ಮನೆ ರಾಜಕೀಯ ಅಂದು ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ ಇಂದು ಪ್ರಧಾನಿ ಮೋದಿಗೆ ಅಸ್ತ್ರ

ಅಂದು ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ ಇಂದು ಪ್ರಧಾನಿ ಮೋದಿಗೆ ಅಸ್ತ್ರ

0

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಅಖಾಡದಲ್ಲಿ ಇದೀಗ ಕಮಿಷನ್ ವಿಚಾರವೇ ರಾಜಕೀಯ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಮೊದಲಿನಿಂದಲೂ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಹರಿಹಾಯುತ್ತಿದ್ದ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ 85% ಕಮಿಷನ್ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಪದೇ ಪದೇ 85% ಕಮಿಷನ್ ವಿಚಾರ ಪ್ರಸ್ತಾಪ ಮಾಡುತ್ತಿದ್ಧಾರೆ. ಈ ಹಿಂದೆ ಪ್ರಧಾನಿಯಾಗಿದ್ದ ಕಾಂಗ್ರೆಸ್ ನಾಯಕರು ಆಡಿದ್ದ ಮಾತುಗಳನ್ನೇ ನಾನು ಪುನರುಚ್ಛಾರ ಮಾಡುತ್ತಿದ್ದೇನೆ ಎಂದು ಹೇಳಿರುವ ಪ್ರಧಾನಿ ಮೋದಿ, ಸರ್ಕಾರದಿಂದ 1 ರೂ. ಬಿಡುಗಡೆಯಾದರೆ, ಈ ಹಣ ಫಲಾನುಭವಿಗಳ ಕೈಗೆ ಸಿಗುವ ಹೊತ್ತಿಗೆ ಬರೋಬ್ಬರಿ 85 ಪೈಸೆ ಸೋರಿಕೆಯಾಗುತ್ತಿತ್ತು. ಕಮಿಷನ್ ರೂಪದಲ್ಲಿ ಭ್ರಷ್ಟರ ಕೈ ಸೇರುತ್ತಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಆಡಳಿತಾವಧಿಯಲ್ಲಿ ಫಲಾನುಭವಿಗಳಿಗೆ ಹಣ ನೇರವಾಗಿ ಅವರ ಬ್ಯಾಂಕ್ ಖಾತೆ ಸೇರುವಂತೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ನಾಯಕರೂ ಕೂಡಾ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಪೇಸಿಎಂ ಅಭಿಯಾನವನ್ನೂ ನಡೆಸಿದ್ದ ಕಾಂಗ್ರೆಸ್ ನಾಯಕರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದರು. ಇದೀಗ ಚುನಾವಣಾ ಪ್ರಚಾರ ಅಖಾಡದಲ್ಲಿ ಪ್ರಧಾನಿ ಮೋದಿ ಅವರು 85% ಕಮಿಷನ್ ಅಸ್ತ್ರ ಪ್ರಯೋಗ ಮಾಡಿದ್ದು, ಕಾಂಗ್ರೆಸ್ ಪಕ್ಷ ಪ್ರತ್ಯಸ್ತ್ರಕ್ಕಾಗಿ ಹುಡುಕಾಡುವಂತಾಗಿದೆ.

85% ಕಮಿಷನ್ ಆರೋಪದ ಹಿನ್ನೆಲೆ ಏನು?


ಈ ಹಿಂದೆ ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರು 1985ರಲ್ಲಿ ಒಡಿಶಾ ರಾಜ್ಯದ ಕಾಳಹಂಡಿ ಜಿಲ್ಲೆಗೆ ಭೇಟಿ ನೀಡಿದ್ದರು. ಈ ಪ್ರದೇಶ ಬರಗಾಲಕ್ಕೆ ತುತ್ತಾಗಿತ್ತು. ಇಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿದ್ದ ರಾಜೀವ್ ಗಾಂಧಿ, ಸರ್ಕಾರ ನಿಮಗಾಗಿ ವೆಚ್ಚ ಮಾಡುವ ಪ್ರತಿ 1 ರೂಪಾಯಿ ಪೈಕಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗಳಿಗೆ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಅಂದು ರಾಜೀವ್ ಗಾಂಧಿ ಅವರು ನೀಡಿದ್ದ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆಧಾರ್ ಯೋಜನೆಯ ಜಾರಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ವೇಳೆಯಲ್ಲೂ ರಾಜೀವ್ ಗಾಂಧಿ ಅವರ ಹೇಳಿಕೆ ಪ್ರಸ್ತಾಪವಾಗಿತ್ತು. ಅಶೋಕ್ ಭೂಷಣ್ ಅವರು ಮಾಜಿ ಪ್ರಧಾನ ಮಂತ್ರಿಗಳ ಮಾತುಗಳನ್ನು ನೆನಪು ಮಾಡಿಕೊಂಡಿದ್ದರು. ಪ್ರತಿ ಒಂದು ರೂಪಾಯಿ ಹಣದಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗಳನ್ನು ತಲುಪುತ್ತಿದೆ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆ ದಾಖಲೆಯಲ್ಲೇ ಇದೆ.

1985ರಲ್ಲಿ ರಾಜೀವ್ ಗಾಂಧಿ ಅವರು ಆಡಿದ್ದ ಮಾತುಗಳು ಇದೀಗ ಕರ್ನಾಟಕ ಚುನಾವಣಾ ಅಖಾಡದಲ್ಲಿ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಅದರಲ್ಲೂ ಬೊಮ್ಮಾಯಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಲು 28 ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅವರು ನೀಡಿದ್ದ ಹೇಳಿಕೆಯನ್ನೇ ಪ್ರಧಾನಿ ಮೋದಿ ಅವರು ಈಗ ಬಳಸಿಕೊಳ್ತಿದ್ಧಾರೆ. ಬೊಮ್ಮಾಯಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಪದೇ ಪದೇ ಮಾಡುತ್ತಿದ್ದ 40% ಕಮಿಷನ್ ಆರೋಪಕ್ಕೆ ಹಲವು ಬಿಜೆಪಿ ನಾಯಕರು ತಿರುಗೇಟು ನೀಡುತ್ತಲೇ ಇದ್ದರು. ಆದ್ರೆ, ಈಗ ಪ್ರಧಾನಿ ಮೋದಿ ಬಳಸಿರುವ 85% ಕಮಿಷನ್ ಅಸ್ತ್ರವು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.