ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಆಧಾರ್ ಕಾರ್ಡ್ ಹೊಂದುವುದು ಬಹುಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಅತ್ಯಮೂಲ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಗಳನ್ನ ಹೊಂದಿರುತ್ತಾರೆ.
2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಹಾಗೂ ಇದರಲ್ಲಿರುವ 12 ಅಂಕಿಗಳ ಸಂಖ್ಯೆ ಪ್ರತಿಯೊಬ್ಬ ಭಾರತೀಯನ ಗುರುತಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್ ಬಂದು 14 ವರ್ಷಗಳಾಗಿವೆ.
ಹೀಗಿರುವಾಗ ಎಲ್ಲಾದರು ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು?, ಇದನ್ನು ಮರಳಿ ಪಡೆಯುವುದು ಹೇಗೆ? ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಕಳೆದು ಹೋಯಿತು ಎಂದಾದರೆ ಮರಳಿ ಪಡೆಯಲು ಕೇಂದ್ರ ಸರ್ಕಾರ ಇತರೆ ಸೌಲಭ್ಯವನ್ನು ನೀಡಿದೆ. ನೀವು ಸುಲಭವಾಗಿ ಅಧಿಕೃತ ಯುಐಡಿಎಐ ವೆಬ್ ಸೈಟ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ ಮರಳಿ ಪಡೆಯಬಹುದು. ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕವೂ ಯುಐಡಿಎಐನ ಅಧಿಕೃತ ವೆಬ್ ಸೈಟ್‌ನಿಂದ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ಆದರೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀಡಿದರೇ ಮಾತ್ರ ಒಟಿಪಿ ಬರುತ್ತದೆ. ಅದಕ್ಕೆ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ನಂಬರ್ ಲಿಂಕ್ ಆಗಿದ್ದರೇ ನೋಂದಣಿ ಸಂಖ್ಯೆ ಅಗತ್ಯವಿಲ್ಲ.
ಇಲ್ಲಿ ಒಟಿಪಿ ಲಿಂಕ್ ಮಾಡಿದ ಮೊಬೈಲ್ ನಂಬರ್ ಗೆ ಅಥವಾ ಇ-ಮೇಲ್ ಐಡಿಗೆ ಮಾತ್ರ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೀವು ಧೃಡಿಕರಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಆಧಾರ್ ಸಂಖ್ಯೆಯನ್ನು ನಿಮ್ಮ ಆಧಾರ್ ಡೌನ್ ಲೋಡ್ ಮಾಡಲು ಅಥವಾ ನಿಮ್ಮ ಆಧಾರ್ ನ ಮರುಮುದ್ರಣಕ್ಕೆ ಆದೇಶಿಸಬಹುದು. ಇದಕ್ಕೂ ಮುನ್ನ ಆಧಾರ್ ಕಳೆದುಕೊಂಡ ತಕ್ಷಣ ಅದನ್ನು ಲಾಕ್ ಮಾಡುವುದು ಮುಖ್ಯ.