ಮಂಡ್ಯ : ಮೀನುಗಾರಿಕೆಗೆ ದೋಣಿಯಲ್ಲಿ ತೆರಳಿದ್ದ ವೇಳೆ ಬಿರುಗಾಳಿಗೆ ದೋಣಿ ಮಗುಚಿಕೊಂಡ ಪರಿಣಾಮ ಯುವಕ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನ ಹಿನ್ನೀರಿನಲ್ಲಿ ಜರುಗಿದೆ.
ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ ಗ್ರಾಮದ ಮಧು (26) ಕೆಆರ್ಎಸ್ ಹಿನ್ನೀರಿನಲ್ಲಿ ನಾಪತ್ತೆಯಾಗಿರುವ ಯುವಕ. ಮಧು ಶುಕ್ರವಾರ ಸಂಜೆ ಮೀನು ಹಿಡಿಯಲು ಕೆಆರ್ಎಸ್ ಡ್ಯಾಂನ ಹಿನ್ನೀರು ಪ್ರದೇಶಕ್ಕೆ ದೋಣಿಯಲ್ಲಿ ತೆರಳಿದ್ದಾನೆ. ಈ ವೇಳೆ ಜೋರಾಗಿ ಬಿರುಗಾಳಿ ಬೀಸಿದೆ.
ಬಿರುಗಾಳಿಯ ರಭಸಕ್ಕೆ ದೋಣಿಯು ಮಗುಚಿದೆ. ದೋಣಿ ಮಗುಚಿದ ಪರಿಣಾಮ ಮಧು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಸದ್ಯ ಮಧುವಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.














