ಟಿರುವ ನೋವಿನ ಬಗ್ಗೆ ಹೇಳಿಕೊಂಡಿರುವುದು ಒಂಬತ್ತು ವರ್ಷದ ಬಾಲಕ. ಇನ್ನ ಆ ಪೊಲೀಸ್​ ಅಧಿಕಾರಿ ತನ್ನ ಕಣ್ಣೆದುರು ಹೀಗೆ ಕಣ್ಣೀರು ಹಾಕುತ್ತಿರುರುವ 9 ವರ್ಷದ ಪೋರ ತನ್ನ ಮಗನದೇ ವಯಸ್ಸಿನವನು ಎಂದು ಭಾವಿಸಿ, ಅವನ ನೋವಿಗೆ ಸ್ಪಂದಿಸುತ್ತಾರೆ. ಈ ಬೇಸರದ ಸಂಗತಿ ನಡೆದಿರುವುದು ಬಾಪಟ್ಲಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ.

Join Our Whatsapp Group

ಹೌದು, ಜಿಲ್ಲೆಯ ಕರ್ಲಪಾಲೆಂ ಮಂಡಲದ ಇಸ್ಲಾಂ ಪೇಟೆ ಪೊಲೀಸ್ ಠಾಣೆಯಲ್ಲಿ ಇಂತಹ ವಿಚಿತ್ರ ದೂರು ದಾಖಲಾಗಿದೆ. ಗ್ರಾಮದ ಒಂಬತ್ತು ವರ್ಷದ ಬಾಲಕ ರಹೀಮ್ ಕರ್ಲಪಾಲೆಂ ಪಿಎಸ್‌ಐಗೆ ಹೋಗಿ ದೂರು ನೀಡಿದ್ದಾನೆ. ಎಎಸ್‌ಐ ಶಿವಯ್ಯ ಅವರು ಬಾಲಕನ ಭುಜ ಹಿಡಿದು ಠಾಣೆಗೆ ಯಾಕೆ ಬಂದಿದ್ದೀಯಾ ಎಂದು ಕೇಳಿದರು. ನನ್ನ ತಂದೆ ಕುಡಿದು ಬಂದು ನನ್ನ ತಾಯಿಯನ್ನು ಹೊಡೆಯುತ್ತಿದ್ದಾರೆ. ನನ್ನ ತಾಯಿ ಎಷ್ಟೇ ಬೇಡಿಕೊಂಡರೂ ಅಪ್ಪ ಕೇಳುವುದಿಲ್ಲ. ಅವನು ಪ್ರತಿದಿನವೂ ಹೀಗೆ ಮಾಡುತ್ತಾನೆ. ಅದಕ್ಕೇ ಪೊಲೀಸರಿಗೆ ಹೇಳೋಕೆ ಬಂದೆ ಎನ್ನುತ್ತಾ ಅಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗೆ ಆ ಬಾಲಕ ದಿಟ್ಟವಾಗಿ ಕೇಳಿದ್ದಾನೆ. ಬಾಲಕನ ಧೈರ್ಯಕ್ಕೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ರಹೀಮ್ ಅವರ ತಂದೆ ಸುಭಾನಿ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸುಭಾಂಬಿ ಮನೆಯಲ್ಲೇ ಇರುತ್ತಾರೆ. ಮದ್ಯವ್ಯಸನಿಯಾಗಿರುವ ಮನೆಯ ಯಜಮಾನ ಸುಭಾನಿ ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಸುಭಾಂಬಿಗೆ  ಕಿರುಕುಳ ನೀಡುತ್ತಾನೆ. ಇದನ್ನು ಕಂಡ ರಹೀಮ್ ತನ್ನ ತಂದೆಗೆ ಬುದ್ಧಿವಾದ ಹೇಳುವಂತೆ ಪೊಲೀಸರ ಮೊರೆ ಹೋಗಿದ್ದಾನೆ.

ಅಬೋಧ ಬಾಲಕನ ದೂರಿಗೆ ಸ್ಪಂದಿಸಿದ ಎಎಸ್ಐ ಶಿವಯ್ಯ ಅವರು ರಹೀಮ್ ಪೋಷಕರಿಬ್ಬರನ್ನೂ ಠಾಣೆಗೆ ಕರೆಸಿದ್ದರು. ಗಂಡನಿಗೆ ಛೀಮಾರಿ ಹಾಕಿದ ಪೊಲೀಸರು ಪತಿ-ಪತ್ನಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಿ ಕಳುಹಿಸಿದ್ದಾರೆ. ಮತ್ತೆ ಇಂತಹ ಘಟನೆ ನಡೆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ತರುವಾಯ ಬಾಲಕನ ಸಾಹಸ ಮತ್ತು ಅಮ್ಮನ ಮೇಲಿನ ಆತನ ಪ್ರೀತಿ ಹಾಗೂ ಅಪ್ಪನ ಕ್ರೌರ್ಯದ ಬಗ್ಗೆ ಸ್ಥಳೀಯರು ಚರ್ಚೆಯಲ್ಲಿ ತೊಡಗಿದ್ದಾರೆ.