ಮನೆ ರಾಜಕೀಯ ನಿಮ್ಮನ್ನು ನೀವೇ ಅಪಹಾಸ್ಯ ಮಾಡಿಕೊಳ್ಳೋದನ್ನುನಿಲ್ಲಿಸಿ: ಸೋನಿಯಾ ವಿರುದ್ಧ ಅಣ್ಣಾಮಲೈ ಕಿಡಿ

ನಿಮ್ಮನ್ನು ನೀವೇ ಅಪಹಾಸ್ಯ ಮಾಡಿಕೊಳ್ಳೋದನ್ನುನಿಲ್ಲಿಸಿ: ಸೋನಿಯಾ ವಿರುದ್ಧ ಅಣ್ಣಾಮಲೈ ಕಿಡಿ

0

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡು ದಿನಗಳು ಬಾಕಿಯಿದ್ದು, ರಾಜಕೀಯ ನಾಯಕರು ಹಾಗೂ ಪಕ್ಷಗಳು ಪರಸ್ಪರ ಜಿದ್ದಾಜಿದ್ದಿಗೆ ಬಿದ್ದು ಪ್ರಚಾರದಲ್ಲಿ ತೊಡಗಿವೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಆಡಳಿತಾರೂಢ ಬಿಜೆಪಿಯ ನಾಯಕರು ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.

Join Our Whatsapp Group

ಇತ್ತ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಸೇರಿದಂತೆ ಹಲವು ನಾಯಕರು ಕರ್ನಾಟಕದಲ್ಲೇ ಠಿಕಾಣಿ ಹೂಡಿ, ಸೇರಿಗೆ ಸವ್ವಾ ಸೇರು ಎನ್ನುವಂತೆ ಮತ ಬೇಟೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಮಾವೇಶದಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ, ಬಿಜೆಪಿ ವಿರುದ್ಧ ಹರಿಹಾಯ್ದರು. “ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಗೆ ವ್ಯಕ್ತವಾದ ಅಪಾರ ಜನ ಬೆಂಬಲ, ಯಶಸ್ಸು ಬಿಜೆಪಿಯನ್ನು ವಿಚಲಿತಗೊಳಿಸಿದೆ. ದೇಶದಲ್ಲಿ ಕೋಮುವಾದ, ದ್ವೇಷ ಹರಡುವವರ ವಿರುದ್ಧ ಭಾರತ್ ಜೋಡೋ ಯಾತ್ರೆ ಮಾಡಲಾಗಿದ್ದು, ಇದರಿಂದ ಬಿಜೆಪಿಗೆ ಕಸಿವಿಸಿಯಾಗಿದೆ” ಎಂದು ವಾಗ್ದಾಳಿ ನಡೆಸಿದ್ದರು. ಮುಂದುವರೆದು ಮಾತನಾಡುತ್ತಾ, ” ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ” ಎಂದಿದ್ದರು.

ಸೋನಿಯಾ ಗಾಂಧಿ ಅವರ ‘ಸಾರ್ವಭೌಮತ್ವ’ ಹೇಳಿಕೆ ಕುರಿತಂತೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ. “ನಿಷೇಧಿತ ಪಿಎಫ್‌ಐ ಜೊತೆ ಕೈಜೋಡಿಸಿರುವ ಕಾಂಗ್ರೆಸ್, ಚುನಾವಣಾ ಲಾಭಕ್ಕಾಗಿ ಎಸ್‌ಡಿಪಿಐಯಂತಹ ಪಕ್ಷಳ ಜೊತೆಗೂ ಕೈ ಜೋಡಿಸಿದೆ. ಉಗ್ರರಿಗೆ ಹಣಕಾಸು ನೆರವು ನೀಡುವ ಸಂಬಂಧ ಕೇಂದ್ರ ಏಜೆನ್ಸಿಗಳು ದಾಳಿ ನಡೆಸಿದ ಅಭ್ಯರ್ಥಿಗಳಿಗೆ ಬೆಂಬಲ ನೀಡುವವರು ಸಾರ್ವಭೌಮತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ದಯವಿಟ್ಟು ನಿಮ್ಮನ್ನು ನೀವು ಅಪಹಾಸ್ಯ ಮಾಡಿಕೊಳ್ಳುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಸೋನಿಯಾ ಸಾರ್ವಬೌಮತ್ವದ ಹೇಳಿಗೆ ಆಕ್ರೋಶ

ಹುಬ್ಬಳ್ಳಿ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರು ನೀಡಿದ ಸಾರ್ವಭೌಮತ್ವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಯನ್ನು ಪ್ರಶ್ನಿಸಿ, ಬಿಜೆಪಿ ನಿಯೋಗವು ಚುನಾವಣಾ ಆಯೋಗದ ಮೊರೆ ಹೋಗಿದೆ. “ಸೋನಿಯಾ ಗಾಂಧಿ ಅವರು ಉದ್ದೇಶಪೂರ್ವಕವಾಗಿ ಸಾರ್ವಭೌಮತ್ವ ಎಂಬ ಪದವನ್ನು ಬಳಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯೇ ‘ತುಕ್ಡೆ-ತುಕ್ಡೆ’ ಗ್ಯಾಂಗ್‌ನ ಅಜೆಂಡಾ ಆದ್ದರಿಂದ ಅವರು ಅಂತಹ ಪದಗಳನ್ನು ಬಳಸುತ್ತಿದ್ದಾರೆ. ಈ ದೇಶವಿರೋಧಿ ಕೃತ್ಯದ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದಿದೆ ಬಿಜೆಪಿ.

ಹಿಂದಿನ ಲೇಖನ₹100 ಕೋಟಿ ಪರಿಹಾರ: ಭಜರಂಗದಳ ಅವಮಾನಿಸಿದ್ದಕ್ಕೆ ಖರ್ಗೆಗೆ ವಿಎಚ್‌ಪಿ ನೋಟಿಸ್‌
ಮುಂದಿನ ಲೇಖನಅಂದು ರಾಜೀವ್ ಗಾಂಧಿ ನೀಡಿದ್ದ ಹೇಳಿಕೆ ಇಂದು ಪ್ರಧಾನಿ ಮೋದಿಗೆ ಅಸ್ತ್ರ