ಮನೆ ಅಪರಾಧ ಶೀಟ್ ಹಾಕಿದ ಗಂಡನ ಮನೆಯಲ್ಲಿ ಪ್ರೈವೆಸಿ ಇಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡ್ಕೊಂಡ ವಧು

ಶೀಟ್ ಹಾಕಿದ ಗಂಡನ ಮನೆಯಲ್ಲಿ ಪ್ರೈವೆಸಿ ಇಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡ್ಕೊಂಡ ವಧು

0

ತ್ರಿಶ್ಯೂರ್: ಮದುವೆ ಅನ್ನೋದು ಒಂದು ಪವಿತ್ರವಾದ ಸಂಬಂಧ. ಹೀಗಾಗಿ ಗುರು-ಹಿರಿಯರು ಎಲ್ಲರೂ ನೋಡಿ ಪರಸ್ಪರ ಒಪ್ಪಿಗೆ ಸೂಚಿಸಿ ಒಳ್ಳೆಯ ಮುಹೂರ್ತ ನೋಡಿ ಮದುವೆ ಮಾಡಿಸುತ್ತಾರೆ. ಜೋಡಿ ನೂರು ಕಾಲ ಸುಖವಾಗಿರಲಿ ಎಂದು ಹಾರೈಸುತ್ತಾರೆ. ಆದ್ರೆ ಈ ಕಾಲದಲ್ಲಿ ಎಲ್ಲಾ ವಸ್ತುಗಳ ವ್ಯಾಲಿಡಿಟಿ ಕಮ್ಮಿಯಾಗಿರೋ ಹಾಗೆಯೇ ಮದುವೆಯ ವ್ಯಾಲಿಡಿಟಿಯೂ ಕಡಿಮೆಯಾಗಿದೆ. ಮದುವೆಯಾಗಿ ತಿಂಗಳಾಗೋ ಒಳಗೇ ಡೈವೋರ್ಸ್‌ಗೆ ಅಪ್ಲೈ ಮಾಡುವ ದಂಪತಿಯಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ನಂತರವೂ ಮದುವೆ ಕ್ಯಾನ್ಸಲ್ ಮಾಡಿಕೊಳ್ಳುವುದು ಅತಿ ಸಾಮಾನ್ಯವಾಗಿದೆ. ಅಷ್ಟೇ ಯಾಕೆ, ಮದುವೆ ಮಂಟಪದಲ್ಲಿ ತಾಳಿ ಕಟ್ಟಿದ ನಂತರವೂ ಮದುವೆ ಮುರಿದು ಬೀಳುತ್ತದೆ.

ಹಾಗೆಯೇ ಕೇರಳದಲ್ಲಿ ವಧು (Bride) ವರನ ಶೀಟ್ ಹಾಕಿದ ಮನೆಯನ್ನು ನೋಡಿ ಮದುವೆ (Marriage)ಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ.  ತ್ರಿಶ್ಯೂರ್‌ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದೆ. ಮದುವೆಯಾದ ನಂತರ ಮೊದಲ ಬಾರಿಗೆ ಮಹಿಳೆ (Woman) ತನ್ನ ಗಂಡನ ಮನೆಗೆ ಭೇಟಿ ನೀಡಿದ್ದಳು. ಶೀಟ್ ಹಾಕಿದ ಆ ಮನೆಯ ಸ್ಥಿತಿಯನ್ನು ನೋಡಿ ಗಾಬರಿಗೊಂಡಳು. ಪುಟ್ಟದಾಗಿರುವ ಶೀಟ್ ಹಾಕಿದ ಮನೆಯಲ್ಲಿ ಪ್ರತ್ಯೇಕ ಕೋಣೆ ಸಹ ಇರಲ್ಲಿಲ್ಲ. ಹೀಗಾಗಿ ವಧು ಆ ಮನೆಗೆ ಬರುವುದಿಲ್ಲ ಎಂದು ವಾಪಾಸ್ ಓಡಿ ಹೋದಳು. ಆದರೆ ಸಂಬಂಧಿಕರು ಆಕೆಯನ್ನು ಹಿಂಬಾಲಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅವಳನ್ನು ಹಿಂದಕ್ಕೆ ಕರೆ ತಂದರು.

ದಿನಗೂಲಿ ಕಾರ್ಮಿಕನಾಗಿರುವ ವರ ಐದು ಸೆಂಟ್ಸ್ ಭೂಮಿಯಲ್ಲಿ ಶೀಟ್‌ ಹೊದಿಸಿದ ಮನೆಯನ್ನು ಹೊಂದಿದ್ದಾನೆ. ಈ ಮನೆಯಲ್ಲಿ ನನಗೆ ಕನಿಷ್ಠ ಪ್ರಮಾಣದ ಖಾಸಗಿತನವೂ ಇರುವುದಿಲ್ಲ ಎಂದು ವಧು ದೂರಿದ್ದಾಳೆ. ನಾನು ಈ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತೇನೆ ಎಂದು ಹಠ ಮಾಡಿದ್ದಾಳೆ. ನಂತರ ಸ್ಥಳದಲ್ಲಿದ್ದವರು ವಧುವಿನ ತಂದೆ ಮತ್ತು ತಾಯಿಯ ಜೊತೆ ಮಾತನಾಡಿದರು. ತಮ್ಮ ಮಗಳನ್ನೂ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತೆ ಹೇಳಿದರು. ಆದರೆ ಪೋಷಕರು ಹೇಳಿದರೂ ವಧು ಒಪ್ಪಲಿಲ್ಲ. ಇದರಿಂದಾಗಿ ಎರಡೂ ಗುಂಪುಗಳ ಮಧ್ಯೆ ಜಗಳ ನಡೆಯಿತು. ವಧುವಿನ ಮನೆಯವರು ಮತ್ತು ವರನ ಕುಟುಂಬದವರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದರು. ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ ಎಂದು ತಿಳಿದ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿದರು.. ಪೊಲೀಸರು ಆಗಮಿಸಿದಾಗ ವಧು ವರನ ಮನೆಗೆ ಹೋಗಲು ನಿರಾಕರಿಸಿದಳು. ನಂತರ ವಧು-ವರರಿಬ್ಬರೂ ಮದುವೆಯನ್ನು ರದ್ದುಗೊಳಿಸಿದರು.